ಬಜರಂಗದಳ ವಿವಾದ: ಕಾಂಗ್ರೆಸ್ ಗೆದ್ದರೆ ಕರ್ನಾಟಕದಲ್ಲಿ ಗೂಂಡಾರಾಜ್, ಇಸ್ಲಾಮೀಕರಣ- ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು, ಮೇ 03: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗೂಂಡಾ ರಾಜ್, ಮಾಫಿಯಾ ರಾಜ್, ಇಸ್ಲಾಮೀಕರಣ ಮತ್ತು ಭಯೋತ್ಪಾದನೆಯ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಬುಧವಾರ ಹೇಳಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಬಜರಂಗದಳ ಮತ್ತು ಪಿಎಫ್‌ಐನಂತಹ ಸಂಘಟನೆಗಳ ಮೇಲೆ ನಿಷೇಧದ ಭರವಸೆ ನೀಡಿ ಕಾಂಗ್ರೆಸ್‌ನ ಪ್ರಣಾಳಿಕೆಯ ಮೇಲೆ ವಾಗ್ದಾಳಿ ನಡೆಸಿದರು.

'ಬಜರಂಗದಳವು ಭಯೋತ್ಪಾದಕ ಸಂಘಟನೆಯಾದ ಪಿಎಫ್‌ಐಗಿಂತ ಭಿನ್ನವಾಗಿ ಸಾಂಸ್ಕೃತಿಕ ಮತ್ತು ರಾಷ್ಟ್ರೀಯತಾವಾದಿ ಸಂಘಟನೆಯಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಬಜರಂಗದಳವು ಹಿಂದೂ ಸಮುದಾಯದ ರಕ್ಷಣೆಯ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಇದನ್ನು ನಿಷೇಧಿಸುವಂತೆ ಕರೆ ನೀಡುವ ಮೂಲಕ ಅವರು ಹಿಂದೂಗಳು ಮತ್ತು ಹನುಮ ಭಕ್ತರನ್ನು ಅವಮಾನಿಸಿದ್ದಾರೆ' ಎಂದು ಬೆಂಗಳೂರು ದಕ್ಷಿಣ ಸಂಸದ ಸೂರ್ಯ ಹೇಳಿದರು.
ಪಿಎಫ್‌ಐ ಮತ್ತು ಬಜರಂಗ ದಳದ ನಡುವಿನ ಸುಳ್ಳು ಹೊಲಿಕೆಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಸೂರ್ಯ ಹೇಳಿದರು.
'ನಾವು ನೈತಿಕ ಪೋಲೀಸಿಂಗ್ ಅನ್ನು ಬೆಂಬಲಿಸುವುದಿಲ್ಲ. ಆದರೆ ಇಲ್ಲಿ ಹೋಲಿಕೆ ಮಾಡಲು, ಬಜರಂಗದಳವು ನೈತಿಕ ಪೋಲೀಸಿಂಗ್ ಆರೋಪವನ್ನು ಹೊಂದಿದೆ. ಆದರೆ ಪಿಎಫ್‌ಐ ರಾಜ್ಯದ ವಿರುದ್ಧ ಸಮರ ಸಾರಿದೆ ಎಂದು ಆರೋಪಿಸಲಾಗಿದೆ. ಈ ಎರಡನ್ನೂ ಸಮೀಕರಿಸಬಹುದೇ?' ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯನ್ನು ಹಿಂದೂ ವಿರೋಧಿ ಎಂದು ಬಣ್ಣಿಸಿದ ಸೂರ್ಯ, ಪಕ್ಷವು ಅಧಿಕಾರಕ್ಕೆ ಬಂದರೆ ಮತಾಂತರ ವಿರೋಧಿ ಕಾನೂನು ಮತ್ತು ಗೋಹತ್ಯೆ ವಿರೋಧಿ ಕಾನೂನನ್ನು ರದ್ದುಗೊಳಿಸಲು ಬಯಸುತ್ತದೆ ಎಂದು ಹೇಳಿದರು.
'ಅವರು ಬೀದಿಗಳಲ್ಲಿ ಮುಕ್ತವಾಗಿ ನಡೆದಾಡುವ ಪಿಎಫ್‌ಐ ಗೂಂಡಾಗಳನ್ನು ಮರಳಿ ಕರೆತರುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಶಾಂತಿಯನ್ನು ಹದಗೆಡಿಸುತ್ತದೆ' ಎಂದು ಆರೋಪಿಸಿದರು.
ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು 'ಸುಳ್ಳು' ಮತ್ತು 'ಬೂಟಾಟಿಕೆ' ಎಂದು ಟೀಕಿಸಿದರು.
'ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ತಂದು ಲೋಕಾಯುಕ್ತವನ್ನು ಹಲ್ಲಿಲ್ಲದ ಸ್ಥಿತಿಗೆ ತಂದವರು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಪಕ್ಷ ಈಗ ಲೋಕಾಯುಕ್ತಕ್ಕೆ ಅಧಿಕಾರ ನೀಡುವ ಭರವಸೆ ನೀಡಿದ್ದು ನಗೆಪಾಟಲಿಗೀಡಾಗಿದೆ' ಎಂದು ತೇಜಸ್ವಿ ಸೂರ್ಯ ಹೇಳಿದರು.
'ರಾಜೀವ್ ಗಾಂಧಿಯವರ ಆಡಳಿತದಲ್ಲಿ ಕಾಶ್ಮೀರಿ ಪಂಡಿತರು ಕಣಿವೆಯಿಂದ ಪಲಾಯನ ಮಾಡಬೇಕಾಯಿತು. ಕಾಂಗ್ರೆಸ್ ಈಗ ಕಾಶ್ಮೀರಿ ಪಂಡಿತರಿಗಾಗಿ ಸಾಂಸ್ಕೃತಿಕ ಕೇಂದ್ರವನ್ನು ಪ್ರಾರಂಭಿಸಲು ಬಯಸಿದೆ' ಎಂದು ಸೂರ್ಯ ತಿಳಿಸಿದರು.
ಮಹದಾಯಿ ಕುಡಿಯುವ ನೀರಿನ ಯೋಜನೆ ಕುರಿತು ಮಾತನಾಡಿದ ಸೂರ್ಯ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕರ್ನಾಟಕಕ್ಕೆ ನೀರು ಹಂಚಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗ ಮಹದಾಯಿ ಯೋಜನೆ ಪೂರ್ಣಗೊಳಿಸುವುದಾಗಿ ಪಕ್ಷ ಭರವಸೆ ನೀಡಿದೆ ಎಂದರು.
ಕಾಂಗ್ರೆಸ್‌ನ ಪ್ರಣಾಳಿಕೆಯು ಪೌರಕಾರ್ಮಿಕರನ್ನು ಸಕ್ರಮಗೊಳಿಸುವ ಭರವಸೆ ನೀಡಿದೆ, ಅದನ್ನು ಬಿಜೆಪಿ ಕೂಡ ಮಾಡಿದೆ ಎಂದು ಸೂರ್ಯ ತಿಳಿಸಿದರು. 'ಕಾಂಗ್ರೆಸ್ ತನ್ನದೇ ಪ್ರಣಾಳಿಕೆಯನ್ನು ಗಂಭೀರವಾಗಿ ಪರಿಗಣಿಸದೆ ಕಟ್ ಅಂಡ್ ಪೇಸ್ಟ್ ಕೆಲಸ ಮಾಡಿದೆ' ಎಂದು ಅವರು ಹೇಳಿದರು.












Click it and Unblock the Notifications