ಸುಬುಧೇಂದ್ರ ತೀರ್ಥರಿಗೆ ಮಂತ್ರಾಲಯ ಮಠದ ಅಧಿಕಾರ
ರಾಯಚೂರು, ಮಾ.12: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿ ಅವರು ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರಿಗೆ ಆಡಳಿತಾತ್ಮಕ ಕಾರ್ಯಭಾರವನ್ನು ಅಧಿಕೃತವಾಗಿ ಹಸ್ತಾಂತರ ಮಾಡಿದ್ದಾರೆ. ಮಠಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕಿರಿಯಶ್ರೀಗಳಿಗೆ ಹಿರಿಯ ಶ್ರೀಗಳು ಸೋಮವಾರ ನೀಡುವ ಮೂಲಕ ಮಂತ್ರಾಲಯ ಮಠಕ್ಕೆ ಸಂಬಂಧಿಸಿದ ಎಲ್ಲ ಆಡಳಿತ ಜವಾಬ್ದಾರಿ ವಹಿಸಿಕೊಟ್ಟರು.
ಈ ಮೂಲಕ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ರಾಘವೇಂದ್ರ ಸ್ವಾಮೀಜಿ ಮಠ ಹಾಗೂ ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ಇರುವ 95ಕ್ಕೂ ಅಧಿಕ ಶಾಖಾ ಮಠಗಳು, ಎಂಟು ಕಲ್ಯಾಣ ಮಂಟಪಗಳು, ಏಳು ಶಿಕ್ಷಣ ಸಂಸ್ಥೆಗಳು, ಮಂತ್ರಾಲಯದಲ್ಲಿರುವ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಎಲ್ಲದರ ಆಡಳಿತ ಜವಾಬ್ದಾರಿಯನ್ನು ತಮ್ಮ ಉತ್ತರಾಧಿಕಾರಿ ಸುಬುಧೇಂದ್ರ ತೀರ್ಥರಿಗೆ ಶ್ರೀಮಠದ ಪೀಠಾಧಿಪತಿ ಪರಮಪೂಜ್ಯ ಸುಯತೀಂದ್ರ ತೀರ್ಥ ಶ್ರೀಪಾದಂಗಳವರು ನೀಡಿದ್ದಾರೆ ಎಂದು ಎಂದು ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ ತಿಳಿಸಿದ್ದಾರೆ.
ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ರಾಘವೇಂದ್ರ ಸ್ವಾಮೀಜಿ ಮಠಕ್ಕೆ ಸೇರಿದ ಸಮಸ್ತ ಶಾಖಾ ಮಠಗಳು, ಕಲ್ಯಾಣ ಮಂಟಪಗಳು, ವಿದ್ಯಾಪೀಠಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶ್ರೀಮಠಕ್ಕೆ ಸಂಬಂಧಪಟ್ಟ ಸಮಿತಿಗಳ ಎಲ್ಲ ಆಡಳಿತ ವ್ಯವಸ್ಥೆಯನ್ನೂ ಪೀಠಾಧಿ ಪತಿಗಳು ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿಗೆ ವಹಿಸಿ ಕೊಟ್ಟಿದ್ದಾರೆ ಎಂದು ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ ತಿಳಿಸಿದ್ದಾರೆ.

700 ವರ್ಷದ ಪರಂಪರೆಯಲ್ಲಿ ಇದೇ ಪ್ರಥಮ
ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ 700 ವರ್ಷದ ಪರಂಪರೆಯಲ್ಲಿ ಇದೇ ಪ್ರಥಮ ಬಾರಿಗೆ ಶ್ರೀಮಠದ ಪೀಠಾಧಿ ಪತಿ ತಮ್ಮ ಉತ್ತರಾಧಿಕಾರಿಗೆ ಮಠದ ಆಡಳಿತವನ್ನು ವಹಿಸಿಕೊಟ್ಟವರಾಗಿದ್ದಾರೆ. ಈವರೆಗಿನ ಪೀಠಾಧಿಪತಿ ಬೃಂದಾವನಸ್ಥರಾದ ಬಳಿಕ ಉತ್ತರಾಧಿಕಾರಿ ಸ್ವಾಮೀಜಿ ಶ್ರೀಮಠದ ಆಡಳಿತವನ್ನು ವಹಿಸಿಕೊಳ್ಳುತ್ತಿದ್ದರು.

ಶ್ರೀಮಠದ ಆಡಳಿತ ವ್ಯವಸ್ಥೆ ವಹಿಸಿಕೊಟ್ಟಿದ್ದಾರೆ
ಪ್ರಸ್ತುತ ಪೀಠಾಧಿಪತಿ ಜಪತಪಾನುಷ್ಠಾನ ಮತ್ತು ಮನ್ಮೂಲ ರಾಮನ ಏಕಾಂತ ಸೇವೆಯಲ್ಲಿರಲು ಬಯಸಿದ್ದು, ಈ ಕಾರಣದಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿ ಅವರು ಉತ್ತರಾಧಿಕಾರಿ ಸುಬುಧೇಂದ್ರ ತೀರ್ಥರಿಗೆ ಶ್ರೀಮಠದ ಆಡಳಿತ ವ್ಯವಸ್ಥೆ ವಹಿಸಿಕೊಟ್ಟಿದ್ದಾರೆ.

ಉತ್ತರಾಧಿಕಾರಿಯಾಗಿ ಮೆಚ್ಚುಗೆಗಳಿಸಿದ ಸುಬುಧೇಂದ್ರರು
ಮಂತ್ರಾಲಯ ಶೀರಾಘವೇಂದ್ರ ಮಠದ ಉತ್ತರಾಧಿಕಾರಿಯಾಗಿ ಸುಬುಧೇಂದ್ರ ತೀರ್ಥರನ್ನು ನೇಮಕ ಮಾಡಿ, ಹಾವೇರಿ ಜಿಲ್ಲೆ ಹೊಸರಿತ್ತಿಯ ಶಾಖಾಮಠದಲ್ಲಿ ಶನಿವಾರ(ಮೇ.25,2013) ಧಾರ್ಮಿಕ ವಿಧಿ-ವಿಧಾನಗಳ ಉತ್ತರಾಧಿಕಾರಿಗೆ ಸುಯತೀಂದ್ರತೀರ್ಥರು ಅಧಿಕಾರ ಹಸ್ತಾಂತರಿಸಿದರು.ವಯೋ ಸಹಜದಿಂದಾಗಿ ಸುಯತೀಂದ್ರ ತೀರ್ಥರ ಆರೋಗ್ಯ ಸ್ಥಿತಿಯೂ ಮೊದಲಿನಂತೆ ಉಳಿದಿಲ್ಲ ಎಂಬ ಕಾರಣಕ್ಕೂ ಅಬ್ಬರ, ಪ್ರಚಾರವಿಲ್ಲದೇ ಉತ್ತರಾಧಿಕಾರಿ ನೇಮಕ ಪ್ರಕ್ರಿಯ ಸರಳ, ಸುಂದರವಾಗಿ ನೆರವೇರಿಸಲಾಗಿತ್ತು.

ಸುಬುದೇಂದ್ರ ತೀರ್ಥರ ಪರಿಚಯ
ಸುಬುಧೇಂದ್ರ ತೀರ್ಥ(43)ರ ಮೂಲ ನಾಮ: ರಾಜ ಪವಮಾನಾಚಾರ್ಯ. ಪೂರ್ವಾಶ್ರಮದ ತಂದೆ ರಾಜ ಗಿರಿಯಾಚಾರ್ಯ. ಪೂರ್ವಾಶ್ರಮದ ಪತ್ನಿ ಭಾರತಿ ಹಾಗೂ ಮಕ್ಕಳು: ಅಪ್ರಮೇಯ, ಅಪರ್ಣಾ, ಅಭಿಘ್ನಾ, ಅನಘಾ.
ಸುಬುಧೇಂದ್ರ ತೀರ್ಥರು ವೇದ ವೇದಾಂತ ಅಧ್ಯಯನ, ಶಾಸ್ತ್ರಾಧ್ಯಯನ, ಶ್ರೀಮನ್ನ್ಯಾಯ ಸುಧಾ ಮಂಗಳ ಪದವಿ ಪಡೆದಿದ್ದಾರೆ.ಮಂತ್ರಾಲಯದಲ್ಲಿ ವ್ಯಾಸದಾಸ ಸಾಹಿತ್ಯ ಸಮನ್ವಯ ಪೀಠ ಸ್ಥಾಪಿಸಿ ಅದರ ಮೂಲಕ ಅನೇಕ ಗ್ರಂಥಗಳ ಮುದ್ರಣ ಹಾಗೂ ಪ್ರಸಾರ ಕಾರ್ಯ ಮಾಡಿದ್ದಾರೆ. ಶ್ರೀಮಠದೊಂದಿಗೆ ಕಳೆದ ಅನೇಕ ದಶಕಗಳ ಸಂಬಂಧ ಹೊಂದಿದ್ದು, ತಾತ ಶ್ರೀಸುಜಯೀಂದ್ರತೀರ್ಥರ ಕಾಲದಿಂದಲೂ ಶ್ರೀಮಠದೊಂದಿಗೆ ಒಡನಾಟ ಹೊಂದಿದ್ದಾರೆ. ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠದ ದಿವಾನರಾಗಿ ಕಾರ್ಯನಿರ್ವಹಿಸಿದ್ದರು.












Click it and Unblock the Notifications