ಗ್ರಾಮ ಪಂಚಾಯತಿ: ಇಂದು ಮೊದಲ ಹಂತದ ಚುನಾವಣೆ, ಮತದಾನ ಆರಂಭ!
ಬೆಂಗಳೂರು, ಡಿ. 22: ಇಂದು ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಡಿಸೆಂಬರ್ 22ರಂದು ಮೊದಲ ಹಂತದಲ್ಲಿ ಹಾಗೂ 27ರಂದು ಎರಡನೇ ಹಂತದಲ್ಲಿ ಗ್ರಾ.ಪಂ. ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ.
ಇದು ಪಕ್ಷಾತೀತವಾದ ಚುನಾವಣೆ ಆಗಿದ್ದರೂ, ರಾಜಕೀಯ ಪಕ್ಷಗಳ ಚಿಹ್ನೆ ಇಲ್ಲದೆ ಸಾಮಾನ್ಯ ಚಿಹ್ನೆಗಳ ಮೇಲೆ ನಡೆದಯುತ್ತಿದೆ. ಆದರೂ ಕೂಡ ಮೂರು ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಪರೋಕ್ಷವಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ರಾಜಕೀಯ ಪಕ್ಷಗಳು ತಮ್ಮ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದರ ಫಲಿತಾಂಶ ಮುಂದೆ ಬರಲಿರುವ ತಾ.ಪಂ., ಜಿ.ಪಂ., ಲೋಕಸಭಾ ಹಾಗೂ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ. ಹೀಗಾಗಿ ಯಾವುದೇ ಚುನಾವಣೆಗೆ ಕಮ್ಮಿ ಇಲ್ಲದಂತೆ ಚುನಾವಣೆ ರಂಗೇರಿದೆ.
ಮೊದಲ ಹಂತದಲ್ಲಿ 117 ತಾಲ್ಲೂಕುಗಳಿಲ್ಲಿ ಲೋಕಲ್ ಪೈಟ್ ನಡೆಯಲಿದೆ. 48,048 ವಾರ್ಡ್‌ಗಳ ಸ್ಥಾನಗಳಿಗೆ ಹಣಾಹಣಿ ನಡೆಯಲಿದ್ದು, ಒಟ್ಟು 23,706 ಮತಗಟ್ಟೆಗಳಲ್ಲಿ 1,17,383 ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 4,377 ಅಭ್ಯರ್ಥಿಗಳು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ.

ಮತದಾನ ವೇಳೆ: (ಡಿ.22) ಬೆಳಿಗ್ಗೆ 7 ರಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ. ಮೊದಲ ಹಂತದ ಪಂಚಾಯಿತಿ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದು, ಕೋವಿಡ್ ಪಾಸಿಟಿವ್ ಇರುವವರಿಗೆ ಕಡೆಯ ಒಂದು ಗಂಟೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದೆ. ಒಟ್ಟು ನಾಳೆ 3019 ಗ್ರಾಮ ಪಂಚಾಯತಿ ಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ 24 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಮತದಾರರು ಹಲವು ಕಾರಣಗಳಿಂದ ಚುನಾವಣೆಗೆ ಬಹಿಷ್ಕಾರ ಮಾಡಿದ್ದಾರೆ.












Click it and Unblock the Notifications