ಕುಮಾರಸ್ವಾಮಿ ನೋಟು...ಯೋಗೇಶ್ವರ್‌ಗೆ ಓಟು: ಡಿಸಿಎಂ ಡಿ. ಕೆ. ಶಿವಕುಮಾರ್
ರಾಮನಗರ, ನವೆಂಬರ್ 11: ಕುಮಾರಸ್ವಾಮಿ ಅವರೇ ಚನ್ನಪಟ್ಟಣ ಚುನಾವಣೆಯಲ್ಲಿ ನಿಮ್ಮ ಯಾವ ಹಣ ಬಲವೂ ನಡೆಯುವುದಿಲ್ಲ. ಸ್ಟೀಲ್, ಗಣಿ ಯಾವ ದುಡ್ಡು ತಂದಿದ್ದರೂ ಜನರ ಮುಂದೆ ನಡೆಯುವುದಿಲ್ಲ. ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕೆಲಸಗಳು ಕೈ ಹಿಡಿಯಲಿವೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರೇ ನಿಮ್ಮ ಬಳಿ ಹಣ ತೆಗೆದುಕೊಳ್ಳುತ್ತಾರೆ. ಮತವನ್ನು ಯೋಗೇಶ್ವರ್‌ಗೆ ಹಾಕುತ್ತಾರೆ. ಕುಮಾರಸ್ವಾಮಿ ನೋಟು, ಯೋಗೇಶ್ವರ್‌ಗೆ ಓಟು. ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ಗಾಳಿ ಬೀಸಬೇಕು. ಅದಕ್ಕಾಗಿ ಸರ್ಕಾರದ ಎಲ್ಲಾ ಮಂತ್ರಿಗಳು ಇಲ್ಲಿಗೆ ಬಂದಿದ್ದೇವೆ. ಯೋಗೇಶ್ವರ್‌ಗೆ ಬೆಂಬಲ ನೀಡಿ ಚನ್ನಪಟ್ಟಣದ ಅಭಿವೃದ್ಧಿ ಮಾಡುತ್ತೇವೆ ಎಂದರು.

ನಮ್ಮ ಅಧಿಕಾರ ನಶ್ವರ, ನಾವು ಮಾಡುವ ಸಾಧನೆ ಅಜರಾಮರ, ಮತದಾರರೇ ಈಶ್ವರ. ಹೀಗಾಗಿ ನಾವು ನಿಮ್ಮ ಮುಂದೆ ಕೈಮುಗಿದು ನಿಂತಿದ್ದೇವೆ. ನೀವು ಅಭಿವೃದ್ಧಿಗಾಗಿ ಮತ ಹಾಕಬೇಕು ಎಂದು ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಕುಮಾರಣ್ಣ ಬಿಡದಿ ಮತ್ತು ಕೇತಗಾನಹಳ್ಳಿಯಲ್ಲಿ ಇರುವ ಜಮೀನುಗಳನ್ನು ಕೊಟ್ಟರೆ ನಾನೇ ಅದಕ್ಕೆ ದುಪ್ಪಟ್ಟು ಹಣ ಕೊಡುವೆ. ಅಲ್ಲಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿ. ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಕ್ಕಳು ಶಾಲೆಗಳ ಸ್ಥಾಪನೆ ಮಾಡಲು 25 ಎಕರೆ ಜಮೀನನ್ನು ದಾನ ಮಾಡಿದ್ದಾರೆ. ನೀವು ಒಬ್ಬರಿಗೂ ಸಹಾಯ ಮಾಡಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.
ಕಳೆದ ಬಾರಿ ರಾಮನಗರದಲ್ಲಿ ಏಕೆ ನಿಮ್ಮ ಮಗನನ್ನು ಜನರು ಗೆಲ್ಲಿಸಲಿಲ್ಲ. ನೀವು ನಿಮ್ಮ ಧರ್ಮಪತ್ನಿ, ತಂದೆ ಎಲ್ಲರೂ ಅಧಿಕಾರವನ್ನು ಅನುಭವಿಸಿದವರು. ರಾಮನಗರಕ್ಕೆ ಯಾವುದೇ ಕೆಲಸ ಮಾಡಿದ ಕಾರಣಕ್ಕೆ ನಿಖಿಲ್ ಅನ್ನು ಸೋಲಿಸಿ, ನಿಮಗೆ ಪಾಠ ಕಲಿಸಿದರು. ಯೋಗೇಶ್ವರ ಮಾಡಿದ ತಪ್ಪಿನಿಂದಾಗಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರೇ ನೀವು ಗೆದ್ದಿದ್ದೀರಿ ಎಂದರು.

ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬರದೇ ಇದ್ದಿದ್ದರೆ ನಾನು ಚನ್ನಪಟ್ಟಣದಿಂದ ಸ್ಪರ್ಧಿಸುತಿದ್ದೆ. ಕೊನೆ ಗಳಿಗೆಯಲ್ಲಿ ಯೋಗೇಶ್ವರ್ ಅವರು ನಮ್ಮ ಬಳಿ ಬಂದು ತಪ್ಪಾಯ್ತು ಎಂದು ಕೇಳಿಕೊಂಡರು. ತಕ್ಷಣವೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿಯವರ ಬಳಿ ಮಾತನಾಡಿ ಟಿಕೆಟ್ ಘೋಷಣೆ ಮಾಡಿ ಬಿ ಫಾರ್ಮ್ ಕೊಡಲಾಯಿತು. ಕಾರ್ಯಕರ್ತರ ಬಳಿ ಚರ್ಚೆ ಮಾಡಲು ಸಮಯ ಸಿಗಲಿಲ್ಲ ಅದಕ್ಕಾಗಿ ಕ್ಷಮೆ ಇರಲಿ ಎಂದರು.
ಸ್ವಾತಂತ್ರ್ಯ ಬಂದ ದಿನದಿಂದ ಇಲ್ಲಿಯ ತನಕ ಕಾಂಗ್ರೆಸ್ ಸರ್ಕಾರಗಳು ಜನರಿಗೆ ಕೊಡುಗೆ ಕೊಟ್ಟಿದೆ. ಇಂತಹ ಒಂದೇ ಒಂದು ಜನಪರ ಯೋಜನೆಗಳನ್ನು ಕುಮಾರಸ್ವಾಮಿ ಅವರೇ ನೀವು ಜಾರಿಗೆ ತಂದಿದ್ದೀರಾ? ನೀವು ಹಾಗೂ ನಿಮ್ಮ ತಂದೆ ದೇವೇಗೌಡರು ನನ್ನ ಬಗ್ಗೆ ಎಷ್ಟು ಬೇಕಾದರೂ ಟೀಕೆ ಮಾಡಿ ಆದರೆ, ನೀವು ಮಾಡಿದ ಒಂದೇ ಒಂದು ಜನಪರ ಯೋಜನೆಗಳ ಬಗ್ಗೆ ಉದಾಹರಣೆ ಕೊಡಿ. ಡಿ.ಕೆ. ಸುರೇಶ್ ಕೊರೊನಾ ಸಮಯದಲ್ಲಿ ಔಷಧಿ ಮತ್ತು ತರಕಾರಿಗಳನ್ನು ಮನೆಮನೆಗೆ ಹಂಚಿದರು. ನೀವೇನು ಮಾಡಿದ್ದೀರಿ? ಒಂದು ಸಣ್ಣ ಕಾರ್ಯಕ್ರಮ ಮಾಡದ ನಿನಗೆ ಏಕೆ ಬೇಕು ಅಧಿಕಾರ, ಎಂಎಲ್‌ಎ ಗಿರಿ. ಈಗ ಕಾರ್ಖಾನೆ ಮಾಡುತ್ತೇನೆ ಎಂದು ಹೇಳುತ್ತಾ ಇದ್ದಾರೆ ಎಂದು ಲೇವಡಿ ಮಾಡಿದರು.












Click it and Unblock the Notifications