DCM DK Shivakumar: ಬೆಂಗಳೂರಿನ ಅಧಿಕಾರಿಗಳ ಜೊತೆ ಸುರ್ಜೆವಾಲ ಸಭೆ: ಡಿ ಕೆ ಶಿವಕುಮಾರ್ ಹೇಳಿದೇನು?
ಬೆಂಗಳೂರು, ಜೂನ್ 14: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರಿಗೂ ಹಾಗೂ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಅಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಭಾಗಿಯಾಗಿದ್ದರ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು ನೀಡುವುದಾಗಿ ವಿಚಾರವಾಗಿ ಮಾತನಾಡಿದ ಅವರು, ನಾನು ಹಾಗೂ ಸುರ್ಜೆವಾಲ ಅವರು ಕಾಫಿ ಕುಡಿಯುತ್ತಿರುವಾಗ, ನಾನು ನಗರ ಪ್ರದಕ್ಷಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಾರಣ, ನನ್ನನ್ನು ಕರೆದುಕೊಂಡು ಹೋಗಲು ಅಧಿಕಾರಿಗಳು ಬಂದಿದ್ದರು ಅಷ್ಟೇ. ಆ ಸಮಯದಲ್ಲಿ ಸುರ್ಜೆವಾಲ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ.

ಬಿಜೆಪಿಯವರು ರಾಜ್ಯಪಾಲರಿಗಾದರೂ ದೂರು ನೀಡಲಿ. ಇಂತಹ ಸಭೆಗಳನ್ನು ಅವರು ಎಷ್ಟು ನಡೆಸಿದ್ದಾರೆ ಎಂದು ಗೊತ್ತಿದೆ. ಸಭೆ ಮಾಡಲಾಗಿದೆ ಎಂದು ಜಮೀರ್ ಅವರು ತಮ್ಮ ಖುಷಿಗೆ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿಗೆ ಸೋಲಾಗಿದೆ ಎಂಬ ಸಿ.ಟಿ ರವಿ ಹಾಗೂ ಪ್ರತಾಪ್ ಸಿಂಹ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ಪಕ್ಷದ ಆಂತರಿಕ ವಿಚಾರ. ಅವರು ಏದರೂ ಮಾತಾಡಿಕೊಳ್ಳಲಿ ಎಂದು ತಿಳಿಸಿದರು.
ಸೋಲಾರ್ ಪಾರ್ಕ್ ನಲ್ಲಿ ಸ್ಥಳೀಯರಿಗೆ ಕೆಲಸ ಸಿಗುತ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಈ ಭಾಗದ ಜನರಿಗೆ ಇಲ್ಲೇ ಕೌಶಲ್ಯ ತರಬೇತಿ ಆರಂಭಿಸಲು ಸಚಿವರು ಸಲಹೆ ನೀಡಿದ್ದಾರೆ. ಆಮೂಲಕ ಈ ಭಾಗದ ಸ್ಥಳೀಯರಿಗೆ ತಾಂತ್ರಿಕವಾಗಿ ತರಬೇತಿ ನೀಡಲಾಗುವುದು. ಆನಂತರ ಉದ್ಯೋಗ ಸಿಗಲಿದೆ ಎಂದರು.
ಸೋಲಾರ್ ಪಾರ್ಕ್ ನಿಂದ ಉಷ್ಣಾಂಶ ಹೆಚ್ಚಾಗಿ ಈ ಭಾಗದ ಜನರ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ನಿಮ್ಮ ಕೆಟ್ಟ ಕಲ್ಪನೆ ಎಂದು ತಿಳಿಸಿದ ಅವರು, ನಾನು, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಜತೆ ಪಾವಗಡದ ಸೋಲಾರ್ ಪಾರ್ಕ್ ಗೆ ಭೇಟಿ ನೀಡಿ ಹೆಲಿಕಾಪ್ಟರ್ ಮೂಲಕ ಸಂಪೂರ್ಣ ಪ್ರದೇಶ ಸುತ್ತು ಹಾಕಿ ಪರಿಶೀಲನೆ ನಡೆಸಿದ್ದೇನೆ.
ಈ ಸೋಲಾರ್ ಪಾರ್ಕ್ ಗೆ ಜಮೀನು ಕೊಟ್ಟ ರೈತರಿಗೆ ನಾವು ಅಗತ್ಯ ದಾಖಲೆ ಮಾಡಿ ಕೊಟ್ಟಿದ್ದು, ಅವರಿಗೆ ಪ್ರತಿ ತಿಂಗಳು ಸರಿಯಾಗಿ ಬಾಡಿಗೆ ತಲುಪುತ್ತಿದೆ. ಹೀಗಾಗಿ ಅವರು ಸಂತೋಷವಾಗಿದ್ದಾರೆ. ರಾಜ್ಯದ ಉದ್ದಗಲಕ್ಕೂ ಅಲ್ಲೇ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಿ ಅಲ್ಲಿನ ಸ್ಥಳೀಯ ರೈತರ ಪಂಪ್ ಸೆಟ್ ಗೆ ನೀಡಲು ಯೋಜನೆ ಕೈಗೊಳ್ಳಲಾಗುವುದು. ಆಮೂಲಕ ವಿದ್ಯುತ್ ವಿತರಣೆ ವೇಳೆ ಆಗುವ ನಷ್ಟವನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ.
ಈ ಸೋಲಾರ್ ಪಾರ್ಕ್ ವಿಸ್ತರಣೆ ಕುರಿತು ಸಚಿವ ಜಾರ್ಜ್ ಅವರಿಗೆ ಸಲಹೆ ಬಂದಿದೆ. ಈ ಭಾಗದ ರೈತರು ಇನ್ನು 10 ಸಾವಿರ ಎಕರೆ ಭೂ ಪ್ರದೇಶ ನೀಡಲು ಮುಂದೆ ಬಂದಿದ್ದಾರೆ. ಅದನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಲು ಸಚಿವರು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.












Click it and Unblock the Notifications