SWR: ಆಗಸ್ಟ್ 24ರಂದು ಕರ್ನಾಟಕ ರೈಲುಗಳ ತಾತ್ಕಾಲಿಕ ರದ್ದು, ನಿಯಂತ್ರಣ ಪಟ್ಟಿ, ವಿವರ
ಬೆಂಗಳೂರು, ಆಗಸ್ಟ್ 19: ಕರ್ನಾಟಕದ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಬರುವ ಅರಸೀಕೆರೆ-ಬಾಣಾವರ ಹಾಗೂ ಅರಸೀಕೆರೆ-ಹಬ್ಬನಘಟ್ಟ ಮಾರ್ಗದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಎರಡು ಮಾರ್ಗಗಳ ನಡುವೆ ಪ್ರಮುಖ ಸಿಗ್ನಲಿಂಗ್ ಮತ್ತು ಬ್ಲಾಕ್ ಇನ್ಸ್ಟ್ರುಮೆಂಟ್ ಬದಲಾವಣೆ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ, ಆಗಸ್ಟ್ 24ರಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಕೆಲ ರೈಲುಗಳ ಮರು ನಿಗದಿಗೊಂಡಿವೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಗಮನಿಸಬೇಕು.
ರದ್ದಾದ ರೈಲುಗಳ ಪಟ್ಟಿ ನೋಡುವುದಾದರೆ, ಆಗಸ್ಟ್ 23 ರಂದು ಎಸ್ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ರೈಲು (06270) ರದ್ದುಗೊಂಡಿದೆ. ಆಗಸ್ಟ್ 24ರಂದು ಮೈಸೂರು-ಎಸ್‌ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ (06269), ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್‌ಪ್ರೆಸ್ (16226), ಮೈಸೂರು-ಶಿವಮೊಗ್ಗ, ಟೌನ್ ಡೈಲಿ ಎಕ್ಸ್‌ಪ್ರೆಸ್ (16225), ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56267), ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56268), ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56266) ಮತ್ತು ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56265) ರೈಲುಗಳು ಒಂದು ದಿನ ರದ್ದುಗೊಳ್ಳಲಿವೆ ಎಂದು ನೈಋತ್ಯ ರೈಲ್ವೆ (SWR) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ.ಕನಮಡಿ ಅವರು ತಿಳಿಸಿದ್ದಾರೆ.

ಭಾಗಶಃ ರದ್ದಾದ ರೈಲುಗಳ ಪೈಕಿ, ಆಗಸ್ಟ್ 24ರಂದು ಶಿವಮೊಗ್ಗ, ಟೌನ್-ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು (ಸಂಖ್ಯೆ 56271) ಶಿವಮೊಗ್ಗ ಟೌನ್ ಮತ್ತು ಬೀರೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬೀರೂರಿನಿಂದ ಅದರ ನಿಗದಿತ ಸಮಯದಲ್ಲಿ ಪ್ರಯಾಣ ಆರಂಭಿಸಲಿದೆ ಎಂದರು.
ಈ ರೈಲು ಸಂಚಾರ 60 ನಿಮಿಷ ವಿಳಂಬ
ಕೆಲವು ರೈಲುಗಳ ಪ್ರಯಾಣ ನಿಯಂತ್ರಿಸಲಾಗಿದೆ. ಆಗಸ್ಟ್ 24ರಂದು ಹೊರಡುವ ಈ ಕೆಳಗಿನ ರೈಲುಗಳ ಪ್ರಯಾಣದಲ್ಲಿ ನಿಯಂತ್ರಣ ಮಾಡಲಾಗುತ್ತದೆ. ಯಶವಂತಪುರ-ಬಿಕಾನೇರ್ ದ್ಧಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16587) ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಲ್ದಾಣದಲ್ಲಿ ನಿಯಂತ್ರಿಸಲಾಗುತ್ತದೆ.
60-75 ನಿಮಿಷ ರೈಲುಗಳ ನಿಯಂತ್ರಣ
ಯಶವಂತಪುರ-ಟಾಟಾನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (18112), ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು (12649) ಹಾಗೂ ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ದೈನಿಕ ಎಕ್ಸ್ಪ್ರೆಸ್ ರೈಲುಗಳನ್ನು (12725) ಮಾರ್ಗ ಮಧ್ಯೆ 60-75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಬೆಳಗಾವಿ-ಮೈಸೂರು ವಿಶ್ವಮಾನವ ದೈನಿಕ ಎಕ್ಸ್‌ಪ್ರೆಸ್ ರೈಲು (17325) ಮಾರ್ಗ ಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications