Terror Attack in Pahalgam: ಪಹಲ್ಗಾಮ್ ದಾಳಿಗೆ ತೀವ್ರ ಖಂಡನೆ: ಸಂತ್ರಸ್ತರಿಗೆ ರಾಜ್ಯ ನಾಯಕರ ಸಂತಾಪ
Terrorist Attack in Pahalgam: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಘಟನೆಯನ್ನು ಜಾತಿ, ಮತ ಮತ್ತು ಪಕ್ಷಾತೀತವಾಗಿ ಖಂಡಿಸಲಾಗುತ್ತಿದೆ. ಆ ಮಟ್ಟಿಗಿನ ನರಮೇಧ ಮಾಡಲಾಗಿದೆ. ಪ್ರವಾಸಿ ತಾಣದಲ್ಲಿ ಪ್ರವಾಸಿಗರ ರಕ್ತದೋಕುಳಿ ಹರಿದಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರು, ಮುಖ್ಯಸ್ಥರು ಸಭೆ ನಡೆಸಿ ಭಾರತದ ಮುಂದಿನ ನಡೆ ಬಗ್ಗೆ ಶೀಘ್ರವೇ ನಿರ್ಧರಿಸಲಿದ್ದಾರೆ. ಕರ್ನಾಟಕ ರಾಜ್ಯ ಸಚಿವರಾದ ಎಂಬಿ ಪಾಟೀಲ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಖಂಡಿಸಿದ್ದಾರೆ. ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಕಣಿವೆ ರಾಜ್ಯದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿರುವ ದಾಳಿ ಅತ್ಯಂತ ಹೇಯ ಮತ್ತು ಹೇಡಿತನದ ಕೃತ್ಯವಾಗಿದೆ. ಇದಕ್ಕೆ ಕಾರಣರಾದ ಉಗ್ರಗಾಮಿಗಳನ್ನು ಯಾವ ಮುಲಾಜೂ ಇಲ್ಲದೆ ಸದೆಬಡಿಯುವ ಕೆಲಸ ಆಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಗುಡುಗಿದರು.

'ಉಗ್ರಗಾಮಿಗಳಿಗೆ ಯಾವುದೇ ಧರ್ಮ, ಜಾತಿ, ಸಂಸ್ಕೃತಿ ಏನೂ ಇಲ್ಲ. ಅಮಾಯಕರ ಹತ್ಯೆ ಅಮಾನುಷ ಕೃತ್ಯ. ಅವರನ್ನು ಹತ್ತಿಕ್ಕಬೇಕಷ್ಟೆ. ಇದಕ್ಕೆ ಪಾಕಿಸ್ತಾನದ ಬೆಂಬಲವಿದ್ದರೆ ಆ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕು' ಎಂದಿದ್ದಾರೆ.
ಕಾಶ್ಮೀರದಲ್ಲಿ ಇತ್ತೀಚೆಗೆ ಪರಿಸ್ಥಿತಿ ಸಹಜವಾಗಿತ್ತು. ಅಲ್ಲಿಯ ಜನರು ಕೂಡ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡು ಸಂತಸದಿಂದ ಇದ್ದರು. ಹೀಗಾಗಿ, ಕೇಂದ್ರ ಸರ್ಕಾರವು ಸೇನಾಪಡೆಗಳನ್ನು ಸ್ವಲ್ಪ ಮಟ್ಟಿಗೆ ಹಿಂತೆಗೆದುಕೊಂಡಿತ್ತು. ಉಗ್ರಗಾಮಿಗಳು ಇದರ ದುರ್ಲಾಭ ಪಡೆದುಕೊಂಡು ಈ ಬರ್ಬರ ಕೃತ್ಯ ಎಸಗಿದ್ದಾರೆ. ಕೇಂದ್ರವು ಈಗ ಪುನಃ ಮತ್ತಷ್ಟು ಸೇನಾಪಡೆಯನ್ನು ಕಾಶ್ಮೀರದಲ್ಲಿ ನಿಯೋಜಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ದುರಂತದಲ್ಲಿ ರಾಜ್ಯದ ಇಬ್ಬರು ಅಸುನೀಗಿದ್ದಾರೆ. ಅವರ ಕುಟುಂಬಗಳಿಗೆ ಸರಕಾರ ಎಲ್ಲಾ ನೆರವು ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಚಿವ ಸಂತೋಷ್ ಲಾಡ್ ಅವರನ್ನು ಕಾಶ್ಮೀರಕ್ಕೆ ಕಳಿಸಿಕೊಟ್ಟು, ತ್ವರಿತವಾಗಿ ಸ್ಪಂದಿಸಿದ್ದಾರೆ ಎಂದು ಪಾಟೀಲ ಅವರು ವಿವರಿಸಿದರು.
ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ?
ಘಟನೆ ಖಂಡಿಸಿ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಅತ್ಯಂತ ಭೀಭತ್ಸ್ಯ ಹಾಗೂ ಹೇಯ. ಈ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28 ಕ್ಕೂ ಹೆಚ್ಚು ಜನ ಬಲಿಯಾಗಿದ್ದು ಅತೀವ ನೋವು ತಂದಿದೆ. ಉಗ್ರರ ಈ ಕ್ರೂರ ದಾಳಿಯ ಬಳಿಕ 'ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯಾ.?' ಎಂಬ ಪೂರ್ಣಚಂದ್ರ ತೇಜಸ್ವಿಯವರ ಮಾತು ನೆನಪಿಗೆ ಬರುತ್ತಿದೆ.
ಪಹಲ್ಗಾಮ್‌ನಲ್ಲಿ ನಡೆದಿರುವುದು ಕೇವಲ ಉಗ್ರರ ದಾಳಿಯಲ್ಲ. ಅದು ಮನುಷ್ಯತ್ವದ ವಿರುದ್ಧದ ದಾಳಿ, ಈ ದೇಶದ ಸಾರ್ವಭೌಮತ್ವದ ವಿರುದ್ಧದ ದಾಳಿ, ಈ ನೆಲದ ಅಸ್ಮಿತೆಯ ಮೇಲಿನ ದಾಳಿ. ಈ ದಾಳಿಯ ಹಿಂದಿನ ಶಕ್ತಿಗಳನ್ನು ಭಾರತೀಯರಾದ ನಾವು ಒಗ್ಗಟ್ಟಾಗಿ ಹುಟ್ಟಡಗಿಸಲೇಬೇಕಾಗಿದೆ ಎಂದು ಹೇಳಿದರು.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಅತ್ಯಂತ ಭೀಭತ್ಸ್ಯ ಹಾಗೂ ಹೇಯ. ಈ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28 ಕ್ಕೂ ಹೆಚ್ಚು ಜನ ಬಲಿಯಾಗಿದ್ದು ಅತೀವ ನೋವು ತಂದಿದೆ. ಉಗ್ರರ ಈ ಕ್ರೂರ ದಾಳಿಯ ಬಳಿಕ 'ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯಾ.?' ಎಂಬ ಪೂರ್ಣಚಂದ್ರ ತೇಜಸ್ವಿಯವರ ಮಾತು ನೆನಪಿಗೆ ಬರುತ್ತಿದೆ.…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 23, 2025
ಕಾಶ್ಮೀರದಲ್ಲಿ ಶಾಂತಿ: ಕೇಂದ್ರ ಸುಳ್ಳು ಹೇಳದಿರಲಿ: ಸಚಿವ
ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂಬ ಸುಳ್ಳು ನರೇಟಿವ್‌ನ್ನು ಕೇಂದ್ರ ಸೃಷ್ಟಿಸಿತ್ತು. ಆದರೆ ಕಣಿವೆ ರಾಜ್ಯದಲ್ಲಿ ಉಗ್ರ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಲೇ ಇತ್ತು ಎಂಬುದಕ್ಕೆ ಈ ದಾಳಿ ಸಾಕ್ಷಿ. ದೇಶದ ಭದ್ರತೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಇನ್ನಾದರೂ ಸುಳ್ಳು ಹೇಳುವ ಚಾಳಿ ಬಿಡಬೇಕಿದೆ ಎಂದು ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಚಾಟೀ ಬೀಸಿದರು.
ಪಾಕಿಸ್ತಾನದ ಕೈವಾಡವಿಲ್ಲದೆ, ಆ ದೇಶದ ಗುಪ್ತಚರ ಏಜೇನ್ಸಿಗಳ ಪಾತ್ರವಿಲ್ಲದೆ ಪಹಲ್ಗಾಮ್‌ನಲ್ಲಿ ಇಂತಹದ್ದೊಂದು ವ್ಯವಸ್ಥಿತ ದಾಳಿ ನಡೆಯಲು ಸಾಧ್ಯವೇ ಇಲ್ಲ. ಈ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡದ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡನೀಯ. ಈ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಮೃತರಾಗಿರುವುದು ಅತ್ಯಂತ ದುಃಖದ ವಿಷಯ. ಮಂಜುನಾಥ್ ಕುಟುಂಬದ ಜೊತೆ ಕರ್ನಾಟಕ ರಾಜ್ಯ ಸರ್ಕಾರ ನಿಲ್ಲಲಿದೆ.
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿಲ್ಲ ಎಂದು ಕೇಂದ್ರ ಮತ್ತೆ ಹಳೆ ಸುಳ್ಳನ್ನೇ ಹೇಳದಿರಲಿ. ಉಗ್ರರ ವಿಚಾರದಲ್ಲಿ ಕೇಂದ್ರ ಸರ್ಕಾರ ಅತ್ಯಂತ ದುರ್ಬಲವಾಗಿ ವರ್ತಿಸುತ್ತಿದೆ. ಇನ್ನಾದರೂ ಕೇಂದ್ರ ಸರ್ಕಾರ ಉಗ್ರರನ್ನು ಸೆದೆಬಡಿಯುವತ್ತ ಚಿತ್ತ ಹರಿಸಲಿ. ಅಮಾಯಕರ ಸಾವಿಗೆ ಅಂತ್ಯ ಹಾಡಲಿ ಎಂದು ಅವರು ಆಗ್ರಹಿಸಿದ್ದಾರೆ.
ಇದೊಂದು ಹೇಡಿತನದ ಸಂಕೇತ: ಯತ್ನಾಳ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಕೃತ್ಯವನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಖಂಡಿಸಿದ್ದಾರೆ. ಅಮಾಯಕ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯು ಹೇಡಿತನದ ಹೇಯ ಕೃತ್ಯವನ್ನು ಪ್ರತಿನಿಧಿಸುತ್ತದೆ. ಈ ಘೋರ ಅಪರಾಧಕ್ಕೆ ಕಾರಣರಾದವರು ತಮ್ಮ ಕೃತ್ಯಗಳಿಗೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಲಿಪಶುಗಳ ಕ್ರೂರ ಹತ್ಯೆಗೆ ಮುನ್ನ ಅವರ ಧಾರ್ಮಿಕ ಸಂಬಂಧಗಳನ್ನು ಗುರುತಿಸುವುದು ಕೆಲವು ಬಣಗಳು ಪ್ರದರ್ಶಿಸಿದ ಅಸಹಿಷ್ಣುತೆಯನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ಈ ಭಯೋತ್ಪಾದಕ ದಾಳಿಯಲ್ಲಿ ಜೀವ ಕಳೆದುಕೊಂಡ ಬಲಿಪಶುಗಳ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದೌರ್ಜನ್ಯಕ್ಕೆ ಕಾರಣರಾದ ದುಷ್ಟರ ವಿರುದ್ಧ ನಮ್ಮ ಪಡೆಗಳು ಪ್ರತೀಕಾರ ತೀರಿಸಿಕೊಳ್ಳುತ್ತವೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಕೇಂದ್ರ ಸರ್ಕಾರದ ಪ್ರತಿಕಾರದ ಕುರಿತು ಮಾತನಾಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಮರುಸ್ಥಾಪಿಸಲು ಯತ್ನ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ಹಲ್ಲೆ ಮಾಡಿರುವುದು ಇದೊಂದು ಹೇಯ ಕೃತ್ಯ ಮತ್ತು ಇದು ಭಯೋತ್ಪಾದನೆ ಮರುಸ್ಥಾಪಿಸುವ ಪ್ರಯತ್ನ ಇದನ್ನು ಪ್ರತಿಯೊಬ್ಬ ನಾಗರಿಕರು ಖಂಡಿಸಬೇಕಾಗಿದೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕಿರಿ ಕಾರಿದರು.
ಧರ್ಮದ ಹೆಸರು ಕೇಳಿ ಗುಂಡು ಹಾರಿಸಿರುವುದು ನೋಡಿದರೆ ಭಾರತದ ವಿರೋಧಿ ಶಕ್ತಿಗಳ ಕೈವಾಡ ಇರುವುದು ಬಹಳ ಸ್ಪಷ್ಟವಾಗುತ್ತದೆ. ಇದನ್ನು ಕೂಡಲೇ ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಮಟ್ಟ ಹಾಕಬೇಕು. ಮತ್ತು ಜಮ್ಮು ಕಾಶ್ಮೀರ ಕಣಿವೆಯಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರಲು ರಾಜ್ಯ ಸರ್ಕಾರ ಎಲ್ಲ ವ್ಯವಸ್ಥೆಯನ್ನು ಮಾಡಬೇಕು. ಘಟನೆಯಲ್ಲಿ ಮೃತರಾದವರ ಕುಟುಂಬದವರಿಗೆ ಅವರ ಅಗಲಿಕೆಯ ದುಖವನ್ನು ಭರಿಸುವ ಭಗವಂತ ಶಕ್ತಿ ಕೊಡಲಿ ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications