ನಾಳೆ ರಾಜ್ಯಾದ್ಯಂತ ಪ್ರತಿಭಟನೆ; ಯಾಕೆ?
ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಮೇರಿಕಾ ಪ್ರವಾಸದಲ್ಲಿದ್ದಾರೆ. ಈ ವೇಳೆ ವಿದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಭಾರತದಲ್ಲಿನ ಮೀಸಲಾತಿ ರದ್ದು ಮಾಡುವ ವಿಚಾರವಾಗಿ ರಾಹುಲ್ ಗಾಂಧಿ ಸಂವಿಧಾನ ವಿರೋಧಿಯಾಗಿ ಮಾತನಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಇನ್ನು ರಾಹುಲ್ ಗಾಂಧಿ ಅವರ ಹೇಳಿಕೆ ಖಂಡಿಸಿ ನಾಳೆ ಬಿಜೆಪಿ ಪಕ್ಷವು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ಮಾಡಲು ಸಿದ್ಧವಾಗಿದೆ.

ಅಮೇರಿಕಾದ ವಾಷಿಂಗ್ಟನ್ ಡಿ.ಸಿ ನಗರದಲ್ಲಿ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ಭಾರತದಲ್ಲಿ ಮೀಸಲಾತಿ ತೆಗೆದು ಹಾಕುವ ಕುರಿತಾಗಿ ಚಿಂತನೆ ನಡೆಸಬಹುದು. ಆದರೆ, ಅದಕ್ಕೂ ಮುನ್ನ ಭಾರತ ದೇಶವು ನ್ಯಾಯಯುತ ಸ್ಥಳವಾಗಿ ಬದಲಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಭಾರತ ದೇಶದಲ್ಲಿ ಶೇ 90ರಷ್ಟು ಒಬಿಸಿ, ದಲಿತ ಹಾಗೂ ಆದಿವಾಸಿಗಳಿದ್ದಾರೆ. ಹೀಗಾಗಿ ಜಾತಿ ಗಣತಿಯಂತಹ ಸರಳ ಪ್ರಯತ್ನವನ್ನ ನಾವು ಮಾಡಲೇಬೇಕು. ಹಿಂದುಳಿದವರು, ದಲಿತರು ಹಾಗೂ ಕೆಳವರ್ಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಬೇಕು. ದೇಶದ ಪ್ರಮುಖ ಉದ್ಯಮಗಳಲ್ಲಿ ಇಷ್ಟು ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯಗಳ ಜನ ಮಾಲೀಕರಾಗಿರುವ ನಿದರ್ಶನಗಳಿಲ್ಲ. ಮಾಧ್ಯಮಗಳಲ್ಲೂ ಈ ಸಮುದಾಯಗಳ ಶೇರ್ ಶೂನ್ಯ ಎಂದು ವಿವರಿಸಿದ್ದರು.
ಇನ್ನು ರಾಹುಲ್ ಗಾಂಧಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿ ಬಿಜೆಪಿ ಪಕ್ಷದ ನಾಯಕರು ನಾಳೆ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರಿಗೆ ಕರೆ ನೀಡಿದ್ದು, ಕಾಂಗ್ರೆಸ್ ಪಕ್ಷದ ಮೀಸಲಾತಿ ವಿರೋಧಿ ನಿಲುವು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತಿದ್ದೇವೆ. ರಾಹುಲ್ ಗಾಂಧಿ ಅಮೆರಿಕ ಪ್ರವಾಸದಿಂದ ಭಾರತಕ್ಕೆ ವಾಪಸ್ ಆಗುವ ಮುನ್ನ ಕಾಂಗ್ರೆಸ್ ಪಕ್ಷ ಕ್ಷಮೆ ಕೇಳಬೇಕು ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಮಾತಿನಿಂದ ಮೀಸಲಾತಿ ಅಪಾಯಕ್ಕೆ ಸಿಲುಕಿದೆ. ರಾಹುಲ್ ಹೇಳಿಕೆಯೂ ಕಾಂಗ್ರೆಸ್ ಪಕ್ಷದ ಈ ಮನಸ್ಥಿತಿಯನ್ನು ತೋರಿಸುತ್ತದೆ. ಇಲ್ಲಿ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸಂವಿಧಾನದ ಕುರಿತು ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಆದರೆ ಈಗ ರಾಹುಲ್ ಗಾಂಧಿ ಹೇಳಿಕೆಯನ್ನು ಸಿದ್ದರಾಮಯ್ಯ ಖಂಡಿಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇರುವವರೆಗೂ ಮೀಸಲಾತಿಯನ್ನು ಯಾರೂ ರದ್ದು ಮಾಡಲು ಸಾಧ್ಯವಿಲ್ಲ. ರಾಷ್ಟ್ರದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂಬುದನ್ನು ನಾನು ರಾಹುಲ್ ಗಾಂಧಿಗೆ ಹೇಳಲು ಬಯಸುತ್ತೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications