ಮೀಸಲಾತಿ ಬೇಡಿಕೆ ಪರಿಶೀಲನೆಗೆ ತ್ರಿಸದಸ್ಯ ಉನ್ನತ ಸಮಿತಿ ರಚನೆ
ಬೆಂಗಳೂರು, ಮಾರ್ಚ್ 11: ಮೀಸಲಾತಿಗಾಗಿ ಅನೇಕ ಸಮುದಾಯಗಳು ಬೇಡಿಕೆ ಇರಿಸಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಪರಿಶೀಲನೆ ನಡೆಸಿ, ಮೀಸಲಾತಿ ಹೆಚ್ಚಳ, ಒಳ ಮೀಸಲಾತಿ, ಹೊಸ ಮೀಸಲಾತಿಗಳ ಬೇಡಿಕೆಗಳನ್ನು ಪರಿಗಣಿಸುವ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದಲ್ಲಿ ತ್ರಿಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ವಿವಿಧ ಸಮುದಾಯಗಳು ಮುಂದಿರಿಸಿರುವ ಮೀಸಲಾತಿ ಬೇಡಿಕೆ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿರುವಂತೆ ಸುಭಾಷ್ ಅಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮತ್ತು ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಿ.ವಿ. ವಸಂತ್ ಕುಮಾರ್ ಈ ಸಮಿತಿಯ ಸದಸ್ಯರಾಗಿರಲಿದ್ದಾರೆ.
ಪಂಚಮಸಾಲಿ ಸಮುದಾಯವು 2 ಎ ಪ್ರವರ್ಗದಲ್ಲಿ ಮೀಸಲಾತಿ ಕೋರಿದ್ದು, ಅದರ ಕುರಿತು ಪರಿಶೀಲಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳದ ಕುರಿತು ಪರಿಶೀಲಿಸಿ ನ್ಯಾ. ನಾಗಮೋಹನದಾಸ್ ವರದಿ ನೀಡಿದ್ದಾರೆ.

ಕುರುಬ ಸಮುದಾಯವು ಎಸ್‌ಟ ಪ್ರವರ್ಗಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾರೆ. ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯದವರು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸುವಂತೆ ಕೋರಿದ್ದಾರೆ. ಹಾಗೆಯೇ ಇತರೆ ಕೆಲವು ಸಮುದಾಯಗಳು ಸಹ ಮೀಸಲಾತಿಯ ವಿವಿಧ ಬೇಡಿಕೆಗಳನ್ನು ಇರಿಸಿವೆ. ಹೀಗಾಗಿ ಇವುಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ತ್ರಿಸದಸ್ಯ ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಸಮಿತಿಗೆ ಮೀಸಲಾತಿ ಅಧ್ಯಯನ ನಡೆಸಿ ವರದಿ ನೀಡಲು ಸಮಯ ಗಡುವು ನಿಗದಿ ಮಾಡಿಲ್ಲ.












Click it and Unblock the Notifications