ಇನ್ಸ್‌ಪೆಕ್ಟರ್ ನಂದೀಶ್ ಸಾವಿನ ಪ್ರಕರಣ: ತನಿಖೆಗೆ ಸಿಎಂ ಬೊಮ್ಮಾಯಿ ಸೂಚನೆ
ಬೆಂಗಳೂರು, ಅಕ್ಟೋಬರ್ 30: ಪೊಲೀಸ್ ಇನ್ಸಪೆಕ್ಟರ್ ನಂದೀಶ್ ಅವರ ಸಾವು ಪ್ರಕರಣ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿ ಎಲ್ಲಾ ಮಾಹಿತಿ ಪಡೆದು ತನಿಖೆ ನಡೆಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪೊಲೀಸ್ ಇನ್ಸಪೆಕ್ಟರ್ ನಂದೀಶ್ ಅವರ ಸಾವು ಪ್ರಕರಣದ ತನಿಖೆ ಕೈಗೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಿಂದೆ ಮುಂದೆ ಯೋಚಿಸುವುದಿಲ್ಲ. ಆ ಬಗ್ಗೆ ಕೂಡಲೇ ಪೊಲೀಸ್ ಮಹಾನಿರ್ದೇಶಿಕರಿಗೆ ಸೂಚಿಸಿ, ಮಾಹಿತಿ ಪಡೆಯಲಾಗುವುದು ಎಂದು ಹೇಳಿದರು.
ಅಮಾನತಗೊಂಡಿದ್ದ ಕೆ.ಆರ್.ಪುರಂ ಠಾಣೆಯ ಇನ್ಸಪೆಕ್ಟರ್ ನಂದೀಶ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ ಇದನ್ನು ಅಲ್ಲಗಳೆದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಇದು ಸಹಜ ಸಾವಲ್ಲ ಅಲ್ಲ ಇದರ ಹಿಂದೆ ಯಾರದ್ದೋ ಕೈವಾಡ ಇದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದರು. ಕಾಂಗ್ರೆಸ್ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸರಣಿ ಟ್ವಿಟ್ ಮಾಡುವ ಮೂಲಕ ಆಗ್ರಹಿಸಿದ್ದರು. ಇದು ಸರ್ಕಾರದಿಂದಲೇ ನಡೆದ ಕಗ್ಗೊಲೆ ಎಂದು ಅವರು ಆರೋಪಿಸಿದ್ದರು.

ಪ್ರಕರಣವು ಗಂಭೀರ ಸ್ವರೂಪ ಪಡೆದ ಪರಿಣಾಮ ಎಚ್ಚೆತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿ ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಬಿಜೆಪಿಯಿಂದ ರೈತ, ಮಹಿಳಾ ಸಮಾವೇಶ
ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿರುವ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ (ಒಬಿಸಿ)ವು ಅದು ದೊಡ್ಡ ಪ್ರಮಾಣದ ಬೆಂಬಲ ಬಿಜೆಪಿಗೆ ದೊರೆಯುತ್ತಿರುವ ದ್ಯೋತಕವಾಗಿ ಕಲಬುರಗಿಯಲ್ಲಿ ಸಮಾವೇಶ ಆಯೋಜನೆಗೊಂಡಿದೆ ಎಂದು ಬೊಮ್ಮಾಯಿ ಹೇಳಿದರು.
ನವೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ಸಮಾವೇಶ ನಡೆಯಲಿದೆ. ಹುಬ್ಬಳ್ಳಿಯಲ್ಲಿ ರೈತರ ಸಮಾವೇಶ ನಡೆಯಲಿದ್ದು, ಡಿಸೆಂಬರ್ ತಿಂಗಳಲ್ಲಿ ಮಹಿಳೆಯರ ಸಮಾವೇಶ ಆಯೋಜನೆ ಮಾಡಲಾಗುವುದು ಎಂದು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟಿಲ್ ಹಾಗೂ ಬಿಜೆಪಿ ಕೋರ್ ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಇಂದು ಭಾನುವಾರ ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನು ಅದ್ಧೂರಿಯಾಗಿ ಆಯೋಜಿಸಿದ್ದೇವೆ. ಸುಮಾರು ಎರಡು ಲಕ್ಷ ಜನ ಸೇರಿದ್ದು, ಒಬಿಸಿ ಮೋರ್ಚಾ ಪದಾಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದಾರೆ ಅವರು ತಿಳಿಸಿದರು.

ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ:
ಕಾಂಗ್ರೆಸ್ ಸುಳ್ಳು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಉಡುಗೊರೆ, ಹಣ ಕೊಡುವಂತೆ ನಾನು ಯಾರಿಗೂ ಸೂಚನೆಯನ್ನು ನೀಡಿಲ್ಲ. ಕಾಂಗ್ರೆಸ್ ಇದ್ದಾಗ ಹಲವಾರು ಜನರಿಗೆ ಏನೇನು ಉಡುಗೊರೆಗಳನ್ನು ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಆ ಬಗ್ಗೆ ಪತ್ರಿಕೆಗಳಲ್ಲಿ ವರದಿಯೂ ಆಗಿದೆ. ಈ ಬಗ್ಗೆ ಕಾಂಗ್ರೆಸ್‌ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಪತ್ರಕರ್ತರಿಗೆ ನೀಡಿದ ಉಡುಗೊರೆ ಕುರಿತು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.












Click it and Unblock the Notifications