BJP-JDS ಮೈತ್ರಿ ಲೋಕಸಭಾ ಚುನಾವಣೆಗಷ್ಟೇ ಸೀಮಿತವೇ: ವಿಜಯೇಂದ್ರ ಏನಂದ್ರು?
ಹಾಸನ, ಏಪ್ರಿಲ್ 04: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಆದರೆ ಈ ಮೈತ್ರಿ ಕೇವಲ ಚುನಾವಣೆಗಷ್ಟೇ ಸೀಮಿತವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಈ ಕುರಿತು ಹಾಸನದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಪ್ರಜ್ವಲ್‌ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಇವತ್ತು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇವತ್ತು ರಾಜ್ಯದಲ್ಲಿ ಅಭೂತಪೂರ್ವವಾದಂತಹ ಬೆಂಬಲ ಬಿಜೆಪಿ ಹಾಗೂ ಎನ್‌ಡಿಎ ಮಿತ್ರ ಪಕ್ಷವಾಗಿರುವ ಜೆಡಿಎಸ್ ಪಕ್ಷಕ್ಕೂ ಕೂಡ ಸಿಗುತ್ತಿದೆ, ನಾನು ಕೂಡ ಜಿಲ್ಲೆಯ ಬೇರೆ ಬೇರೆ ಕಡೆ ಪ್ರವಾಸ ಮಾಡುತ್ತಿದ್ದೇನೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಪಾರ್ಟಿ ಅಧಿಕಾರಕ್ಕೆ ಬರಬೇಕು ಎಂದು ಹಾಸನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನರೇಂದ್ರಮೋದಿ ಅವರ ಕನಸಿದೆ 2047 ರ ವೇಳೆಗೆ ವಿಕಸಿತ ಭಾರತ ಆಗಿ ಪರಿವರ್ತನೆ ಆಗಬೇಕು ಅದಕ್ಕಾಗಿ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಮಂತ್ರಿ ಆಗಬೇಕು, ಅದು ನನಸಾಗುವ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ನರೇಂದ್ರಮೋದಿ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿರುವುದು ನಮಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲೂ ಸಹ ನಮಗೆ ಸಂಪೂರ್ಣ ವಿಶ್ವಾಸವಿದೆ. ಬಿಜೆಪಿ-ಜೆಡಿಎಸ್ ಪಾರ್ಟಿ ಎರಡು ಒಂದಾಗಿ ಎನ್‌ಡಿಎ ಅಭ್ಯರ್ಥಿ ಆಗಿರುವ ಪ್ರಜ್ವಲ್‌ರೇವಣ್ಣ ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಪ್ರೀತಂಗೌಡ ಗೈರು ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಿನ್ನೆ ದಿನ ಜಿಲ್ಲೆಯ ನಾಯಕರು ಕುಳಿತು ಪದಾಧಿಕಾರಿಗಳ ಸಭೆ ಮಾಡಿದ್ದಾರೆ, ಒಂದೆರಡು ದಿನ ವಾತಾವರಣ ತಿಳಿಯಾಗುತ್ತದೆ. ನಮ್ಮ ಕರ್ತವ್ಯ ಕೂಡ ಇರುತ್ತದೆ. ಜೆಡಿಎಸ್ ಪಕ್ಷ ಎನ್‌ಡಿಎ ತೆಕ್ಕೆಗೆ ಬಂದ ನಂತರ ನಮ್ಮ ಅಭ್ಯರ್ಥಿಗಳನ್ನು ಅವರ ಕಾರ್ಯಕರ್ತರು ತಳಮಟ್ಟದಿಂದ ಬೆಂಬಲಿಸಬೇಕು, ಎಲ್ಲಿ ಜೆಡಿಎಸ್ ಅಭ್ಯರ್ಥಿಗಳಿದ್ದಾರೆ ಅವರನ್ನು ಸಂಪೂರ್ಣವಾಗಿ ಬೆಂಬಲಿಸಬೇಕು, ಗೆಲ್ಲಿಸಬೇಕು, ನಮ್ಮ ಕರ್ತವ್ಯ ಕೂಡ ಇದೆ.
ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಇದು ನಮ್ಮ ಮುಂದೆ ಇರುವ ಗುರಿ. ಯಾರು, ಯಾರನ್ನು ಭೇಟಿ ಮಾಡಬೇಕು ಅನ್ನುವುದಕ್ಕಿಂತ ಹೆಚ್ಚಾಗಿ, ನಮ್ಮ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಅವರು ಗೆಲ್ಲಬೇಕು.ಅವರು ಗೆಲ್ಲಬೇಕು ಎಂದರೆ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು, ಪ್ರತಿಯೊಬ್ಬರು ಕೆಲಸ ಮಾಡಬೇಕು, ಪ್ರತಿಯೊಬ್ಬರು ಎಂದರೆ ಅದರಲ್ಲಿ ಪ್ರೀತಂಗೌಡ ಕೂಡ ಸೇರ್ತಾರೆ ಎಂದು ತಿಳಿಸಿದರು.
ಹಾಸನ ಜಿಲ್ಲಾ ಬಿಜೆಪಿ ನಾಯಕರ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರ ಉತ್ತರಿಸಿ, ಡಿ.ಕೆ.ಶಿವಕುಮಾರ್ ಏನು ಹೇಳ್ತಾರೆ ಅನ್ನೋದು ಮುಖ್ಯವಲ್ಲ, ಬಿಜೆಪಿ-ಜೆಡಿಎಸ್ ಜೆಡಿಎಸ್ ಮೈತ್ರಿ ಆಗಿದೆ. ದೇವೇಗೌಡರು ಕೂಡ ಆಶೀರ್ವಾದ ಮಾಡಿದ್ದಾರೆ, ಅದಕ್ಕೆ ಕಾರಣ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಇಟ್ಟಿರುವ ಅಚಲ ವಿಶ್ವಾಸ. ನನಗೆ ವಿಶ್ವಾಸವಿದೆ, ಈ ದೇಶದ ಸುರಕ್ಷತೆ, ದೇಶದ ಸರ್ವತೋಮಕ ಅಭಿವೃದ್ಧಿ ದೃಷ್ಟಿಯಿಂದ ಮೋದಿಯವರೇ ಪ್ರಧಾನಮಂತ್ರಿ ಆಗಬೇಕು. ಆ ನಿಟ್ಟಿನಲ್ಲಿ ಮೈತ್ರಿ ಆಗಿದೆ, ಎಲ್ಲಾ ಕೂಡ ಸರಿ ಹೋಗುತ್ತದೆ ಎಂದರು.
ಮಾಜಿಸ ಚಿವ ಕೆ.ಎಸ್.ಈಶ್ವರಪ್ಪ ದೆಹಲಿ ಹೋಗಿ ವಾಪಾಸ್ ಬಂದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಇನ್ನೂ ಕೂಡ ವಿಶ್ವಾಸವಿದೆ, ದೆಹಲಿ ವರಿಷ್ಠರು ಚರ್ಚೆ ಮಾಡ್ತಾರೆ. ಅವರನ್ನು ಸಮಾಧಾನ ಮಾಡ್ತಾರೆ ಅನ್ನುವ ವಿಶ್ವಾಸ ನನಗಿದೆ ಎಂದು ವಿಜಯೇಂದ್ರ ಹೇಳಿದರು.












Click it and Unblock the Notifications