ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವ ಮಾತೇ ಇಲ್ಲ- ವಿಪಕ್ಷಗಳಿಗೆ ಖಡಕ್ ಸಂದೇಶ ಕೊಟ್ಟ ಡಿಕೆಶಿ
ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಪಕ್ಷಗಳಿಗೆ ಖಡಕ್ ಸಂದೇಶ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಕೈಬಿಡುವ ವಿಚಾರವಾಗಿ ಮಾತನಾಡಿದ ಅವರು, 'ಗ್ಯಾರಂಟಿಯಿಂದಾಗಿ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಅನ್ನೋದು ವಿಪಕ್ಷಗಳ ಹುನ್ನಾರ' ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಪಂಚ ಗ್ಯಾರಂಟಿಯಿಂದಾಗಿ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂಬ ಬಿಜೆಪಿ ಆರೋಪಕ್ಕೆ ತಕ್ಕ ಉತ್ತರ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, 'ಆದಾಯ ಹೆಚ್ಚಿರುವ ಕಡೆ ಪರಿಶೀಲನೆ ಮಾಡ್ತೀವಿ, ದೂರು ನೀಡಿದಲ್ಲಿ ಮಾತ್ರ ಪರಿಶೀಲನೆ ಮಾಡಲಾಗುತ್ತದೆ. ನಾನು ಪಕ್ಷದ ಅಧ್ಯಕ್ಷರಾಗಿದ್ದೇನೆ. ಯಾವ ಕಾರಣಕ್ಕೂ ಗ್ಯಾರಂಟಿ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಆದಾಯ ಹೆಚ್ಚಿಗೆ ಇರುವವರು ಗ್ಯಾರಂಟಿ ಸವಲತ್ತು ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ದೂರು ಇದೆ. ಅಂತ ಕಡೆ ಮಾತ್ರ ಪರಿಶೀಲನೆ ಮಾಡುತ್ತೇವೆ. ಪಂಚ ಗ್ಯಾರಂಟಿಗಳಿಗೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದೇವೆ' ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಸರ್ಕಾರ ಇದನ್ನು ಬಡವರಿಗಾಗಿ ಮೀಸಲಾಗಿ ಇಟ್ಟಿದೆ. ರಾಮಲಿಂಗಾ ರೆಡ್ಡಿ ಇದಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಖರೀದಿ ಮಾಡಿದ್ದಾರೆ. ಉಚಿತ ಬಸ್ ಪ್ರಯಾಣದಿಂದಾಗಿ ಜನರ ಪ್ರವಾಸ, ನೆಂಟರ ಭೇಟಿ, ವೈಹಿವಾಟು ಎಲ್ಲವೂ ನಡೆಯುತ್ತಿವೆ. ವಿರೋಧ ಪಾರ್ಟಿ ಅವರಿಗೆ ಪಂಚ ಗ್ಯಾರಂಟಿ ಬಗ್ಗೆ ಹೊಟ್ಟೆಕಿಚ್ಚು ಇದೆ. ಇಂಥಹ ಯೋಜನೆ ನಾವು ತರಲು ಆಗಲಿಲ್ಲ ಎನ್ನುವ ಬೇಸರವಿದೆ. ಹೀಗಾಗಿ ಗ್ಯಾರಂಟಿ ಬಗ್ಗೆ ಹೊಟ್ಟೆ ಉರಿ. ಇದೆಲ್ಲವೂ ಜನರಿಗೆ ಅರ್ಥ ಆಗುತ್ತದೆ. ಜನ ಯಾವಾಗ ಓಟ್ ಹಾಕಬೇಕೋ ಆಗ ಓಟ್ ಹಾಕುತ್ತಾರೆ ಅನ್ನೋ ನಂಬಿಕೆ ಇದೆ' ಎಂದು ಡಿಕೆ ಶಿವಕುಮಾರ್ ಹೇಳಿದರು.
ಈ ಬಗ್ಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, 'ಗ್ರಾಮೀಣ ಭಾಗದ ಜನರಿಗೆ ಪಂಚ ಗ್ಯಾರಂಟಿಗಳು ಬಹಳಷ್ಟು ಸಹಾಯವಾಗಿದೆ. ಯಾವ ಮಂತ್ರಿಗಳೂ ಇದರ ಬಗ್ಗೆ ಅಪಸ್ವರ ಎತ್ತಿಲ್ಲ. ಸಣ್ಣಪುಟ್ಟ ಮನಸ್ತಾಪಗಳಿಂದಾಗಿ ಗ್ಯಾರಂಟಿ ಕೈಬಿಡುವ ವಿಚಾರ ಇಲ್ಲ. ಇದು ಬಡವರಿಗೆ ಬದುಕು ಕಟ್ಟಿಕೊಡುವ ಕನಸು ಆಗಿದೆ. ನೌಕರಿ ಮಾಡುವ ಹೆಣ್ಣುಮಕ್ಕಳು ಉಚಿತ ಬಸ್‌ಗೆ ಹೋಗ್ತಾರೆ. ಅವರಲ್ಲಿ ಶ್ರೀವಂತರು ಯಾರು ಅಂತ ನಾವು ಕಂಡು ಹಿಡಿಯಲು ಸಾಧ್ಯ ಆಗಲ್ಲ. ಇಂತಹ ತೊಡಕುಗಳಿವೆ. ಆದರೆ ಅದನ್ನು ನಾವು ಪರಿಶೀಲನೆ ಮಾಡುತ್ತೇವೆ' ಎಂದರು.
ಅಷ್ಟಕ್ಕೂ ಗ್ಯಾರಂಟಿ ಯೋಜನೆಗಳನ್ನು ಕೈಬಿಡುವ ವಿಚಾರ ಬಂದಿದ್ದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ. ಕಾಂಗ್ರೆಸ್ ಪಂಚ ಗ್ಯಾರಂಟಿಗಳಿಗಾಗಿ ಎಂಟು ತಿಂಗಳ ವೆಚ್ಚ 36,000 ಕೋಟಿ ಎಂದು ಅಂದಾಜು ಮಾಡಿತ್ತು. ಆದರೆ ಈ ಎಂಟು ತಿಂಗಳಲ್ಲಿ ಒಟ್ಟು 45,500 ಕೋಟಿ ರೂಪಾಯಿ ಖರ್ಚು ಆಗಿದೆ. ಹೀಗಾಗಿ ಯಾವ ಗ್ಯಾರಂಟಿಗೆ ಹೆಚ್ಚು ಹಣ ಖರ್ಚು ಆಗುತ್ತಿದೆ ಎಂದು ಪರಿಶೀಲನೆ ಮಾಡಿ, ಸಾಧ್ಯವಾದರೆ ಅದನ್ನು ಪರಿಷ್ಕರಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.
ಆದರೆ ಕಾಂಗ್ರೆಸ್ ಈ ಬಗ್ಗೆ ಮಾತ್ರ ಎಲ್ಲೂ ಹೇಳಿಕೊಂಡಿಲ್ಲ. ದೂರು ಇರುವ ಕಡೆ ಮಾತ್ರ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದೆ.












Click it and Unblock the Notifications