Vande Bharat Express: ವಂದೇ ಭಾರತ್ ರೈಲಿನ ದರ ಪರಿಷ್ಕರಣೆ?
ಬೆಂಗಳೂರು, ಜುಲೈ 02: ಭಾರತೀಯ ರೈಲ್ವೆಯ ಸೆಮಿ-ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರೀ ಬೇಡಿಕೆ ಇದೆ. ಆದರೆ ಈ ರೈಲಿನ ದರಗಳು ಹೆಚ್ಚು ಎಂಬುದು ಆರೋಪವಾಗಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಈ ದರಗಳ ಪರಿಷ್ಕರಣೆ ಕುರಿತು ಮಾತನಾಡಿದ್ದರು.
ಈಗ ನೈಋತ್ಯ ರೈಲ್ವೆ ಈ ಕುರಿತು ಸ್ಪಷ್ಟನೆಯನ್ನು ನೀಡಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ದರಗಳನ್ನು ಪರಿಷ್ಕರಣೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ. ಸಚಿವರ ಹೇಳಿಕೆ ವೈರಲ್ ಆದ ಬಳಿಕ ಈ ಸ್ಪಷ್ಟನೆಯನ್ನು ಕೊಡಲಾಗಿದೆ.

ತುಮಕೂರು ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಶನಿವಾರ ಬೆಂಗಳೂರಿನಲ್ಲಿ ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದರು. ಬೆಂಗಳೂರಿನ ವಿವಿಧ ರೈಲ್ವೆ ಯೋಜನೆಗಳನ್ನು ಪರಿಶೀಲಿಸಿದ್ದರು.
ಈ ಸಭೆಯ ಬಳಿಕ ಮಾತನಾಡಿದ್ದ ವಿ. ಸೋಮಣ್ಣ, "ಕೃಷಿಕರು, ಕಾರ್ಮಿಕರು, ಬಡವರಿಗೂ ಅನುಕೂಲವಾಗುವಂತೆ ವಂದೇ ಭಾರತ್ ಸೇರಿದಂತೆ ವಿವಿಧ ರೈಲುಗಳ ದರ ಪರಿಷ್ಕರಣೆ ಮಾಡಲು ಚಿಂತನೆ ನಡೆಸಲಾಗಿದೆ" ಎಂದು ಹೇಳಿದ್ದರು.
ಸಚಿವ ವಿ. ಸೋಮಣ್ಣ, "ಪ್ರಧಾನಿ ನರೇಂದ್ರ ಮೋದಿಯವರ ಜೊತೆ ರೈಲ್ವೆ ಸಚಿವರು, ನಾನು ಎರಡು ಗಂಟೆಗಳ ಕಾಲ ಚರ್ಚಿಸಿದ್ದೇವೆ. ಈ ಸಭೆಯಲ್ಲಿ ರೈಲುಗಳ ದರ ಪರಿಷ್ಕರಣೆ ವಿಷಯವೂ ಸೇರಿತ್ತು. ಹಳ್ಳಿಗಳಿಂದ ಬರುವವರಿಗೆ ಉತ್ತಮ ಸೌಲಭ್ಯ ಇರುವ ವಂದೇ ಭಾರತ್ ರೈಲಿನಲ್ಲಿ ಸಂಚಾರ ನಡೆಸಬೇಕು ಎಂಬ ಆಸೆ ಇರುತ್ತದೆ. ಅದು ನೆರವೇರಲಿದೆ" ಎಂದು ತಿಳಿಸಿದ್ದರು.
ಸ್ಪಷ್ಟನೆ ನೀಡಿದ್ದು ಏಕೆ?: ಈ ಹೇಳಿಕೆ ವೈರಲ್ ಆದ ಬಳಿಕ ನೈಋತ್ಯ ರೈಲ್ವೆ ಸ್ಪಷ್ಟನೆ ನೀಡಿದೆ. 'ಕರ್ನಾಟಕದ ಹಳ್ಳಿಗಳಿಗೆ ರೈಲು ಸಂಪರ್ಕವನ್ನು ಹೆಚ್ಚು ಮಾಡಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಜನ ಸಾಮಾನ್ಯರ ಅನುಕೂಲಕ್ಕಾಗಿ ರೈಲುಗಳಿಗೆ ಹೆಚ್ಚುವರಿ ಸಾಮಾನ್ಯ ಬೋಗಿಗಳನ್ನು ಅಳವಡಿಸುವ ಬಗ್ಗೆಯೂ ಚಿಂತನೆ ಇದೆ' ಎಂದು ನೈಋತ್ಯ ರೈಲ್ವೆ ಹೇಳಿದೆ.
ಕರ್ನಾಟಕದಲ್ಲಿ 2022ರ ನವೆಂಬರ್ 11ರಂದು ಮೊದಲ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಾಗಿತ್ತು. ಮೈಸೂರು ಮತ್ತು ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದರು.
ಈ ರೈಲು ದೇಶದ 5ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮತ್ತು ದಕ್ಷಿಣ ಭಾರತದಲ್ಲಿ ಇಂತಹ ಮೊದಲ ರೈಲು ಸೇವೆಯಾಗಿತ್ತು. ಸಾಮಾನ್ಯ, ತತಾಬ್ದಿ ರೈಲುಗಳಿಗೆ ಹೋಲಿಕೆ ಮಾಡಿದರೆ ವಂದೇ ಭಾರತ್ ರೈಲುಗಳ ದರಗಳು ಹೆಚ್ಚು ಎಂಬುದು ಜನರ ದೂರು.
ಸದ್ಯ ಕರ್ನಾಟಕದಲ್ಲಿ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ, ಕಲಬುರಗಿ-ಬೆಂಗಳೂರು, ಬೆಂಗಳೂರು-ಕೊಯಮತ್ತೂರು, ಯಶವಂತಪುರ-ಹೈದರಾಬಾದ್ ಸೇರಿದಂತೆ ಹಲವು ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ.
ವಂದೇ ಭಾರತ್ ರೈಲಿನಲ್ಲಿ ಚೇರ್ ಕಾರ್, ಎಕ್ಸಿಕ್ಯುಟಿವ್ ಚೇರ್ ಕಾರ್ ಎಂಬ ಎರಡು ವಿಭಾಗವಿದೆ. ಈ ಎರಡು ದರಗಳು ಹೆಚ್ಚಾಗಿಯೇ ಇವೆ. ಇವುಗಳಲ್ಲಿ ವಿತ್ ಫುಡ್ ಮತ್ತು ವಿಥೌಟ್ ಫುಡ್ ದರಗಳಲ್ಲಿ ವ್ಯತ್ಯಾಸವಿದೆ.
ಭಾರತೀಯ ರೈಲ್ವೆ ಸದ್ಯ ದೇಶದಲ್ಲಿ ಸಂಚಾರ ನಡೆಸುತ್ತಿರುವ ಜನ ಶತಾಬ್ದಿ ರೈಲಿಗೆ ಪರ್ಯಾಯವಾಗಿ ವಂದೇ ಭಾರತ್ ರೈಲುಗಳನ್ನು ಓಡಿಸುತ್ತಿದೆ. ವಿವಿಧ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಈ ರೈಲುಗಳು ಐಷಾರಾಮಿ ವ್ಯವಸ್ಥೆಯನ್ನು ಒಳಗೊಂಡಿವೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡುವ ರೈಲುಗಳ ದರಗಳು ಹೆಚ್ಚಾಗಿದ್ದು, ಸಾಮಾನ್ಯ ಜನರಿಗೆ ಸಂಚಾರ ನಡೆಸಲು ಅನುಕೂಲವಾಗಿಲ್ಲ ಎಂಬುದು ದೂರು.












Click it and Unblock the Notifications