ಪದವೀಧರ ಪ್ರಾಥಮಿಕ ಶಿಕ್ಷಕರ ಸ್ಥಳ ನಿಯುಕ್ತಿ, ಮತ್ತೆ ಕೌನ್ಸಿಲಿಂಗ್
ಬೆಂಗಳೂರು, ಜೂನ್ 17: ಶಿಕ್ಷಣ ಇಲಾಖೆ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ) ಇವರಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡುವ ಕುರಿತು ಜ್ಞಾಪನಾ ಪತ್ರವನ್ನು ಹೊರಡಿಸಿದೆ. ಹಲವು ಸರ್ಕಾರಿ ಆದೇಶಗಳನ್ನು ಉಲ್ಲೇಖ ಮಾಡಿ ಈ ಪತ್ರವನ್ನು ಹೊರಡಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ಈ ಕುರಿತು ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಈ ಪತ್ರ 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಉಪನಿರ್ದೇಶಕರ ಕಛೇರಿಯಲ್ಲಿ ತಾತ್ಕಾಲಿಕವಾಗಿ ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರಿಗೆ 'ಸಿ' ವಲಯದ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡುವ ಕುರಿತು ಎಂಬ ವಿಷಯ ಒಳಗೊಂಡಿದೆ.

ಪತ್ರದ ವಿವರ: ವಿಷಯದನ್ವಯ, 2022-23ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ) ಹುದ್ದೆಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಕೆಲವೊಂದು ಜಿಲ್ಲೆಗಳಲ್ಲಿ 'ಸಿ' ವಲಯದ ಖಾಲಿ ಹುದ್ದೆಗಳು ಲಭ್ಯವಿಲ್ಲದ ಪ್ರಯುಕ್ತ ಅಂತಹ ಶಿಕ್ಷಕರುಗಳಿಗೆ ಆಯಾ ವ್ಯಾಪ್ತಿಯ ಉಪನಿರ್ದೇಶಕರು (ಆಡಳಿತ)ಗಳ ಕಛೇರಿಯಲ್ಲಿ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಹೇಳಿದೆ.
ಉಪನಿರ್ದೇಶಕರ ಕಛೇರಿಯನ್ನು ಆಯ್ಕೆ ಮಾಡಿಕೊಂಡಿರುವ ಶಿಕ್ಷಕರು ಸೇವೆಯನ್ನು ಶಾಲೆಗಳಲ್ಲಿ ಬಳಸಿಕೊಳ್ಳುವ ದೃಷ್ಟಿಯಿಂದ ಅಗತ್ಯತೆಗನುಸಾರ ನಿಯೋಜಿಸಿ ಕ್ರಮವಹಿಸಲು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಇವರಿಗೆ ಸೂಚಿಸಲಾಗಿತ್ತು. ಉಪನಿರ್ದೇಶಕರು ಕಛೇರಿಯನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಂಡು ಪ್ರಸ್ತುತ ಅಗತ್ಯ ಶಾಲೆಗಳಿಗೆ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ 718 ಶಿಕ್ಷಕರುಗಳಿಗೆ 'ಸಿ' ವಲಯದ ಲಭ್ಯ ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಹಂಚಿಕೆ ಮಾಡಿ ಆದೇಶಿಸಲಾಗಿದೆ.
ಇನ್ನು 609 ಅಭ್ಯರ್ಥಿಗಳು 'ಸಿ' ವಲಯದಲ್ಲಿ ಹುದ್ದೆ ಲಭ್ಯವಿಲ್ಲದ ಕಾರಣ ಅವಕಾಶ ಕಲ್ಪಿಸಲಾಗಿಲ್ಲ. ಪ್ರಸುತ ಸ್ಥಳ ನಿಯುಕ್ತಿ ವೇಳಾಪಟ್ಟಿ ಪ್ರಕ್ರಿಯೆ ಮುಂದುವರಿಸಲು ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿ, ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಶಾಲೆಗಳಿಗೆ ನಿಯೋಜಿಸ್ಪಟ್ಟಿರುವ ಶಿಕ್ಷಕರುಗಳಿಗೆ ವೇತನ ಮತ್ತು ಇತರೆ ಸೇವಾ ಸೌಲಭ್ಯಗಳನ್ನು ನೀಡುವ ಸಂಬಂಧ ಜಿಲ್ಲಾ ವ್ಯಾಪ್ತಿಯ 'ಸಿ' ವಲಯದ ಶಾಲೆಗಳಲ್ಲಿನ ಲಭ್ಯ ಖಾಲಿ ಹುದ್ದೆಗಳ ಪ್ರಕಟಣೆಯನ್ನು ದಿನಾಂಕ 03/07/2024 ಮಾಡುವುದು.
ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆಗೆ ದಿನಾಂಕ 4/7/2024 ರಂದು ಪೂರ್ವಾಹ್ನ 11.30 ಗಂಟೆಗೆ ಜಿಲ್ಲಾವಾರು ನಡೆಯುವ ಸ್ಥಳ ಆಯ್ಕೆಗೆ ಆಯಾ ಉಪನಿರ್ದೇಶಕರ ಕಛೇರಿಯಿಂದ ಈ ಹಿಂದಿನ ದಿನಾಂಕಗಳಲ್ಲಿ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್‌ನ ಪೂರ್ವ ತಯಾರಿಗೆ ಸಂಬಂಧಪಟ್ಟಂತೆ ವಿಸ್ತ್ರತ ಸೂಚನೆಗಳಂತೆಯೇ ಅಗತ್ಯ ಕ್ರಮಗಳನ್ನು ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಯಾವುದೇ ಲೋಪವಿಲ್ಲದಂತೆ ಕೈಗೊಂಡು ಯಶಸ್ವಿಯಾಗಿ ಪೂರೈಸತಕ್ಕದ್ದು.
ಉಪನಿರ್ದೇಶಕರ ಕಛೇರಿಗೆ ತಾತ್ಕಾಲಿಕವಾಗಿ ಸ್ಥಳ ಆಯ್ಕೆ ಮಾಡಿಕೊಂಡಿರುವ ಎಲ್ಲಾ ಶಿಕ್ಷಕರುಗಳು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳತಕ್ಕದ್ದು. ಈ ವಿಷಯವನ್ನು ಉಪನಿರ್ದೇಶಕರ ಕಛೇರಿಗೆ ತಾತ್ಕಾಲಿಕವಾಗಿ ಸ್ಥಳ ಹಂಚಿಕೆ ಪಡೆದು ಕರ್ತವ್ಯಕ್ಕೆ ಹಾಜರಾಗಿರುವ ಎಲ್ಲಾ ಶಿಕ್ಷಕರುಗಳಿಗೆ ಉಪನಿರ್ದೇಶಕರು ದಿನಾಂಕ 1/7/2024ರಂದು ಲಿಖಿತವಾಗಿ ಸೂಕ್ತ ಸೂಚನೆಯನ್ನು ಜಾರಿ ಮಾಡಿ ಸ್ವೀಕೃತಿ ಪಡೆದುಕೊಳ್ಳುವುದು.
ಸುಪ್ರೀಂಕೋರ್ಟ್‌ನಲ್ಲಿ ದಾಖಲಾಗಿರುವ ವಿಶೇಷ ಅನುಮತಿ ಅರ್ಜಿ ಸಂಖ್ಯೆ 27984-388/2023 ಪ್ರಕರಣದಲ್ಲಿನ ಮಧ್ಯಂತರ ಆದೇಶ ದಿನಾಂಕ 30/01/2024 & 22/01/2024 ಪ್ರಕಾರ ಈಗಾಗಲೇ ನೇಮಕಾತಿ ಆದೇಶ ಪಡೆದು ನೇಮಕಗೊಂಡಿರುವ 11494 ಅಭ್ಯರ್ಥಿಗಳಿಗೆ ತಮ್ಮ ನೇಮಕಾತಿಯು ಸದರಿ ವಿಶೇಷ ಅನುಮತಿ ಅರ್ಜಿಯಲ್ಲಿ ಅಂತಿಮ ತೀರ್ಪಿಗೆ ಒಳಪಟ್ಟಿರುವ ವಿಷಯವನ್ನು ನೇಮಕಾತಿ ಪ್ರಾಧಿಕಾರಿಗಳಾದ ಜಿಲ್ಲಾ ಉಪನಿರ್ದೇಶಕರ ಪ್ರತಿ ಅಭ್ಯರ್ಥಿಗೆ ಲಿಖಿತವಾಗಿ ತಿಳಿಸಿ ಸ್ವೀಕೃತಿ ಪಡೆದಿರುವುದನ್ನು ಪುನರ್ ಉಚ್ಚರಿಸಿದೆ.
ಈ ಹಿಂದೆ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ್ತು ನೇಮಕಾತಿ ಆದೇಶಗಳನ್ನು ನೀಡದಿರುವ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಎಚ್ಚರಿಕೆ ವಹಿಸಲು ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚಿಸುತ್ತಾ ಉಪನಿರ್ದೇಶಕರ ಕಛೇರಿಯಲ್ಲಿ ಹಾಜಗಿರುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸುವುದು ಎಂದು ಹೇಳಿದೆ.
ನೇಮಕಾತಿ ಪ್ರಾಧಿಕಾರಿಯವರಾದ ಆಯಾ ಉಪನಿರ್ದೇಶಕರೇ ಇಡೀ ಕೌನ್ಸಿಲಿಂಗ್ ಪ್ರಕ್ರಿಯೆಗೆ ಮತ್ತು ತತ್ಪರಿಣಾಮಗಳಿಗೆ ಪೂರ್ಣ ಜವಾಬ್ದಾರರಾಗಿದ್ದು, ಅತ್ಯಂತ ಜಾಗರೂಕತೆಯಿಂದ ಮತ್ತು ಪಾರದರ್ಶಕವಾಗಿ ಗೊಂದಲಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಲು ಮತ್ತೊಮ್ಮೆ ಕಟ್ಟುನಿಟ್ಟಾಗಿ ಸೂಚಿಸಿದೆ ಎಂದು ಪತ್ರ ಹೇಳಿದೆ.












Click it and Unblock the Notifications