ದೇವೇಗೌಡ್ರ 'ಕ್ರಾಸ್ ವೋಟಿಂಗ್' ರಾಜಕೀಯ ದಾಳಕ್ಕೆ ಕಾಂಗ್ರೆಸ್ ಸುಸ್ತು?

Written By:
Subscribe to Oneindia Kannada

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತ್ತು ಕರ್ನಾಟಕ ಮೇಲ್ಮನೆಯ ಏಳು ಸ್ಥಾನಗಳಿಗೆ ಜೂನ್ 11ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ (ಮೇ 31) ಕೊನೆಯ ದಿನ.

ಪ್ರಮುಖವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ಡಿ ಕೆ ಶಿವಕುಮಾರ್ ಮತ್ತು ದೇವೇಗೌಡ ಕುಟುಂಬದ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಈ ಚುನಾವಣೆ ಮತ್ತೊಮ್ಮೆ ವೇದಿಕೆಯಾಗಿ ರೂಪುಗೊಂಡಿದೆ. (ಜೆಡಿಎಸ್ ಅಭ್ಯರ್ಥಿಗೆ ಖೇಣಿ ಬೆಂಬಲ)

ಪಕ್ಷೇತರ ಶಾಸಕರು ದೇವೇಗೌಡ್ರ ಮನೆಯಂಗಣದಲ್ಲಿ ಕಾಣಿಸಿಕೊಂಡ ಮರುದಿನವೇ ಆಖಾಡಕ್ಕಿಳಿದಿದ್ದ ಡಿ ಕೆ ಶಿವಕುಮಾರ್, ಎಲ್ಲಾ ಪಕ್ಷೇತರ ಶಾಸಕರನ್ನು ತಮ್ಮ ಮನೆಯಂಗಣದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.

ಕನಸಿನಲ್ಲೂ ಮನೆದೇವ್ರು ಮಾವಿನಕೆರೆ ರಂಗನಾಥಸ್ವಾಮಿಯನ್ನು ನೆನೆಸಿಕೊಳ್ಳುತ್ತಾ ರಾಜಕೀಯದ ಬಗ್ಗೆ ಚಿಂತಿಸುವ ದೇವೇಗೌಡ್ರು, ಪುತ್ರ ಕುಮಾರಸ್ವಾಮಿಯ ಮುಖಾಂತರ ಹೂಡಿರುವ ಹೊಸ ರಾಜಕೀಯ ದಾಳ ಕಾಂಗ್ರೆಸ್ಸಿಗೆ ನಾಮಪತ್ರ ಸಲ್ಲಿಸುವ ಕೊನೆಯ ಹಂತದಲ್ಲಿ ತಮ್ಮ ಗೇಂ ಪ್ಲಾನ್ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ. (ರಾಜ್ಯಸಭೆ ಚುನಾವಣೆ 2016, ಅಭ್ಯರ್ಥಿಗಳ ಆಸ್ತಿ ವಿವರ)

ರಾಜಕೀಯ, ಚುನಾವಣೆ ನಮಗೇನು ಹೊಸತಲ್ಲ, ನಮ್ಮಲ್ಲಿ ಐವರು ಅತೃಪ್ತ ಶಾಸಕರಿದ್ದರೆ, ನಿಮ್ಮಲ್ಲಿ ಐವತ್ತು ಅತೃಪ್ತ ಶಾಸಕರಿದ್ದಾರೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆ, ಕಾಂಗ್ರೆಸ್ ವಲಯದಲ್ಲಿ 'ಅವರಾರು' ಅತೃಪ್ತರು ಎಂದು ಒಬ್ಬರೊನ್ನೊಬ್ಬರು ಸಂಶಯ ದೃಷ್ಟಿಯಲ್ಲಿ ನೋಡುವಂತಾಗಿದೆ. ಮುಂದೆ ಓದಿ..

ಜಮೀರ್ ಅಹಮದ್

ಜಮೀರ್ ಅಹಮದ್

ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಖಡಾಖಂಡಿತವಾಗಿ ನಾನು ಸೇರಿ, ಜೆಡಿಎಸ್ ಪಕ್ಷದ ಐವರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆಂದು ಹೇಳಿದ್ದರೂ, ಜಮೀರ್ ಹೊರತು ಪಡಿಸಿ ಇತರರು (ಅದು ಚೆಲುವರಾಯಸ್ವಾಮಿ, ಬಾಲಕೃಷ್ಣ, ಆಗಲಿ ಇನ್ನೊಬ್ಬರಾಗಲಿ) ತಮ್ಮ ನಿಲುವಿನ ಮೇಲೆ ಇನ್ನೂ ಸ್ಪಷ್ಟತೆ ತೋರಿಲ್ಲ. ಕುಮಾರನ ಮಾತು ಕೇಳದಿದ್ದರೂ, ಕೊನೇ ಕ್ಷಣದಲ್ಲಿ ನನ್ನ ಮಾತನ್ನು ಇವರು ಕೇಳುತ್ತಾರೆ ಎನ್ನುವುದು ಗೌಡರ ರಾಜಕೀಯ ವಯಸ್ಸಿನ ಲೆಕ್ಕಾಚಾರವಾಗಿರಬಹುದು.

ಕುಮಾರಸ್ವಾಮಿ ಗಂಭೀರ ಹೇಳಿಕೆ

ಕುಮಾರಸ್ವಾಮಿ ಗಂಭೀರ ಹೇಳಿಕೆ

ಕಾಂಗ್ರೆಸ್ಸಿನ ಅಸಮಾಧಾನಿತ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಮ್ಮಲ್ಲಿ ಐವರಿದ್ದರೆ ನಿಮ್ಮಲ್ಲಿ ಐವತ್ತು ಅತೃಪ್ತ ಶಾಸಕರಿದ್ದಾರೆ ಎನ್ನುವ ಕುಮಾರಸ್ವಾಮಿಯ ಹೇಳಿಕೆಯೇ ಕಾಂಗ್ರೆಸ್ ಪಕ್ಷಕ್ಕೆ ತಲೆನೋವು ತರುವಂತದ್ದು. ಅದರಲ್ಲೂ ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರಿಗೆ. ಕಾಂಗ್ರೆಸ್ಸಿಗೆ ಇನ್ನೊಂದು ತಲೆನೋವಾಗಿ ಪರಿಣಮಿಸಿರುವ ವಿಚಾರವೇನಂದರೆ, ಜೆಡಿಎಸ್ ಕಣಕ್ಕಿಳಿಸಿರುವ ಅಭ್ಯರ್ಥಿ..

ಕಾಂಗ್ರೆಸ್ ಶಾಸಕನ ಸಹೋದರ ಜೆಡಿಎಸ್ ಅಭ್ಯರ್ಥಿ

ಕಾಂಗ್ರೆಸ್ ಶಾಸಕನ ಸಹೋದರ ಜೆಡಿಎಸ್ ಅಭ್ಯರ್ಥಿ

ಜೆಡಿಎಸ್ ರಾಜ್ಯಸಭೆಗೆ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಯಿದ್ದಿನ್‌ ಬಾವಾ ಅವರ ಖಾಸಾ ಸಹೋದರ, ಉದ್ಯಮಿ ಬಿ ಎಂ ಫಾರೂಕ್ ಅವರನ್ನು. ನಿಮ್ಮಲ್ಲಿ ಐವತ್ತು ಅತೃಪ್ತ ಶಾಸಕರಿದ್ದಾರೆ ಎನ್ನುವ ಎಚ್ಢಿಕೆ ಹೇಳಿಕೆ ಇಲ್ಲೇ ಮಹತ್ವ ಪಡೆದುಕೊಂಡಿರುವುದು.

ಕ್ರಾಸ್ ವೋಟಿಂಗ್ ಭಯ

ಕ್ರಾಸ್ ವೋಟಿಂಗ್ ಭಯ

ರಾಜಕೀಯ ಬೇರೆ, ವೈಯಕ್ತಿಕ ಜೀವನ ಬೇರೆ ಎಂದು ಮೊಯಿದ್ದಿನ್‌ ಬಾವಾ ಮುಖ್ಯಮಂತ್ರಿಗಳಿಂದ ಉಗಿಸಿಕೊಂಡ ನಂತರ ಹೇಳಿಕೆ ನೀಡಿದ್ದರೂ, ಕಾಂಗ್ರೆಸ್ಸಿಗೆ ಕ್ರಾಸ್ ವೋಟಿಂಗ್ ಭಯ ಕಾಡುತ್ತಿರುವುದೇ ಇಲ್ಲಿ. ಸಹೋದರನನ್ನು ಗೆಲ್ಲಿಸಲೇ ಬೇಕು ಎಂದು ಗೌಡ್ರು, ಮೊಯಿದ್ದಿನ್‌ ಬಾವಾಗೆ ಫರ್ಮಾನು ಹೊರಡಿಸಿದ್ದಾರೆ ಎನ್ನುವ ಮಾತು ವಿಧಾನಸೌಧದ ಗಾಸಿಪ್ ಗಲ್ಲಿಯಲ್ಲಿ ಹರಿದಾಡುತ್ತಿದೆ.

ಕಾಂಗ್ರೆಸ್ ಜೊತೆ ಎಲ್ಲಾ ಸಂಬಂಧ ಕಟ್

ಕಾಂಗ್ರೆಸ್ ಜೊತೆ ಎಲ್ಲಾ ಸಂಬಂಧ ಕಟ್

ಇವೆಲ್ಲಾ ಬೆಳವಣಿಗೆಯ ನಡುವೆ ಕಾಂಗ್ರೆಸ್ ಜೊತೆಗಿನ ಎಲ್ಲಾ ರಾಜಕೀಯ ಸಂಬಂಧವನ್ನು ಮುರಿದುಕೊಳ್ಳುವ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಬಿಜೆಪಿ ಮುಖಂಡರ ಜೊತೆ ಮಾತುಕತೆಗೆ ಮಂಗಳವಾರ (ಮೇ 31) ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ತಮ್ಮದೇ ಸಮುದಾಯದ ಬಿಜೆಪಿ ಮುಖಂಡ ಆರ್ ಅಶೋಕ್ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಬಹುತೇಕ ಖಚಿತ.

ಬಿಜೆಪಿ ಸಖ್ಯ

ಬಿಜೆಪಿ ಸಖ್ಯ

ಹೇಗಾದರೂ ಪಕ್ಷದ ಅಭ್ಯರ್ಥಿ ಫಾರೂಕ್ ಅವರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟಿರುವ ಗೌಡ್ರು, ಕುಮಾರನ ಮುಖಾಂತರ ಬಿಜೆಪಿ ಸಖ್ಯ ಬೆಳೆಸಲು ಮುಂದಾಗಿದ್ದು, ಇದಕ್ಕಾಗಿ ಬಿಜೆಪಿಗೆ 'ಬಿಬಿಎಂಪಿ ಚುಕ್ಕಾಣಿ' ಹಿಡಿಯಲು ಬೆಂಬಲ ನೀಡುವ ಆಫರ್ ನೀಡಿದ್ದಾರೆ ಎನ್ನುವುದು ಆಫ್ ದಿ ರೆಕಾರ್ಡ್ ವರದಿ.

ರಾಜ್ಯಸಭಾ ಕಣದಲ್ಲಿ

ರಾಜ್ಯಸಭಾ ಕಣದಲ್ಲಿ

ನಾಲ್ಕು ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಇಬ್ಬರು (ಜೈರಾಂ ರಮೇಶ್, ಆಸ್ಕರ್ ಫೆರ್ನಾಂಡಿಸ್), ಬಿಜೆಪಿಯ ನಿರ್ಮಲಾ ಸೀತರಾಮನ್ ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನುಳಿದಿರುವ ಒಂದು ಸ್ಥಾನಕ್ಕೆ ಜೆಡಿಎಸ್ಸಿನ ಫಾರೂಕ್ ಮತ್ತು ಕಾಂಗ್ರೆಸ್ಸಿನ ಕೆ ಸಿ ರಾಮಮೂರ್ತಿ ನಡುವೆ ಪೈಪೋಟಿ ಏರ್ಪಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Stiff competition between Congress and JDS for the fourth candidate for the upcoming Rajya Sabha election.
Please Wait while comments are loading...