ಸಚಿವ ಸ್ಥಾನದಿಂದ ಕೆ ಎನ್ ರಾಜಣ್ಣ ತಲೆದಂಡ: ಕಾರಣ ಬಹಿರಂಗ
ಬೆಂಗಳೂರು, ಸೆಪ್ಟೆಂಬರ್ 06: ರಾಹುಲ್ ಗಾಂಧಿಯವರು ವಯನಾಡು, ಅಮೇಥಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ವಯನಾಡು- ಅಮೇಥಿಯಲ್ಲಿ ಅವರು ಇವಿಎಂ ಮೂಲಕ ಗೆದ್ದವರು. ನಾವು ಒಂದೆಡೆ ಸೋತರೆ ಅವಲೋಕನ ಮಾಡುತ್ತೇವೆ. ಅಂಕಿಅಂಶಗಳ ಪ್ರಕಾರ ಇವಿಎಂ ಬಂದ ಮೇಲೆ ಕಾಂಗ್ರೆಸ್ ಪಕ್ಷ 2 ಬಾರಿ ಕೇಂದ್ರದಲ್ಲಿ ಆಡಳಿತ ಪಕ್ಷವಾಗಿದೆ. ಹಲವಾರು ರಾಜ್ಯಗಳಲ್ಲಿ ರಾಜ್ಯ ಸರಕಾರವಾಗಿ ಅಧಿಕಾರ ನಡೆಸಿದೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ತಿಳಿಸಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಮಾತನಾಡುವುದು ಅಪರಾಧ. ಅದಕ್ಕೆ ಸಾಕ್ಷ್ಯ ಬೇಕೆಂದರೆ ಕಾಂಗ್ರೆಸ್ ಹಿರಿಯ ನಾಯಕ ಕೆ ಎನ್ ರಾಜಣ್ಣ ಹೇಳುತ್ತಾರೆ. 2024 ಲೋಕಸಭಾ ಚುನಾವಣೆಯಲ್ಲಿ ಮತಚೋರಿ ಎಂದು ರಾಹುಲ್ ಗಾಂಧಿಯವರು ಹೇಳುತ್ತಾರೆ. ಆ ಮತಪತ್ರ ತಯಾರಿಸಿದ್ದೇ ನಮ್ಮ ಸರಕಾರ ಇದ್ದಾಗ ಎಂದು ರಾಜಣ್ಣ ಸತ್ಯ ಹೇಳಿದ್ದರು. ಅದಕ್ಕೆ ಅವರ ತಲೆದಂಡ ಆಗಿದೆ ಎಂಬ ಕಾರಣವನ್ನ ಸುರೇಶ್ ಕುಮಾರ್ ತಿಳಿಸಿದರು.

2023 ಮೇ ತಿಂಗಳಿನಲ್ಲಿ ಇವಿಎಂ ಮೂಲಕ ಚುನಾಯಿತವಾದ ಕಾಂಗ್ರೆಸ್ಸಿನ ಈ ರಾಜ್ಯ ಸರಕಾರ ಅಧಿಕಾರಕ್ಕೆ ಬಂದಿದೆ. ಇವಿಎಂ ಬಗ್ಗೆ ನಿಮಗೆ ಸಂಶಯ ಇದ್ದಲ್ಲಿ ನೀವು ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಹೋಗಬೇಕು ಎಂದು ಶಾಸಕ ಎಸ್.ಸುರೇಶ್ ಕುಮಾರ್ ಅವರು ಅವರು ಸವಾಲು ಹಾಕಿದ್ದಾರೆ. ನಾವು ಗೆದ್ದಾಗಲೆಲ್ಲ ಚೆನ್ನಾಗಿದೆ. ಗೆಲ್ಲದೇ ಇದ್ದಾಗ ಇವಿಎಂ ಎಂಬ ಧೋರಣೆಯು ಅತ್ಯಂತ ಹಳೆಯ ರಾಜಕೀಯ ಪಕ್ಷ ಎಂದು ತನ್ನನ್ನೇ ತಾನು ಬಣ್ಣಿಸಿಕೊಳ್ಳುವ ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಸಚಿವಸಂಪುಟ ಸಭೆ ರಾಜ್ಯದ ದೃಷ್ಟಿಯಿಂದ ಅತ್ಯಂತ ಮಾರಕ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಟೀಕಿಸಿದರು. ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಈ ಕಾಲದಲ್ಲಿ ಕೃತಕ ಅಜ್ಞಾನದಿಂದ (ಆರ್ಟಿಫಿಶಿಯಲ್ ಇಗ್ನೊರೆನ್ಸ್) ಕೂಡಿದ ನಿರ್ಧಾರಗಳನ್ನು ಕೈಗೊಂಡ ಕ್ಯಾಬಿನೆಟ್ ಸಭೆ ಇದು ಎಂದು ದೂರಿದರು. ಬಹುಮತ ಇದೆ ಎಂದ ತಕ್ಷಣ ನಾವು ಮಾಡಿದ್ದೇ ಸರಿ ಎಂಬ ಅಹಂಕಾರ, ಠೇಂಕಾರವು ಸರಕಾರದ ಅಧಃಪತನಕ್ಕೆ ಹಾದಿ ಎಂದು ತಿಳಿಸಿದರು.
ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ (ಇವಿಎಂ) ಬದಲಾಗಿ ಮತಪತ್ರ (ಬ್ಯಾಲೆಟ್ ಪೇಪರ್) ಜಾರಿ ಮಾಡುವುದಾಗಿ ಹೇಳಿದ್ದಾರೆ. ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎಂದೇ ಗುರುತಿಸಿಕೊಂಡಿದೆ. ಸಿಲಿಕಾನ್ ಸಿಟಿ ಎಂಬ ಹೆಸರಿಗೇ ಇವರು ತೋರಿಸುವ ದೊಡ್ಡ ತಿರಸ್ಕಾರ ಇದು ಎಂದು ಖಂಡಿಸಿದರು.
ಇನ್ನು ಫೋನ್ ಪೇ, ಡಿಜಿಟಲ್ ಪೇಮೆಂಟ್ ಬೇಡ; ಬರಿ ಕರೆನ್ಸಿ ಇರಲಿ ಎಂಬ ನಿರ್ಧಾರ ತೆಗೆದುಕೊಂಡಾರು ಎಂಬ ಭಯ ನಮಗಿದೆ ಎಂದು ಎಸ್.ಸುರೇಶ್ ಕುಮಾರ್ ಅವರು ಹೇಳಿದರು. ಇವಿಎಂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಬೇರೆ ದೇಶಗಳೂ ಭಾರತದ ಚುನಾವಣಾ ಪದ್ಧತಿಯನ್ನು ಮೆಚ್ಚಿಕೊಂಡಿವೆ. ಅದನ್ನು ಅನುಸರಿಸುತ್ತ ಇವೆ. ಆದರೆ, ತಮ್ಮ ನಾಯಕನನ್ನು ಮೆಚ್ಚಿಸಲು, ಆ ತಾಳಕ್ಕೆ ಕುಣಿಯಲು ಇವಿಎಂ ಬಳಸುವುದಿಲ್ಲ ಎಂಬ ನಿರ್ಧಾರ ಪ್ರಕಟಿಸಿದ್ದಾರೆ.
ನಮ್ಮ ದೇಶದಲ್ಲಿ ಇವತ್ತು ಅನೇಕ ಯೋಜನೆಗಳು, ಅನೇಕ ಕಾರ್ಯಕ್ರಮಗಳು ಡಿಜಿಟಲ್ ಮಾಧ್ಯಮದ ಮೂಲಕ ನಡೆಯುತ್ತಿವೆ. ಪ್ರಧಾನಮಂತ್ರಿಯವರು ಒಂದು ಬಟನ್ ಒತ್ತಿದಾಕ್ಷಣ ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗೆ ಒಂದೆರಡು ನಿಮಿಷದಲ್ಲಿ ಹಣ ತಲುಪುತ್ತದೆ. ಅಂಥ ಪ್ರಗತಿ ಕಾಣುತ್ತಿರುವ ದೇಶದಲ್ಲಿ ಕಾಂಗ್ರೆಸ್ ಮತ್ತು ಪ್ರೋಗ್ರೆಸ್ ಆರ್ ಇನ್ ಒಪೊಸಿಟ್ ಟರ್ಮ್‍ಸ್ ಎಂದು ಟೀಕಿಸಿದರು. ಪ್ರೋಗ್ರೆಸ್ ಎಂದರೆ ಭವಿಷ್ಯದ ದೃಷ್ಟಿ. ಕಾಂಗ್ರೆಸ್ ಎಂದರೆ ಮಾರಕ ದೃಷ್ಟಿ ಎಂದು ಆರೋಪಿಸಿದರು.












Click it and Unblock the Notifications