ಮಕ್ಕಳಿಗೆ ಎರಡು ವರ್ಷ ಕೋವಿಡ್ ಕಾಟ: ಈ ವರ್ಷ ಪರಿಷ್ಕರಣೆ ಆಟ
ಬೆಂಗಳೂರು, ಜೂನ್ 06: ಕರ್ನಾಟಕ ಪಠ್ಯಪುಸ್ತಕ ಗೊಂದಲಗಳ ನಡುವೆ ಪಠ್ಯಪುಸ್ತಕ ಮರುಪರಿಷ್ಕರಣ ಸಮಿತಿ ತನ್ನ ಕಾರ್ಯವನ್ನು ಮುಗಿಸಿತ್ತು. ಮುಖ್ಯಮಂತ್ರಿಗಳು ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಿತ್ತು. ಸರ್ಕಾರ ತನ್ನ ಮಟ್ಟದಲ್ಲಿ ಏನಾದರೂ ಮಾಡಿಕೊಳ್ಳಲಿ. ಆದರೆ, ಮಕ್ಕಳ ಕಲಿಕೆಗೆ ಅವಶ್ಯಕವಾಗಿ ಬೇಕಾಗಿರುವುದು ಪಠ್ಯಪುಸ್ತಕ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ತಲುಪಿಸುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಮರು ಪರಿಷ್ಕರಣೆಗೆ ಒಳಪಟ್ಟಿರುವ ಬಹುತೇಕ ಪಠ್ಯಪುಸ್ತಕ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿಲ್ಲ.
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಸರ್ಕಾರ ನಡೆ. ಸರ್ಕಾರ ನಿಗದಿತ ಸಮಯದಲ್ಲಿ ಮಕ್ಕಳಿಗೆ ಪಠ್ಯಪುಸ್ತಕವನ್ನು ಪೂರೈಸುವುದಾಗಿ ಪ್ರತಿವರ್ಷ ಹೇಳುತ್ತಲೇ ಬರುತ್ತದೆ. ಆದರೆ, ಶಾಲೆ ಪ್ರಾರಂಭವಾಗಿ ತಿಂಗಳಾಗುತ್ತಾ ಬಂದರು ಮಕ್ಕಳಿಗೆ ಮಾತ್ರ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಮರುಪರಿಷ್ಕರಣೆಗೆ ಒಳಪಟ್ಟ ಪುಸ್ತಕಗಳ ಮುದ್ರಣ ಕಾರ್ಯ ಇನ್ನು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಪೂರೈೆಕೆಯಲ್ಲಿ ಗೊಂದಲ ಉಂಟಾಗಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಕಲಿತಾ ಚೇತರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪುಸ್ತಕದ ಅವಶ್ಯಕತೆ ಇಲ್ಲವಾಗಿದ್ದರು ಇನ್ನೊಂದು ವಾರದಲ್ಲಿ ಪಾಠವನ್ನು ಮಾಡವುದು ಅನಿವಾರ್ಯವಾಗಲಿದೆ. ಆದರೂ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ತಡವಾಗುತ್ತಿದೆ.

ಸಮಾಜ ವಿಜ್ಞಾನ ಪುಸ್ತಕವೂ ಸಿಕ್ತಿಲ್ಲ
ಹತ್ತನೇ ತರಗತಿಗಾದರೂ ಸರ್ಕಾರ ಪಠ್ಯಪುಸ್ತಕವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಿದೆಯೇ ಎಂದರೆ ಇಲ್ಲ ಅನ್ನೋ ಉತ್ತರ ಸರ್ಕಾರಿ ಶಾಲೆಗಳಿಂದಲೇ ಬರ್ತಿದೆ. ನಗರದ ಕೇಂದ್ರ ಭಾಗ ಸರ್ಕಾರಿ ಶಾಲೆಯೊಂದರ ಮುಖ್ಯೋಪಾದ್ಯಾಯರು ತಿಳಿಸುವಂತೆ ಹತ್ತನೇ ತರಗತಿಯ ಮರುಪರಿಷ್ಕರಣೆಗೆ ಒಳಪಟ್ಟ ಪ್ರಥಮ ಭಾಷೆ ಕನ್ನಡ ಮತ್ತು ಸಮಾಜ ವಿಜ್ಞಾನ ಭಾಗ 1 ಹಾಗೂ ಭಾಗ 2ರ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಈಗಾಗಲೇ ನಾವು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠವನ್ನು ಪ್ರಾರಂಭಿಸಿದ್ದೇವೆ. ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪಾಠವನ್ನು ಮಾಡಬೇಕಾದರೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಆದರೆ ಶಿಕ್ಷಣ ಇಲಾಖೆ ಪಠ್ಯಪುಸ್ತಕವನ್ನು ತಡಮಾಡುತ್ತಿರುವುದು ವಿದ್ಯಾರ್ಥಿಗಳ ಕಲಿಕೆಗೆ ಅನನುಕೂಲವಾಗಲಿದೆ ಎಂಬ ಅಳಲನ್ನು ಮುಖ್ಯೋಪಾಧ್ಯಾಯರು ತೋಡಿಕೊಂಡಿದ್ದಾರೆ.

ಒಂದನೇ ತರಗತಿ ಪಠ್ಯಪೂರೈಕೆಯೂ ವಿಳಂಬ
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆದ ಆರರಿಂದ ಹತ್ತನೇ ತರಗತಿಯ ಕನ್ನಡ, ಸಮಾಜವಿಜ್ಞಾನ ಪಠ್ಯಪುಸ್ತಕಗಳು ಪರಿಷ್ಕರಣೆಗೆ ಒಳಪಟ್ಟಿದ್ದವು. ರಾಜ್ಯದ ಬಹುತೇಕ ಶಾಲೆಗಳಲ್ಲಿ ಆರರಿಂದ ಹತ್ತನೇ ತರಗತಿಯ ಪರಿಷ್ಕೃತ ಪಠ್ಯಗಳು ಪೂರೈಕೆಯೇ ಆಗಿಲ್ಲ. ಇನ್ನು ರಾಜ್ಯದಲ್ಲಿ ಒಂದನೇ ತರಗತಿಯ ಪಠ್ಯ ಪೂರೈಕೆಯಲ್ಲಿಯು ವಿಳಂಬವನ್ನು ಮಾಡಲಾಗುತ್ತಿದೆ.

ಬುಕ್ ಬ್ಯಾಂಕ್ ಮೂಲಕ ಪುಸ್ತಕ ಸಂಗ್ರಹ ವಿತರಣೆ
ಗ್ರಾಮೀಣ ಭಾಗಗಳಲ್ಲಿ ಕಳೆದ ವರ್ಷ ಉಳಿದಿದ್ದ ಪುಸ್ತಕಗಳನ್ನು ಶಿಕ್ಷರು ಪೂರೈಸುತ್ತಿರುವ ವರದಿಯಾಗಿದೆ. ಹಳೆಯ ಪುಸ್ತಕವನ್ನು ಪೂರೈಸಿ ನಿಗದಿತ ಪಾಠವನ್ನು ಮಾಡಲು ಸೂಚಿಸಲಾಗಿದೆ. ಬುಕ್ ಬ್ಯಾಂಕ್ ಮೂಲಕ ಹಳೇಯ ವಿದ್ಯಾರ್ಥಿಗಳ ಪಠ್ಯಪುಸ್ತಕವನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುವ ಕೆಲಸವನ್ನು ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಮುಖ್ಯೋಪಾದ್ಯಾಯರು ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಪಠ್ಯವನ್ನು ಪೂರೈಕೆ ಮಾಡಬೇಕಾಗಿದ್ದರು ಕುಂಟುನೆಪ, ವಿವಾದಗಳನ್ನು ಎಳೆದುಕೊಂಡು ಪಠ್ಯಪುಸ್ತಕವನ್ನು ಪೂರೈಕೆ ತಡಮಾಡುತ್ತಿದೆ.

ಕಲಿಕಾ ಚೇತರಿಕೆ ಪರಿಕರವಷ್ಟೇ Dsert ವಿತರಣೆ
ಕಲಿಕಾ ಚೇತರಿಕೆ ಪರಿಕರವನ್ನು Dsert ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆಯ ಪರಿಕರವನ್ನು ಡೌನ್‌ಲೋಡ್ ಮಾಡಿಕೊಂಡು ಕಲಿಕಾ ಹಾಳೆಗಳನ್ನು ವಿತರಿಸುವ ಜವಾಬ್ದಾರಿಯನ್ನು ಮುಖ್ಯಶಿಕ್ಷಕರಿಗೆ ನೀಡಲಾಗಿದೆ. ಇನ್ನು ವಿದ್ಯಾ ಪ್ರವೇಶಕ್ಕೆ ಬೇಕಾಗಿರುವ ಕಲಿಕಾ ಪರಿಕರಗಳು ಶಾಲೆಗಳಿಗೆ ತಲುಪಿಲ್ಲ. ಯಾವ ರೀತಿಯಲ್ಲಿ ವಿದ್ಯಾಪ್ರವೇಶ ಯೋಜನೆಯನ್ನು ಅನುಷ್ಠಾನ ಮಾಡಬೇಕೆಂದು ಸಿಆರ್‌ಪಿ(ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ) , ಬಿಆರ್‌ಸಿ, ಬಿಇಓ ಅಧಿಕಾರಿಗಳು ಮಾಹಿತಿಯನ್ನು ನೀಡುತ್ತಿಲ್ಲ. ಗ್ರಾಮೀಣ ಭಾಗದ ಶಿಕ್ಷಕರೊಬ್ಬರು Dsert ಕಚೇರಿಯನ್ನು ಸಂಪರ್ಕಿಸಿದರೇ ನಮಗೆ ಕಲಿಕಾ ಚೇತರಿಕೆ ಹೊರತು ಬೇರೆ ವಿಷಯ ಗೊತ್ತಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಷ್ಟಕ್ಕೂ ವಿದ್ಯಾಪ್ರವೇಶ ಕಾರ್ಯಕ್ರಮವೆನೆಂದರೆ ಉದಾಹರಣೆಗೆ, ಕೋವಿಡ್‌ನಿಂದ ಎರಡು ವರ್ಷ ಶಾಲೆಗೆ ಸರಿಯಾಗಿ ಬರದ ಮಕ್ಕಳು ನೇರವಾಗಿ 3ನೇ ತರಗತಿಗೆ ಬಂದು ಕುಳಿತಿದ್ದಾರೆ. ಈ ಮಕ್ಕಳಿಗೆ ಎರಡು ವರ್ಷದ ಕಲಿಯಬೇಕಿದ್ದ ವಿಚಾರವನ್ನು ಮನವರಿಕೆ ಮಾಡಿ ಪರೀಕ್ಷೆಗಳನ್ನು ನಡೆಸುವುದಾಗಿತ್ತು. ಆದರೆ ವಿದ್ಯಾಪ್ರವೇಶಕ್ಕೆ ಕಲಿಕಾ ಸಾಮಗ್ರಿಯನ್ನು ಪೂರೈಸದೇ ಸರ್ಕಾರ ತನ್ನ ಯೋಜನೆಗಳಿಗೆ ತಾನೇ ಎಳ್ಳು ನೀರು ಬಿಡ್ತಿದೆ. ಪಠ್ಯಪುಸ್ತಕದ ಗೊಂದಲದ ಜೊತೆಗೆ ಕಲಿಕೆಯ ವಿಚಾರದಲ್ಲಿ ಹಲವಾರು ಸಮಸ್ಯೆಯನ್ನು ಸರ್ಕಾರಿ ಶಾಲೆಗಳು ಎದುರಿಸುತ್ತಿದ್ದು ಶಿಕ್ಷಣ ಸಚಿವರು ಇದನ್ನೆಲ್ಲಾ ಗಮನಿಸಿ ಸೂಕ್ತಕ್ರಮವನ್ನು ವಹಿಸಬೇಕಿದೆ.
ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ತನ್ನ ವೆಬ್‌ಸೈಟ್‌ನಲ್ಲಿ ಪಠ್ಯಪುಸ್ತಕವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದ್ದೂ ತಕ್ಕ ಮಟ್ಟಿಗೆ ಅನುಕೂಲವಾಗಲಿದೆ.












Click it and Unblock the Notifications