ತಂದೆ-ತಾಯಿ ಸಲಹದ ಮಕ್ಕಳ ತಪ್ಪಿಗೆ ಪ್ರಾಯಶ್ಚಿತ್ತವೇ ಇಲ್ಲ: ಹೈಕೋರ್ಟ್ ತೀರ್ಪು
ಬೆಂಗಳೂರು, ಜುಲೈ, 14: ತಂದೆ, ತಾಯಿ ಸಲಹದ ಪುತ್ರರ ತಪ್ಪಿಗೆ ಪ್ರಾಯಶ್ಚಿತ್ತವೇ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, 84 ವರ್ಷದ ವೃದ್ಧ ತಾಯಿಯ ಜೀವನ ನಿರ್ವಹಣೆಗಾಗಿ ಮಾಸಿಕ 10 ಸಾವಿರ ರೂಪಾಯಿ ಪಾವತಿಸುವಂತೆ ಮೈಸೂರು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ರದ್ದು ಕೋರಿದ್ದ ಆಕೆಯ ಪುತ್ರರಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಅಲ್ಲದೆ, ಅನಗತ್ಯ ದಾವೆ ಹೂಡಿದ್ದಕ್ಕಾಗಿ ಅರ್ಜಿದಾರ ಪುತ್ರರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ. ಜಿಲ್ಲಾಧಿಕಾರಿಯ ಆದೇಶ ಪ್ರಶ್ನಿಸಿ ಮೈಸೂರಿನ ಎನ್.ಆರ್. ಮೊಹಲ್ಲಾ ಪ್ರದೇಶದ ನಿವಾಸಿ ಗೋಪಾಲ್ ಮತ್ತು ಮಹೇಶ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ.

ಈ ದಂಡದ ಮೊತ್ತವನ್ನು ಅರ್ಜಿದಾರರಿಬ್ಬರೂ ಒಟ್ಟಾಗಿ ತಮ್ಮ ವೃದ್ಧ ತಾಯಿಗೆ ಒಂದು ತಿಂಗಳೊಳಗೆ ಪಾವತಿಸಬೇಕು. ಒಂದು ವೇಳೆ ತಪ್ಪಿದರೆ ಹಣ ಪಾವತಿಸುವವರೆಗೂ ಪ್ರತಿದಿನ 100 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದೇ ವೇಳೆ ದುಡಿಯಲು ಸಮರ್ಥನಾದ ವ್ಯಕ್ತಿ ತನ್ನ ಪತ್ನಿಯನ್ನು ನೋಡಿಕೊಳ್ಳಬಹುದಾದರೆ, ಅವಲಂಬಿತ ತಾಯಿಯನ್ನೇಕೆ ನೋಡಿಕೊಳ್ಳಬಾರದು ಎಂದು ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ಇದೇ ವೇಳೆ ಯುವ ಪೀಳಿಗೆಯ ಒಂದು ವರ್ಗ ವಯಸ್ಸಾದ ಹಾಗೂ ಅನಾರೋಗ್ಯ ಪೀಡಿತ ಪಾಲಕರನ್ನು ನೋಡಿಕೊಳ್ಳಲು ವಿಫಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಸಹೋದರಿಯರ ಕುಮ್ಮಕ್ಕಿನಿಂದ ತಾಯಿ ಜೀವನಾಂಶ ಕೋರುತಿದ್ದಾರೆ ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರು ತಾವು ಮಾಡಿದ ಆರೋಪಕ್ಕೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಯಾವುದೇ ಭಾಗ ಕೋರಿಲ್ಲ. ಗಂಡು ಮಕ್ಕಳು ತ್ಯಜಿಸಿರುವ ತಾಯಿಯನ್ನು ಹೆಣ್ಣು ಮಕ್ಕಳು ನೋಡಿಕೊಂಡಿದ್ದಾರೆ. ಇಲ್ಲದಿದ್ದರೆ ತಾಯಿ ರಸ್ತೆಯ ಮೇಲಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿತು.
ಮತ್ತೊಂದೆಡೆ ತಾಯಿಗೆ 10 ಸಾವಿರ ರೂಪಾಯಿ ಜೀವನಾಂಶ ನೀಡುವುದು ಜಾಸ್ತಿ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ನಾವು ರೊಟ್ಟಿಗಿಂತ ರಕ್ತ ದುಬಾರಿಯಾಗಿರುವ ಕಾಲದಲ್ಲಿ ಜೀವಿಸುತ್ತಿದ್ದೇವೆ. ಹಣವು ಖರೀದಿಯ ಶಕ್ತಿಯನ್ನು ಕಳೆದುಕೊಂಡಿದೆ. ದಿನ ದಿನಕ್ಕೆ ಬೆಲೆಗಳು ಏರುತ್ತಿವೆ. ಹೀಗಿರುವಾಗ ಹತ್ತು ಸಾವಿರ ಹಣವನ್ನು ಹೆಚ್ಚು ಎಂಬುದಾಗಿ ಹೇಳಲಾಗದು.
ದೇಹ ಮತ್ತು ಆತ್ಮವನ್ನು ಹಿಡಿದಿಡಲು ಅಗತ್ಯಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ. ಆದರೆ, ಜೀವನಾಂಶವನ್ನು ಹೆಚ್ಚಳ ಮಾಡುವ ಬಗ್ಗೆ ತಾಯಿಯಿಂದ ಯಾವುದೇ ಮನವಿ ಇಲ್ಲ. ಇದರಿಂದ ಜೀನವಾಂಶ ಹೆಚ್ಚಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ
ವೃದ್ಧೆ ತಾಯಿ ವೆಂಕಟಮ್ಮ (84) ಅವರ ಜೀವನ ನಿರ್ವಹಣೆಗಾಗಿ ತಲಾ ಐದು ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಆಕೆಯ ಪುತ್ರರಾದ ಅರ್ಜಿದಾರರಿಗೆ ಮೈಸೂರಿನ ಉಪ ವಿಭಾಗಾಧಿಕಾರಿಯು ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯಡಿ ಆದೇಶಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಜಿಲ್ಲಾಧಿಕಾರಿ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಜಾಗೊಳಿಸಿದ್ದ ಜಿಲ್ಲಾಧಿಕಾರಿ, ಜೀವನ ಸಂಧ್ಯಾಕಾಲದಲ್ಲಿರುವ ತಾಯಿಗೆ ಪ್ರತಿ ತಿಂಗಳು ತಲಾ 10 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ನಿರ್ದೇಶಿಸಿದ್ದರು. ಈ ಎರಡೂ ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ವೆಂಕಟಮ್ಮ ಅವರ ಪುತ್ರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಸಹ ಅರ್ಜಿ ವಜಾಗೊಳಿಸಿ, ಜಿಲ್ಲಾಧಿಕಾರಿಯ ಆದೇಶವನ್ನು ಪುರಸ್ಕರಿಸಿದೆ.












Click it and Unblock the Notifications