ಅಕ್ರಮದ ವಾಸನೆ:ವಿವಿ ಅಧ್ಯಾಪಕರ ನೇಮಕಾತಿ ತಡೆ ಹಿಡಿದ ಸರ್ಕಾರ
ಬೆಂಗಳೂರು, ನವೆಂಬರ್ 7: ಅಕ್ರಮದ ಸುಳಿವು ದೊರೆತ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಅಧ್ಯಾಪಕರ ನೇರ ನೇಮಕಾತಿಗೆ ಸರ್ಕಾರ ತಡೆ ಹಿಡಿದಿದೆ.
ಮುಂದಿನ ಆದೇಶದ ವರೆಗೆ ಬೋಧಕ ಸಿಬ್ಬಂದಿಯನ್ನು ನೇರ ನೇಮಕಾತಿ ಮಾಡಿಕೊಳ್ಳದಂತೆ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ವಿವಿಗಳಲ್ಲಿ ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ, ಬೋಧಕರ ನೇಮಕಾತಿಗಳು ಯುಜಿಸಿಯ ಮಾನದಂಡಗಳಿಗೆ ವ್ಯತಿರಿಕ್ತವಾಗಿವೆ ಎಂದು ಅಭ್ಯರ್ಥಿಗಳು ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಮುಂದಿನ ಆದೇಶದವರೆಗೆ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ವಿ ಬ್ರಹ್ಮಾಚಾರಿ ಆದೇಶ ಹೊರಡಿಸಿದ್ದಾರೆ. ಸಧ್ಯಕ್ಷೆ ಯಾವುದೇ ಪ್ರಕ್ರಿಯೆಗಳು ನಡೆಯುವುದು ಅನುಮಾನವಾಗಿದೆ.

100 ಅಂಕಗಳಿಗೆ ಪರೀಕ್ಷೆ ನಡೆಸಲು ಅವಕಾಶವಿಲ್ಲ
ಯುಜಿಸಿ 2010ರಲ್ಲಿ ಜಾರಿಗೆ ತಂದಿರುವ ನಿಯಮಗಳ ಪ್ರಕಾರ ಬೋಧಕರ ನೇಮಕಾತಿಗೆ ಸಂಬಂಧಿಸಿದಂತೆ 100 ಅಂಕಗಳಿಗೆ ಲಿಖಿತ ಪರೀಕ್ಷೆಗೆ ಅವಕಾಶವಿರುವುದಿಲ್ಲ, ಯುಜಿಸಿ ನಿಯಮಗಳ ಪ್ರಕಾರ ಅರ್ಹ ಎಲ್ಲಾ ಅಭ್ಯರ್ಥಿಗಳು ಸಂಶದರ್ಶನಕ್ಕೆ ಹಾಜರಾಗಲು ಅವಕಾಶವಿದೆ.

ನಿಯಮವನ್ನು ಗಾಳಿಗೆ ತೂರಲಾಗಿದೆ
100 ಅಂಕಗಳ ಲಿಖಿತ ಪರೀಕ್ಷೆಗೆ ಅವಕಾಶವಿಲ್ಲದಿದ್ದರೂ ಲಿಖಿತ ಪರೀಕ್ಷೆಯ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಇದರಿಂದ ಅರ್ಹರು ನೇಮಕಾತಿ ಅವಕಾಶದಿಂದ ವಂಚಿತರಾಗಬೇಕಾಗುತ್ತದೆ.

ಸಹಪ್ರಾಧ್ಯಾಪಕರಿಗೆ 8 ವರ್ಷ ಕನಿಷ್ಠ ಅನುಭವ
ಸಹ ಪ್ರಾಧ್ಯಾಪಕರ ಹುದ್ದೆಯ ನೇರ ನೇಮಕಾತಿಗೆ ಕನಿಷ್ಠ 8 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವ ಅಥವಾ ಸಂಶೋಧನಾ ಅನುಭವ 2010ರ ನಿಯಮಗಳ ಅನ್ವಯ ಕಡ್ಡಾಯವಾಗಿರುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ ಸುತ್ತೋಲೆಯಲ್ಲಿ ಕನಿಷ್ಠ 5 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವ ಅಗತ್ಯತೆಗಳನ್ನು ಗೊತ್ತು ಪಡಿಸಿಸಲಾಗಿದೆ.

ಬೋಧಕರ ನೇರ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲ
ವಿಶ್ವವಿದ್ಯಾಲಯಗಳಲ್ಲಿ ಬೋಧಕರ ನೇರ ನೇಮಕಾತಿ ಮಾಡಿಕೊಂಡಲ್ಲಿ ಪಾರದರ್ಶಕತೆ ಕಾಪಾಡಲು ಆಗುವುದಿಲ್ಲ, ಇದು ದ್ವಜನ ಪಕ್ಷಪಾತಕ್ಕೆ ಎಡೆ ಮಾಡಿಕೊಡುತ್ತದೆ. ಮತ್ತು ಬೋಧಕರ ಹುದ್ದೆಯ ನೇಮಕಾತಿಗಾಗಿ ಕೆಲವು ವಿಶ್ವವಿದ್ಯಾಲಯಗಳು ಆರಂಭಿಸಿರುವ ಪ್ರಕ್ರಿಯೆ ಹಾಗೂ ನಡೆಸಿರುವ ಲಿಖಿತ ಪರೀಕ್ಷೆಗಳು ಪಾರದರ್ಶಕವಾಗಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದರು.












Click it and Unblock the Notifications