Karnataka BJP State President: ಒಲಿಯುತ್ತಾ ರಾಜ್ಯಾಧ್ಯಕ್ಷ ಸ್ಥಾನ: ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದೇನು?
ಶಿವಮೊಗ್ಗ,ಸೆಪ್ಟೆಂಬರ್ 16: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ಬಿಜೆಪಿ ಪಾಳಯದಲ್ಲಿ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಶಾಸಕ ಬಿ ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಹೌದು, ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಯಾವುದೇ ಸ್ಥಾನಮಾನ ನೀಡುವ ವಿಚಾರ ಕೇಂದ್ರದ ವರಿಷ್ಠರಿಗೆ ಬಿಟ್ಟದ್ದು. ಸದ್ಯ ಶಿಕಾರಿಪುರದ ಶಾಸಕನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.

ಸಚಿವ ಡಿ ಸುಧಾಕರ್ ಮೇಲೆ ಎಫ್ಐಆರ್ ದಾಖಲು ವಿಚಾರ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪದಲ್ಲಿ ಹುರುಳಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಸಚಿವರು ತಪ್ಪೇ ಮಾಡಿಲ್ಲ ಎಂದು ಕ್ಲೀನ್ ಚಿಟ್ ಕೊಟ್ಟಿದ್ದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಒಂದು ಕಡೆ ದಲಿತರ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ಸಿಗರ ಕಪಟ ನಾಟಕ ರಾಜ್ಯದ ಜನತೆಗೆ ಗೊತ್ತಾಗಿದೆ. ಸಚಿವ ಸುಧಾಕರ್ ಅವರ ಬಂಧನ ಮಾಡಲು ಯಾಕೆ ಇಷ್ಟು ತಡ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ದಲಿತರನ್ನು ಅವಹೇಳನ ಮಾಡುವ ಸಚಿವರನ್ನು ಇಟ್ಟುಕೊಂಡು ಸರ್ಕಾರ ನಡೆಸುತ್ತಾರೆಂದರೆ ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ರಾಜ್ಯ ಸರ್ಕಾರ ಗ್ಯಾರಂಟಿಗಳ ಭರಾಟೆಯಲ್ಲಿ ಬರಗಾಲ ಘೋಷಣೆ ಮಾಡಲು ಮೀನಾ ಮೇಷ ಎಣಿಸುತ್ತಿದೆ. ರಾಜ್ಯದಲ್ಲಿ ಬರಗಾಲ ಸಂಭವಿಸಿದ ಹಿನ್ನೆಲೆ ರಾಜ್ಯದ ಜನತೆ ಶಾಪ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ 194 ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಘೋಷಣೆ ಮಾಡಿ ಕೇಂದ್ರಕ್ಕೆ ಕಳಿಸಿದರೆ ಸಾಲದು. ರಾಜ್ಯ ಸರ್ಕಾರದ ಕರ್ತವ್ಯವೇನು ನಿಮ್ಮ ಕರ್ತವ್ಯದಿಂದ ಓಡಿ ಹೋಗುವ ಕೆಲಸ ಮಾಡಬೇಡಿ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ತೋರಿಸಿ ಮಾಡುವ ಕೆಲಸ ಬಿಟ್ಟು ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಶೋಭೆ ತರುವುದಿಲ್ಲ. ಕೇಂದ್ರ ಸರ್ಕಾರ ಏನ್ ಡಿ ಆರ್ ಎಸ್ ನಿಯಮಾವಳಿಗಳನ್ನು ಸಡಿಲಗೊಳಿಸಬೇಕೆಂದು ಪತ್ರ ಬರೆಯುತ್ತೀರಾ.ಆದರೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ. ಬಿಎಸ್ ಯಡಿಯೂರಪ್ಪ ಅವರು ಅಧಿಕಾರಾವಧಿಯಲ್ಲಿ ಅತಿವೃಷ್ಟಿ ಆದಾಗ ಕೇಂದ್ರ ಪರಿಹಾರಕ್ಕೆ ಕಾಯದೆ ಮನೆ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರದ ಒಂದೂಕಾಲು ಲಕ್ಷ ಪರಿಹಾರ ದೊಂದಿಗೆ ರಾಜ್ಯದಿಂದ ಮೂರು ಮುಕ್ಕಾಲು ಲಕ್ಷ ಪರಿಹಾರ ನೀಡಿದ್ದರು ಎಂದರು.












Click it and Unblock the Notifications