ಉಪ ಲೋಕಾಯಕ್ತರಿಗೆ ಕ್ಲೀನ್ ಚಿಟ್, ಸರ್ಕಾರಕ್ಕೆ ಮುಖಭಂಗ

Posted By:
Subscribe to Oneindia Kannada

ಬೆಂಗಳೂರು, ಮೇ 27 : ಉಪ ಲೋಕಾಯಕ್ತ ಸುಭಾಷ್ ಬಿ.ಅಡಿ ಅವರ ಪದಚ್ಯುತಿ ವಿಚಾರದಲ್ಲಿ ಸರ್ಕಾರಕ್ಕೆ ಮುಖಭಂಗವಾಗಿದೆ. ಉಪಲೋಕಾಯುಕ್ತರು ಸಜ್ಜನ ಪಕ್ಷಪಾತ ನಡೆಸಿದ್ದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಸಮಿತಿ ವರದಿ ನೀಡಿದೆ.

ಉಪಲೋಕಾಯುಕ್ತರ ಪದಚ್ಯುತಿಗೆ ಪ್ರಸ್ತಾವನೆ ಸಲ್ಲಿಸಿದವರು, ಅವರು ಮಾಡಿರುವ ಆರೋಪಗಳಿಗೆ ಪೂರಕವಾದ ಸಾಕ್ಷಿಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ನ್ಯಾ.ಬೂದಿಹಾಳ್ ಅವರ ಸಮಿತಿ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮೇ 20ರಂದು ನೀಡಿದ ವರದಿಯಲ್ಲಿ ಹೇಳಿದೆ. [ಉಪ ಲೋಕಾಯುಕ್ತರ ಕೆಲಸಕ್ಕೆ ಅಡ್ಡಿ ಇಲ್ಲ]

subhash b adi

ಗುರುವಾರ ಈ ಕುರಿತು ಆದೇಶ ಹೊರಡಿಸಿರುವ ಕಾಗೋಡು ತಿಮ್ಮಪ್ಪ ಅವರು, 'ಸುಭಾಷ್ ಬಿ. ಅಡಿ ಅವರ ಪದಚ್ಯುತಿ ಕುರಿತು ತನ್ವೀರ್ ಸೇಠ್‌ ಅವರು ಸಲ್ಲಿಸಿದ್ದ ಪ್ರಸ್ತಾವನೆ ಕುರಿತ ಮುಂದಿನ ಪ್ರಕ್ರಿಯೆಗಳನ್ನು ಕೈಬಿಡಲಾಗಿದೆ' ಎಂದು ಹೇಳಿದ್ದಾರೆ. ಇದರಿಂದ ಸುಭಾಷ್ ಬಿ.ಅಡಿ ಅವರು ಆರೋಪ ಮುಕ್ತರಾಗಿದ್ದಾರೆ. [ಉಪ ಲೋಕಾಯುಕ್ತರ ರಿಟ್ ಅರ್ಜಿ ವಜಾ]

ವಿವಾದಕ್ಕೆ ಕಾರಣವಾಗಿದ್ದ ಪತ್ರ : ಕರ್ನಾಟಕದ ಪ್ರತಿಪಕ್ಷಗಳು ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರ ಪದಚ್ಯುತಿಗೆ ಪ್ರಸ್ತಾವನೆ ಮಂಡಿಸಿದ್ದವು. ಈ ಸಮಯದಲ್ಲಿ ಕಾಂಗ್ರೆಸ್, ಬಿಜೆಪಿ ಅಧಿಕಾರದಲ್ಲಿದ್ದಾಗ ನೇಮಕ ಮಾಡಿದ ನ್ಯಾ.ಸುಭಾಷ್ ಬಿ.ಅಡಿ ಅವರ ಪದಚ್ಯುತಿ ನಿರ್ಣಯವನ್ನು ಸದನದಲ್ಲಿ ಮಂಡಿಸಿದ್ದವು.

1ನೇ ಉಪ ಲೋಕಾಯುಕ್ತರಾಗಿದ್ದ ನ್ಯಾ.ಎಸ್.ಬಿ. ಮಜಗೆ ಅವರ ವ್ಯಾಪ್ತಿಗೆ ಬರುವ ಡಾ. ಶೀಲಾ ಪಾಟೀಲ ವಿರುದ್ಧದ ಇಲಾಖಾ ವಿಚಾರಣೆಯನ್ನು ಕೈಬಿಡಬಹುದು ಎಂದು ಅಡಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಪತ್ರದ ಅನ್ವಯ ಡಾ. ವಿಚಾರಣೆಯನ್ನು ಸರ್ಕಾರ ಕೈಬಿಟ್ಟಿತ್ತು. ಅಡಿ ಅವರು ಈ ಕುರಿತು ಪತ್ರ ಬರೆದಿದ್ದಕ್ಕೆ ಮಜಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

'ನನ್ನ ವ್ಯಾಪ್ತಿಯ ಪ್ರಕರಣವನ್ನು ಮತ್ತೊಬ್ಬ ಉಪ ಲೋಕಾಯುಕ್ತರು ವಿಲೇವಾರಿ ಮಾಡಿರುವುದು ಕಾನೂನುಬಾಹಿರ' ಎಂದು ಮಜಗೆ ಅವರು ಪತ್ರದಲ್ಲಿ ಹೇಳಿದ್ದರು. ಕಾಂಗ್ರೆಸ್‌ ಶಾಸಕರು ಈ ಪತ್ರವನ್ನು ಮುಂದಿಟ್ಟುಕೊಂಡು ಅಡಿ ಅವರ ಪದಚ್ಯುತಿಗೆ ಮುಂದಾಗಿದ್ದರು.

ಸ್ಪೀಕರ್‌ಗೆ ಪ್ರಸ್ತಾವನೆ : ಉಪ ಲೋಕಾಯುಕ್ತರು ಸ್ವಜನಪಕ್ಷಪಾತ ನಡೆಸಿದ್ದಾರೆ. ಆದ್ದರಿಂದ, ಅವರನ್ನು 2ನೇ ಉಪಲೋಕಾಯುಕ್ತ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಎಂದು 78 ಕಾಂಗ್ರೆಸ್ ಶಾಸಕರು ತನ್ವೀರ್ ಸೇಠ್ ಅವರ ನೇತೃತ್ವದಲ್ಲಿ ಸ್ಪಿಕರ್‌ಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಡಾ.ಶೀಲಾ ಪಾಟೀಲ ಅವರು ಮೂಲತಃ ಧಾವಾಡದವರು. ಸುಭಾಷ್ ಅಡಿ ಅವರು ಅಲ್ಲಿಯವರಾಗಿದ್ದು, ಈ ಪ್ರಕರಣದಲ್ಲಿ ಅವರು ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ್ದಾರೆ. ಆದ್ದರಿಂದ, ಅವರನ್ನು ಪದಚ್ಯುತಿಗೊಳಿಸಬೇಕು ಎಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದರು.

ಸಮಿತಿ ರಚನೆ : ಶಾಸಕರು ಸಲ್ಲಿಸಿದ ಪ್ರಸ್ತಾವನೆ ಕುರಿತು ಅಡ್ವೊಕೇಟ್ ಜನರಲ್, ಕಾನೂನು ಇಲಾಖೆಯ ಅಧಿಕಾರಿಗಳು ಹಾಗೂ ಲೋಕಾಯುಕ್ತ ರಿಜಿಸ್ಟ್ರಾರ್‌ ಜೊತೆ ಸಭೆ ನಡೆಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಆರೋಪಗಳ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಅವರಿಗೆ ಮನವಿ ಮಾಡಿದ್ದರು. ನ್ಯಾಯಮೂರ್ತಿಗಳು ಬೂದಿಹಾಳ್ ಅವರ ಸಮಿತಿ ರಚಿಸಿದ್ದರು.

ಕಾನೂನು ಹೋರಾಟ : ಸುಭಾಷ್ ಬಿ.ಅಡಿ ಅವರು ತಮ್ಮ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಿದ್ದನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಕಾನೂನು ಹೋರಾಟ ನಡೆಸಿದ್ದರು. ಆದರೆ, ಹೈಕೋರ್ಟ್ ಸಮಿತಿ ವಿಚಾರಣೆ ನಡೆಯುವಾಗ ಕೋರ್ಟ್ ಅರ್ಜಿಯ ವಿಚಾರಣೆ ನಡೆಸುವುದಿಲ್ಲ ಎಂದು ಸ್ಟಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Major setback to congress government in Karnataka. Justice R.B. Budihal who was appointed to look into the charges made against Upa Lokayukta Justice Subhash B.Adi has given a clean chit to Justice Adi. 78 Congress MLA's submitted letter to Speakar Kagodu Thimmappa to move a motion for removing Upalokayukta Justice Subhash B.Adi.
Please Wait while comments are loading...