ಸಿದ್ದರಾಮಯ್ಯ ಆರೋಪದಲ್ಲಿ ಗುಲಗಂಜಿಯಷ್ಟು ಸತ್ಯಾಂಶವಿಲ್ಲ: ಬಿಜೆಪಿ

ಬೆಂಗಳೂರು, ಅಕ್ಟೋಬರ್‌ 30: ಸಿದ್ದರಾಮಯ್ಯರವರು ತಮ್ಮ ವೈಫಲ್ಯಗಳನ್ನು ಮರೆಮಾಚಲು ಜನರ ಗಮನ ಬೇರೆಡೆ ಸೆಳೆಯುವ ಸರ್ಕಸ್ಸಿನಲ್ಲಿ ತೊಡಗಿದ್ದಾರೆ. ಜನರ ಗಮನವನ್ನು ಉದ್ದೇಶಪೂರ್ವಕವಾಗಿ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕಳೆದ ಒಂಭತ್ತು ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ನಕಾಶೆಯನ್ನೇ ಬದಲಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಬಲಿಷ್ಠ ಮಾಡಿದ ಪ್ರಧಾನಿ ಶ್ರೀನರೇಂದ್ರ ಮೋದಿ ಅವರ ಸರ್ಕಾರ ಕರ್ನಾಟಕವನ್ನು ಕಡೆಗಣಿಸಿದೆ ಎಂಬ ಆರೋಪವೇ ಹಾಸ್ಯಾಸ್ಪದ. ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿರುವ ಅಂಶಗಳಲ್ಲಿ ಸುಳ್ಳುಗಳೇ ತುಂಬಿವೆ ಹೊರತು ಗುಲಗಂಜಿಯಷ್ಟೂ ಸತ್ಯಾಂಶವಿಲ್ಲ ಎಂದು ಹೇಳಿದೆ.

There is no truth in Siddaramaiahs allegations: BJP

15ನೇ ಹಣಕಾಸು ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ ₹5495 ಕೋಟಿ ವಿಶೇಷ ಅನುದಾನವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿರಸ್ಕರಿಸಿದ್ದಾರೆಂದು ಸಿದ್ದರಾಮಯ್ಯರವರು ಹೇಳಿರುವುದೇ ಅತ್ಯಂತ ದೊಡ್ಡ ಸುಳ್ಳು, ಅಸಲಿಗೆ 15ನೇ ಹಣಕಾಸು ವರದಿಯಲ್ಲಿ ಈ ರೀತಿಯ ಅಂಶಗಳೇ ಪ್ರಸ್ತಾಪವಾಗಿಲ್ಲ ಎಂದು ಬಿಜೆಪಿ ಹೇಳಿದೆ.

ತಮ್ಮ ಆಸ್ಥಾನ ಕಲಾವಿದರಿಂದ, ವಂಧಿಮಾಗದರಿಂದ, ಹೊಗಳು ಭಟ್ಟರಿಂದ ತಾವೊಬ್ಬ ಶ್ರೇಷ್ಠ ಆರ್ಥಿಕ ತಜ್ಞ ಎಂದು ಕರೆಸಿಕೊಳ್ಳುವ, 13 ಬಜೆಟ್‌ ಮಂಡಿಸಿದ್ದೇನೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಸಿದ್ದರಾಮಯ್ಯರವರಿಗೆ ಸಾರ್ವಜನಿಕ ಹಣಕಾಸಿನ ಸ್ಥಿತಿಗತಿಯ ಬಗ್ಗೆ ಕನಿಷ್ಟ ಜ್ಞಾನವಿಲ್ಲದಿರುವುದು ಅತ್ಯಂತ ಬೇಸರದ ಸಂಗತಿ ಎಂದು ವ್ಯಂಗ್ಯವಾಡಿದೆ.

ಕಾಂಗ್ರೆಸ್‌ ಆಡಳಿತ ಹಿಡಿದ ರಾಜ್ಯಗಳಲ್ಲೆಲ್ಲಾ ಅಲ್ಲಿನ ಅರ್ಥಿಕತೆ ಅಧೋಗತಿಗಿಳಿದಿದೆ. ಈ ಬಗ್ಗೆ ಅಂಕಿ-ಅಂಶಗಳೇ ಸತ್ಯ ಹೇಳುತ್ತವೆ. ಆರ್ಥಿಕ ತಿಳುವಳಿಕೆ ಇರುವ ಯಾರಿಗೇ ಆದರೂ ತಿಳಿಯುವ ಈ ಸತ್ಯ ಸಿದ್ದರಾಮಯ್ಯರವರ ಕಣ್ಣಿಗೇ ಬೀಳುತ್ತಿಲ್ಲ ಎಂಬುದೇ ಬೃಹನ್ನಾಟಕ. ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ಹೊತ್ತವರು ಈ ರೀತಿ ಬಹಿರಂಗವಾಗಿ ಸುಳ್ಳು ನುಡಿಯುವುದು ಎಷ್ಟರ ಮಟ್ಟಿಗೆ ಸರಿ.. ಎಂದು ಪ್ರಶ್ನಿಸಿದೆ.

ಸಿದ್ದರಾಮಯ್ಯರವರು ಕೇಂದ್ರ ಸರ್ಕಾರದ ಮೇಲೆ ನಿರಂತರ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಹಿಂದಿನ ಅಸಲಿಯತ್ತೇ ಬೇರೆ. ಕರ್ನಾಟಕದಲ್ಲಿ ಚುನಾವಣೆಯನ್ನು ಗೆಲ್ಲಬೇಕೆಂಬ ಏಕೈಕ ಉದ್ದೇಶದಿಂದ ಬೇಕಾಬಿಟ್ಟಿ ಸುಳ್ಳುಗಳನ್ನು ಹೇಳಿ, ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೇನೋ ಬಂದರು, ಆದರೆ ಅವರು ನೀಡಿದ ಭರವಸೆಗಳನ್ನು ಈಡೇರಿಸಲು ಸಂಪೂರ್ಣ ವಿಫಲರಾಗಿದ್ದಾರೆ.

ಹಾಗಾಗಿ ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂಥ ಆಡಳಿತ ವಿರೋಧಿ ಅಲೆ ಸಿದ್ದರಾಮಯ್ಯರವರ ಸರ್ಕಾರದ ವಿರುದ್ಧ ಐದೇ ತಿಂಗಳಲ್ಲಿ ಎದ್ದಿದೆ. ಈ ಆಡಳಿತ ವಿರೋಧಿ ಅಲೆಯನ್ನು ಮರೆಮಾಚಲು ಅವರು ಹೂಡಿರುವ ಹಲವು ತಂತ್ರಗಳ ಪೈಕಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದೂ ಒಂದು. ಕೈಲಾಗದವರು ಹುಲಿ ಉಗುರಿನಿಂದ ಮೈ ಪರಿಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದೆ.

ಕೇಂದ್ರ ಸರ್ಕಾರದ ಮೇಲೆ ಅಡಿಗಡಿಗೆ ಆರೋಪ ಮಾಡುವ ಮುನ್ನ ಸಿಎಂ ಸಿದ್ದರಾಮಯ್ಯರವರು ಕೊಂಚ ಸತ್ಯಾಂಶಗಳನ್ನು ತಿಳಿದುಕೊಳ್ಳುವುದು ಒಳಿತು. 2014 ರಿಂದ ಜುಲೈ 2023ರ ವರೆಗೆ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬಂದ ಒಟ್ಟು ತೆರಿಗೆ ಹಂಚಿಕೆ ಪ್ರಮಾಣ ₹2,66,825 ಕೋಟಿ. ಇದು ಕಾಂಗ್ರೆಸ್‌ ನೇತೃತ್ವದ ಯು.ಪಿ.ಎ. ಸರ್ಕಾರದ 2004-2014 ರ ಅವಧಿಗೆ ಹೋಲಿಸಿದರೆ ಕರಾರುವಾಕ್ಕಾಗಿ 3.2 ಪಟ್ಟು ಹೆಚ್ಚು!!

ಇದಲ್ಲದೆ 2014 ರಿಂದ 2023 ರ ಆರ್ಥಿಕ ವರ್ಷದವರೆಗೆ ಕೇಂದ್ರ ಸರ್ಕಾರದಿಂದ ಕರ್ನಾಟಕ ಪಡೆದ ಒಟ್ಟು ಅನುದಾನ ₹2,08,832 ಕೋಟಿ. ಆದರೆ 2004-2014 ರ ಯು.ಪಿ.ಎ ಅವಧಿಯಲ್ಲಿ ಕರ್ನಾಟಕಕ್ಕೆ ದೊರೆತಿದ್ದ ಅನುದಾನ ಕೇವಲ ₹60,779 ಕೋಟಿ. ಅಲ್ಲಿಗೆ ಬಿಜೆಪಿ ಅವಧಿಯಲ್ಲಿ ಕರ್ನಾಟಕಕ್ಕೆ ಹೆಚ್ಚು ಸಿಕ್ಕಂತಾಯಿತೋ ಅಥವಾ ಕಾಂಗ್ರೆಸ್‌ ಅವಧಿಯಲ್ಲಿಯೋ ಎಂಬುದನ್ನು ಆರ್ಥಿಕ ತಜ್ಞ ಸಿದ್ದರಾಮಯ್ಯರವರು ತಿಳಿದುಕೊಳ್ಳಬೇಕು ಎಂದು ತಿಳಿಸಿದೆ.

ಸ್ವಾಮಿ ಸಿದ್ದರಾಮಯ್ಯರವರೇ, ಆಧಾರರಹಿತ ಸುಳ್ಳು ಆರೋಪ ಮಾಡುವುದು ನಿಮಗೆ ಅಭ್ಯಾಸವಾಗಿದೆ ನಿಜ. ಆದರೆ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ನೀವು ಕೂತಿರುವ ಸ್ಥಾನಕ್ಕೆ ಘನತೆ ತರುವಂಥದ್ದಲ್ಲ.

ಕರ್ನಾಟಕದ ಜನತೆಗೆ ನೀವು ನೀಡಿರುವ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಮೊದಲು ಈಡೇರಿಸಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗಿ, ನಿಮ್ಮನ್ನು ಮನೆಗೆ ಕಳುಹಿಸಲು ನಿಮ್ಮ ಪಕ್ಷದಲ್ಲಿಯೇ ದೊಡ್ಡ ಸಾಲು ಈಗಾಗಲೇ ಚುರುಕಾಗಿದೆ. ನಿಮ್ಮೆಲ್ಲಾ ವೈಫಲ್ಯಗಳ ಕಾರಣ ಶಾಸಕರ ಕ್ಷೇತ್ರಗಳಿಗೆ ಅನುದಾನ ಶೂನ್ಯವಾಗಿದೆ. ಮೊದಲು ರಾಜ್ಯದ ಹಣಕಾಸು ಸ್ಥಿತಿ ಸರಿಪಡಿಸಿ. ನಿಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರಿಗೆ ಮೋಸ ಮಾಡಬೇಡಿ ಎಂದು ಬಿಜೆಪಿ ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+