BS Yediyurappa: ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ- ಬಿಜೆಪಿಯ ಎಡಬಿಡಂಗಿ ನೀತಿಗೆ ಸಾಕ್ಷಿ ಎಂದ ಕಾಂಗ್ರೆಸ್
ಬೆಂಗಳೂರು, ಮಾರ್ಚ್ 27: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ಮಾಜಿ ಸಿಎಂ ಹಾಗೂ ಭಾರತೀಯ ಜನತಾ ಪಕ್ಷದ ( BJP ) ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ( BS Yediyurappa ) ನಿವಾಸದ ಮೇಲೆ ಬಂಜಾರ ಸಮುದಾಯದವರು ದಾಳಿ ಮಾಡಿದ್ದಾರೆ. ಮೀಸಲಾತಿ ಹಂಚಿಕೆ ವಿಚಾರವಾಗಿ ನಡೆದಿರುವ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದೆ. ಈ ವೇಳೆ ಬಿಎಸ್‌ವೈ ನಿವಾಸದ ಮೇಲೆ ಕಲ್ಲು ತೂರಾಟವೂ ನಡೆದಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕವು, 'ಬಿಜೆಪಿ ಮಾಡುವ ಅವಾಂತರಗಳಿಗೆ ಬಿಜೆಪಿಯೇ ಶಾಸ್ತಿ ಅನುಭವಿಸಲಿದೆ ಎಂಬುದು ಬಿಎಸ್‌ವೈ ಅವರ ಮನೆಯ ಕಲ್ಲೆಸೆತವೇ ನಿದರ್ಶನ. ತಳ ಸಮುದಾಯಗಳಿಗೆ ದ್ರೋಹವೆಸಗುತ್ತಿರುವ ಬಸವರಾಜ ಬೊಮ್ಮಾಯಿ ಅವರ ಮೂಗಿಗೆ ತುಪ್ಪ ಸವರುವ ಕುತಂತ್ರ ಜನತೆಗೆ ಅರ್ಥವಾಗಿದೆ. ಸ್ವತಃ ಬಿಜೆಪಿಯ ಸಚಿವರೇ ಮೀಸಲಾತಿ ಅವಾಂತರದ ವಿರುದ್ಧ ನಿಂತಿರುವುದು ಬಿಜೆಪಿಯ ಎಡಬಿಡಂಗಿ ನೀತಿಗೆ ಸಾಕ್ಷಿ' ಎಂದು ಕಾಂಗ್ರೆಸ್ ಹೇಳಿದೆ.

'ಮೀಸಲಾತಿ ಎಂಬ ಬಿಜೆಪಿಯ ಚುನಾವಣಾ ಗಿಮಿಕ್‌ಗಳಿಗೆ ಜನ ಆಕ್ರೋಶಗೊಂಡಿದ್ದಾರೆ. ಈ ನಕಲಿ ಗಿಮಿಕ್‌ಗಳಿಗೆ ತಕ್ಕ ಬೆಲೆ ತೆರಲಿದೆ ಬಿಜೆಪಿ. ಬಂಜಾರ ಸಮುದಾಯ ಸಿಡಿದೆದ್ದು ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಜನವಿರೋಧಿ ಬಿಜೆಪಿಗೆ ಪಾಠ ಕಲಿಸಲು ಮುಂದಾಗಿದೆ. ಬಸವರಾಜ ಬೊಮ್ಮಾಯಿ ಅವರ ಎಡಬಿಡಂಗಿತನ ಅವರಿಗೇ ಮುಳುವಾಗುವುದು ನಿಶ್ಚಿತ' ಎಂದೂ ಕೆಪಿಸಿಸಿ ಟ್ವೀಟ್ ಮಾಡಿದೆ.
ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಂಜಾರ ಸಮುದಾಯದವರು ಮತ್ತು ಇತರರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸದ ಮೇಲೆ ಸೋಮವಾರ ಕಲ್ಲು ತೂರಾಟ ನಡೆಸಿದ್ದಾರೆ.
ಬೆಳಗ್ಗೆ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪೊಲೀಸ್ ಬ್ಯಾರಿಕೇಡ್ ಮುರಿದು ಬಿಎಸ್ ಯಡಿಯೂರಪ್ಪ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ಏಕಾಏಕಿ ಕಲ್ಲು ತೂರಾಟ ನಡೆಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಜಲಫಿರಂಗಿ ಬಳಸಿ ಗುಂಪನ್ನು ಚದುರಿಸಿದ್ದಾರೆ.

ಘಟನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನು ಸುಟ್ಟು ಹಾಕಿದ್ದಾರೆ.
ಶಿಕಾರಿಪುರ ಪಟ್ಟಣದಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯನ್ನು ಖಂಡಿಸಿದ ಬೊಮ್ಮಾಯಿ, ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಸದಾಶಿವ ಆಯೋಗದ ವರದಿಯನ್ನು ನಾವು ಜಾರಿಗೊಳಿಸಿಲ್ಲ. ನಾವು ಸಂಪುಟ ಸಭೆಯಲ್ಲಿ ಮಾತ್ರ ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಶಿಕಾರಿಪುರದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಮುಂದಿನ ದಿನಗಳಲ್ಲಿ ಶಿಕಾರಿಪುರಕ್ಕೆ ಭೇಟಿ ನೀಡಿ ಸಮಾಜದ ಮುಖಂಡರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರವು ಇತ್ತೀಚಿನ ಕ್ಯಾಬಿನೆಟ್ ಸಭೆಯಲ್ಲಿ ಸುಮಾರು 101 ಪರಿಶಿಷ್ಟ ಜಾತಿಗಳಿಗೆ ಮೀಸಲಿರುವ ಶೇ 17 ಕೋಟಾದಲ್ಲಿ ಆಂತರಿಕ ಮೀಸಲಾತಿಯನ್ನು ತೆರವುಗೊಳಿಸಿದೆ. ಮಾದಿಗರು ಸೇರಿದಂತೆ 29 ಸಮುದಾಯಗಳನ್ನು ಒಳಗೊಂಡಿರುವ ಎಸ್‌ಸಿ ಎಡ ವರ್ಗವು ಶೇ 6 ರಷ್ಟು ಕೋಟಾವನ್ನು ಪಡೆಯುತ್ತದೆ. ಆದರೆ ಎಸ್‌ಸಿ ಬಲ, ಹೊಲೆಯರಂತಹ ಸುಮಾರು 25 ಸಮುದಾಯಗಳು ಶೇಕಡಾ 5.5 ಪಡೆಯುತ್ತವೆ. ಬಂಜಾರರು ಮತ್ತು ಭೋವಿಗಳಂತಹ ಸಮುದಾಯಗಳು ಶೇಕಡಾ 4.5 ರಷ್ಟು ಕೋಟಾವನ್ನು ಹೊಂದಿರುತ್ತಾರೆ.












Click it and Unblock the Notifications