Get Updates
Get notified of breaking news, exclusive insights, and must-see stories!

ದೇವನೂರು ಮಹಾದೇವಗೆ ಪತ್ರದ ಮೂಲಕವೇ ಉತ್ತರ ಕೊಟ್ಟ ಸುರೇಶ್ ಕುಮಾರ್!

ಬೆಂಗಳೂರು, ಮಾರ್ಚ್ 03: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿದೆ. ಇದೇ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಸುರೇಶ್ ಕುಮಾರ್ ಅವರಿಗೆ ಚಿಂತಕ, ಹಿರಿಯ ಸಾಹಿತಿ ದೇವನೂರು ಮಹಾದೇವ ಬಹಿರಂಗ ಪತ್ರ ಬರೆದಿದ್ದರು.

''ದೊರೆಸ್ವಾಮಿ ಅವರನ್ನು ''ಪಾಕ್ ಏಜೆಂಟ್'' ಎನ್ನುವುದಕ್ಕೆ ನಾಲಿಗೆ ಹೇಗೆ ಹೊರಳಿತು.? ಇಂದಿನ ನಮ್ಮ ಬಹುತೇಕ ರಾಜಕಾರಣಿಗಳಲ್ಲಿ ಕೆಲವರಿಗೆ ನಾಲಿಗೆ ಇಲ್ಲ. ಇನ್ನೂ ಕೆಲವರಿಗೆ ನಾಕಾರು ನಾಲಿಗೆಗಳು. ಇಲ್ಲಿದ್ದಾಗ ಮಾತನಾಡಲು ಒಂದು, ಇನ್ನೊಂದು ಕಡೆ ಹೋದಾಗ ಮತ್ತೊಂದು, ನುಂಗಲು ಮಗದೊಂದು'' ಎಂದು ಸುರೇಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ದೇವನೂರು ಮಹಾದೇವ ಉಲ್ಲೇಖಿಸಿದ್ದರು.

ಇದೀಗ ಇದೇ ಪತ್ರಕ್ಕೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯ ಸಾಹಿತಿ ದೇವನೂರು ಮಹಾದೇವ ರವರಿಗೆ ಪತ್ರದ ಮೂಲಕವೇ ಸುರೇಶ್ ಕುಮಾರ್ ಉತ್ತರ ಕೊಟ್ಟಿದ್ದಾರೆ.

ಸುರೇಶ್ ಕುಮಾರ್ ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ, ಓದಿರಿ...

ಸುರೇಶ್ ಕುಮಾರ್ ಬರೆದಿರುವ ಬಹಿರಂಗ ಪತ್ರ

ಸುರೇಶ್ ಕುಮಾರ್ ಬರೆದಿರುವ ಬಹಿರಂಗ ಪತ್ರ

ಹಿರಿಯರಾದ ಮಾನ್ಯ ದೇವನೂರು ಮಹಾದೇವ ರವರೇ,

ಈ "ನಿಮ್ಮ ಸುರೇಶ್ ನನ್ನು "ನಮ್ಮ ಸುರೇಶ್" ಎಂದು‌ ಪರಿಗಣಿಸಿ ನನಗೆ ಪತ್ರ ಬರೆದಿರುವುದಕ್ಕಾಗಿ ನನ್ನ ಧನ್ಯವಾದಗಳು. ನಿಮ್ಮ ಪತ್ರವನ್ನು ನಾಲ್ಕೈದು ಬಾರಿ ವಿವರವಾಗಿ ಓದಿದೆ. ನೀವು ವ್ಯಕ್ತ‌ಪಡಿಸಿರುವ ಅಭಿಪ್ರಾಯಗಳ ಪೈಕಿ ಕೆಲವುದರ ಬಗ್ಗೆ ನನ್ನ ಸಹಮತವಿಲ್ಲದಿದ್ದರೂ ನಿಮ್ಮ ಭಾವನೆಯನ್ನು ನಾನು ಪೂರ್ಣ ಗೌರವಿಸುತ್ತೇನೆ.


ಶ್ರೀ‌ ಹೆಚ್.ಎಸ್.ದೊರೆಸ್ವಾಮಿಯವರನ್ನು ನಾನು ಅನೇಕ‌ ದಶಕಗಳಿಂದ‌ ನೋಡಿಕೊಂಡು ಬಂದಿದ್ದೇನೆ, ಬೆಳೆದಿದ್ದೇನೆ. ಅವರ ಹಿರಿತನ, ಸಾಮಾಜಿಕ ಕಾಳಜಿಯ ಕುರಿತು ನನಗೆ ಗೌರವವಿದೆ. ಅವರೂ ಸಹ ನನ್ನ ಬಗ್ಗೆ ಅನೇಕ ಬಾರಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಅವರೊಡನೆ ಹಲವು ಹೋರಾಟಗಳಲ್ಲಿ ಪಾಲ್ಗೊಳ್ಳುವ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳೂ ನನಗೆ ಸಿಕ್ಕಿವೆ.

ಪರಿಭಾಷೆಯ ಕುರಿತು ಗಮನ ಹರಿಸಬೇಕು ಅಲ್ಲವೇ.?

ಪರಿಭಾಷೆಯ ಕುರಿತು ಗಮನ ಹರಿಸಬೇಕು ಅಲ್ಲವೇ.?

ಆದರೆ... ಅಂತಹ ಹಿರಿಯ ಸ್ಥಾನದ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು‌ ವ್ಯಕ್ತಪಡಿಸುವಾಗ ಉಪಯೋಗಿಸುವ ಪದಗಳು ಬಹುಮುಖ್ಯವಾಗುತ್ತವೆ. ಸೈದ್ಧಾಂತಿಕವಾಗಿ ತಾವು ವಿರೋಧಿಸುವರ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತ‌ಪಡಿಸಲು ಹಿರಿಯರಾದ ದೊರೆಸ್ವಾಮಿಯವರಿಗೆ ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅದನ್ನು ವ್ಯಕ್ತಪಡಿಸುವ ಪರಿಭಾಷೆಯ ಕುರಿತು ಸ್ವಲ್ಪ ಅವರು ಗಮನ ಹರಿಸಬೇಕಿತ್ತು.

ಕೇಳಬಾರದ ಮಾತುಗಳೇ ಬರುತ್ತಿವೆ

ಕೇಳಬಾರದ ಮಾತುಗಳೇ ಬರುತ್ತಿವೆ

"ಆಡಬಾರದ್ದನ್ನು ಆಡಿದರೆ ಕೇಳಬಾರದ್ದನ್ನು ಕೇಳಬೇಕಾಗುತ್ತದೆ" ಎಂದು ನಾನು ಹೇಳಿರುವುದು ಇಂದಿನ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಸಂಬೋಧಿಸಿ ಹೇಳಿರುವ ಮಾತು ಎಂದು ತಮಗೆ ಅನಿಸುತ್ತಿಲ್ಲವೇ? ರಾಜಕೀಯ, ಸಾಮಾಜಿಕ, ಧಾರ್ಮಿಕ... ಈ ಎಲ್ಲ ವಲಯಗಳಲ್ಲಿಯೂ ಹೆಚ್ಚಾಗಿ ಆಡಬಾರದ ಮಾತುಗಳು, ಅದಕ್ಕೆ ಪ್ರತಿಕ್ರಿಯೆಯಾಗಿ ಕೇಳಬಾರದ ಮಾತುಗಳೇ ಬರುತ್ತಿವೆ. ಮುಂಚೆಯಿಂದ ಈ ಸಮಾಜವು - ವಾದ, ಪ್ರತಿವಾದಗಳಿಗೆ ವಿಫುಲ ಅವಕಾಶಗಳನ್ನು ನೀಡಿದೆ. (Thesis ಮತ್ತು‌ Anti thesis ಸಂಘರ್ಷದಿಂದ synthesis ಹುಟ್ಟುತ್ತದೆ ಎಂಬುದೂ ಒಂದು ವಾದ)

ವಿವಾದಕ್ಕೆ ಆಸ್ಪದ ಕೊಡಬಾರದು

ವಿವಾದಕ್ಕೆ ಆಸ್ಪದ ಕೊಡಬಾರದು

ಆದರೆ, ವಾದ ಪ್ರತಿಸಲ ವಿವಾದಕ್ಕೇ ಆಸ್ಪದ ಕೊಡಬಾರದು. ದುರದೃಷ್ಟವಶಾತ್ ವಾದವನ್ನು ಮಾಡುವಾಗ, ಬಹಳ ಗಟ್ಟಿಯಾಗಿ ತಮ್ಮ‌ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಬಳಕೆಯಾಗುತ್ತಿರುವ ರೀತಿಯಲ್ಲಿಯೂ ಇಂದು‌ ಕೆಟ್ಟ ಮೇಲ್ಪಂಕ್ತಿಯನ್ನು ನಾವೆಲ್ಲಾ ಕಾಣುತ್ತಿದ್ದೇವೆ. ಅತ್ಯಂತ ಅಗತ್ಯವಿರುವ ಉತ್ತಮ ಮೇಲ್ಪಂಕ್ತಿ ಬಹಳ ಅಪರೂಪವಾಗುತ್ತಿದೆ. ವಿರೋಧದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರೂ ಅದನ್ನು ಕೇಳಿದ ವಿರೋಧಿಗಳು‌ ಸಹಾ ಅಹುದಹುದೆನ್ನಬೇಕು.

ನನ್ನ ಧರ್ಮ

ನನ್ನ ಧರ್ಮ

ನರೇಂದ್ರ ಮೋದಿಯವರ ಕುರಿತು, ಸಾವರ್ಕರ್ ಕುರಿತು ನಿಮಗೆ ನಿಮ್ಮದೇ ಆದ ಅಭಿಪ್ರಾಯ ‌ಇರುವುದು‌ ಎಷ್ಟು‌ ಸಹಜವೋ, ಹಾಗೆಯೇ‌ ನನಗೂ ನನ್ನದೇ ಆದ ಅಭಿಪ್ರಾಯ ಇರುವುದೂ ಸಹಜ‌. ನಾನು ಗೌರವಿಸುವ ಸಾವರ್ಕರ್ ಕುರಿತು, ನನ್ನ ನಾಯಕರಾದ ಮೋದಿಯವರ ಕುರಿತು ಯಾರಾದರೂ ಏನಾದರೂ ನನಗೆ ಸರಿಯಲ್ಲದ್ದನ್ನು ಹೇಳಿದರೆ‌ ಪ್ರತಿಕ್ರಿಯಿಸಬೇಕಾದ್ದು ನನ್ನ ಧರ್ಮ. ಹಾಗೆ ಪ್ರತಿಕ್ರಿಯಿಸುವಾಗ ನನ್ನ ಮಾತುಗಳ ಮೇಲೆ ನಿಯಂತ್ರಣವಿರಬೇಕು ಎಂದು‌ ಸಮಾಜ ಹೇಗೆ ಬಯಸುತ್ತದೆಯೋ, ಅದೇ‌ ರೀತಿಯ ನಿಯಂತ್ರಣ ಸಾವರ್ಕರ್ ಮತ್ತು ಮೋದಿಯವರ ವಿರುದ್ಧ ಅಭಿಪ್ರಾಯ ವ್ಯಕ್ತ ಪಡಿಸುವಾಗಲೂ ಇರಬೇಕಲ್ಲವೇ?

ಲಂಗುಲಗಾಮು ಇಲ್ಲ.!

ಲಂಗುಲಗಾಮು ಇಲ್ಲ.!

ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಮಾತುಗಳಿಗೆ ಲಂಗುಲಗಾಮೇ ಇರದ ಈ ಕಾಲದಲ್ಲಿ ಪ್ರಮುಖರು ಉಪಯೋಗಿಸುವ ಪದಗಳು ಇನ್ನಷ್ಟು ಸ್ವೇಚ್ಛಾಚಾರಕ್ಕೆ ಇಂಬು ನೀಡಬಾರದು.‌ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಭಾಪ್ರಜ್ಞೆ, ಸಂದರ್ಭಪ್ರಜ್ಞೆ ಗಳಿಗೆ ಮಹತ್ವವಿರಬೇಕು. ಒಟ್ಟಿನಲ್ಲಿ, ಇಂದಿನ‌ ಸಾರ್ವಜನಿಕ‌ ಜೀವನದಲ್ಲಿ ಕೇಳಿಬರುತ್ತಿರುವ ಪದಪುಂಜಗಳು ಯಾರಿಗೂ ಸಮಾಧಾನ ತರುತ್ತಿಲ್ಲ ಮತ್ತು ಸಮಾಜಕ್ಕೆ ಒಳಿತನ್ನೂ ಮಾಡುತ್ತಿಲ್ಲ.


ನಾನು "ಆಡಬಾರದ್ದನ್ನು ಆಡಿದರೆ, ಕೇಳಬಾರದ್ದನ್ನು ಕೇಳಬೇಕಾಗುತ್ತದೆ" ಎಂದು ಹೇಳಿದ್ದು ಕೇವಲ ಓರ್ವ ವ್ಯಕ್ತಿಯ ಕುರಿತಲ್ಲ. ಬದಲಿಗೆ ಇಂದಿನ ವಾಸ್ತವ ಪರಿಸ್ಥಿತಿಯ ಕುರಿತು ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ನನಗಾಗಿ ಮಾರ್ಗದರ್ಶಕ‌ ಮಾತುಗಳನ್ನು ಆಡಿರುವ ತಮಗೆ ಧನ್ಯವಾದಗಳು.

ವಿಶ್ವಾಸದಿಂದ,

ಎಸ್.ಸುರೇಶ್ ಕುಮಾರ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+