Jagadsih Shettar: ಸಂತೋಷ್, ಜೋಶಿಗೆ ಶಾಕ್ ಕೊಟ್ಟ ಬಿಎಸ್‌ವೈ: ರಾಜ್ಯ ಬಿಜೆಪಿಯಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ!
ಲೋಕಸಭೆ ಚುನಾವಣೆ ಸಮೀಪವಾಗುತ್ತಿರುವ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ಬಂಡಾಯವೆದ್ದು ಬಿಜೆಪಿ ತೊರೆದಿದ್ದ ಶೆಟ್ಟರ್, ಜೀವನದಲ್ಲೇ ಬಿಜೆಪಿಗೆ ಮರಳಲ್ಲ ಎಂದು ಹೇಳಿದ್ದರು. ಆದರೆ ಈಗ ದೆಹಲಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಜಗದೀಶ್ ಶೆಟ್ಟರ್ ಅವರ ನಡೆ ಕಾಂಗ್ರೆಸ್‌ಗೆ ಆಘಾತ ಕೊಟ್ಟರೆ, ಬಿಜೆಪಿಗೆ ಬಲ ಬಂದಂತಾಗಿದೆ. ಆದರೆ ಶೆಟ್ಟರ್ ಬಿಜೆಪಿಗೆ ಸೇರುವ ಬಗ್ಗೆ ಪ್ರಲ್ಹಾದ್ ಜೋಶಿ ಮತ್ತು ಬಿಎಲ್ ಸಂತೋಷ್ ಅವರಿಗೆ ಕೂಡ ಯಾವುದೇ ಸುಳಿವು ಇರಲಿಲ್ಲ ಎಂದು ಹೇಳಲಾಗಿದೆ.

ಜಗದೀಶ್ ಶೆಟ್ಟರ್ ಬಿಎಸ್ ಯಡಿಯೂರಪ್ಪ ಮತ್ತು ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಆರೆಸ್ಸೆಸ್‌ಗಿಂತ ಲಿಂಗಾಯತ ನಾಯಕರ ಪ್ರಾಬಲ್ಯ ಹೆಚ್ಚಿದೆ ಎನ್ನುವುದು ಮತ್ತೆ ಸಾಬೀತಾಗಿದೆ.
ಬಿಎಸ್ ಯಡಿಯೂರಪ್ಪ ದಾಳ
ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರು ಪ್ರಮುಖರಾಗಿದ್ದಾರೆ. ಇಬ್ಬರೂ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಬಂಡೆದಿದ್ದ ಅವರು, ಕಾಂಗ್ರೆಸ್‌ಗೆ ಹೋಗಿದ್ದರು. ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಅವರು, ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು.
ವಿಧಾನಸಭೆ ಚುನಾವಣೆಗೆ ಮುನ್ನ ಬಿಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದ ಬಿಜೆಪಿಗೆ ಹಿನ್ನಡೆಯಾಗಿತ್ತು. ಚುನಾವಣೆ ಸೋಲಿನ ಬಳಿಕ ಬಿಎಸ್‌ವೈ ಪುತ್ರ ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಲೋಕಸಭಾ ಚುನಾವಣೆ ತಯಾರಿಯಲ್ಲಿದ್ದಾರೆ.
ಬಿಎಸ್‌ವೈ ತೆರೆಮರೆಯಲ್ಲಿ ದಾಳ ಉರುಳಿಸಿದ್ದು ಶೆಟ್ಟರ್ ಅವರನ್ನು ಮತ್ತೆ ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಆರ್ ಎಸ್‌ಎಸ್ ನಾಯಕರಿಗಿಂತ ಬಿಜೆಪಿ ನಾಯಕರ ಪ್ರಾಬಲ್ಯ ಹೆಚ್ಚಿದೆ ಎನ್ನುವ ಸಂದೇಶ ರವಾನಿಸಿದ್ದಾರೆ.
ಶೆಟ್ಟರ್ ಹೇಳಿದ್ದೇನು?
ಗುರುವಾರ ಬಿಎಸ್ ಯಡಿಯೂರಪ್ಪ ಅವರೊಂದಿಗೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಅವರು ಔಪಚಾರಿಕವಾಗಿ ಪಕ್ಷಕ್ಕೆ ಸೇರ್ಪಡೆಯಾದರು. "ಈ ಹಿಂದೆ ನನಗೆ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನೀಡಿದ ಬಿಜೆಪಿಗೆ ನಾನು ಮತ್ತೆ ಸೇರುತ್ತಿದ್ದೇನೆ." ಎಂದು ಅವರು ಬಿಜೆಪಿ ಸೇರ್ಪಡೆಯಾದ ಬಳಿಕ ಹೇಳಿದ್ದಾರೆ.
ನಾನು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರೂ ಬಿಜೆಪಿಗೆ ಮರಳಬೇಕು ಎಂದು ನನ್ನ ಬೆಂಬಲಿಗರು ಮನವಿ ಮಾಡಿದ್ದರು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ಜಾಗತಿಕವಾಗಿ ಗೌರವವನ್ನು ಗಳಿಸಿದೆ ಎಂದು ನನಗೆ ನಂಬಿಕೆ ಇದೆ ಎಂದು ಶೆಟ್ಟರ್ ಹೇಳಿದ್ದಾರೆ.
ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳಿರುವುದು ಸಂತಸದ ಸುದ್ದಿ, ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಕರ್ನಾಟಕ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications