Government Employees: "ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ ಬದ್ಧ"
ಚಿಕ್ಕಮಗಳೂರು, ಡಿಸೆಂಬರ್ 15: ಸರ್ಕಾರಿ ನೌಕರರ ಬೇಡಿಕೆಗೆ ರಾಜ್ಯ ಸರ್ಕಾರ ಬದ್ದವಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 6 ಮತ್ತು7ನೇ ವೇತನ ಆಯೋಗವನ್ನು ಜಾರಿ ಮಾಡುವ ಮೂಲಕ ನಮ್ಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೌಕರರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ಕಡೂರು ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು ತಾಲೂಕಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆಯೂ ನೌಕರರ ನಿರೀಕ್ಷೆಗೂ ಮೀರಿ ತ್ವರಿತವಾಗಿ 7ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡಿದೆ ಎಂದು ಹೇಳಿದರು.

ಇನ್ನೂ ಅನುಷ್ಠಾನಕ್ಕಾಗಿ ಎಷ್ಟೇ ಹೊರೆ ಯಾಗಿದ್ದರೂ 21ಸಾವಿರ ಕೋಟಿ ಮಂಜೂರಾತಿ ನೀಡಿದೆ. ಅಲ್ಲದೆ ಸಂಕಷ್ಟದಲ್ಲಿದ್ದ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮೂಲಕ ನೇರವಾಗಿ ವಿಮಾ ಹಣ ಚಿಕಿತ್ಸೆಗೆಂದು ಮಂಜೂರಾಗುವಂತೆ ಮಾಡಿ ನೌಕರರ ಬಗ್ಗೆ ತನಗಿರುವ ತನ್ನ ಬದ್ಧತೆ ಪ್ರದರ್ಶಿಸಿದೆ. ನೌಕರರು ಮನಸ್ಸು ಮಾಡಿದರೆ ಸರ್ಕಾರವನ್ನೂ ಎದುರು ಹಾಕಿಕೊಂಡು ತೀರ್ಮಾನ ಕೈಗೊಳ್ಳಬಲ್ಲರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉದಾಹರಣೆಯಾಗಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ನೌಕರರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿಮ್ಮ ಕ್ರಿಯಾಶೀಲತೆಯಿಂದಲೇ ಸರ್ಕಾರಗಳು ಒಳ್ಳೆಯ ಅಥವಾ ಕೆಟ್ಟ ಹೆಸರು ಗಳಿಸುವಂತಾಗುತ್ತದೆ. ಆದ್ದರಿಂದ ನೌಕರರ ಸಂಘ ಎಲ್ಲರಿಗೂ ಸಮಾನ ನ್ಯಾಯ ಒದಗಿಸಲು ಸ್ಫೂರ್ತಿದಾಯಕವಾಗಿ ಶ್ರಮಿಸಬೇಕು. ನಿಮ್ಮ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸುವುದು ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ಕಾರ್ಯಕ್ರಮವಾಗಲಿ ಎಂದು ಹೇಳಿ ಶುಭ ಹಾರೈಸಿದರು. ಉಪನ್ಯಾಸ ನೀಡಿದ ಅಜ್ಜಂಪುರ ಶೆಟ್ರು ಸಿದ್ದಪ್ಪ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಈ.ಶಿವಕುಮಾರ್, ತ್ಯಾಗ, ಛಲ ಮತ್ತು ಪ್ರೇರಣೆಗಳು ಸಾಧನೆಗೆ ದಾರಿಯಾಗಿದ್ದು ಪೋಷಕರೇ ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಸಾಧನೆ ಮತ್ತು ಪ್ರತಿಭೆಗಳು ಗುರುತಿಸಿದರೆ ಮಾತ್ರ ಬೆಳಕಿಗೆ ಬರುತ್ತವೆ ಎಂದರು.
ನಮ್ಮ ಮಕ್ಕಳು ಸುಟ್ಟಿರದ ಮಡಕೆಯಾಗಿದ್ದು, ಶಿಕ್ಷಕರು ಮಕ್ಕಳನ್ನು ಬಾಳಿಕೆ ಬರುವ ಮಡಕೆಯಾಗಿ ರೂಪಿಸಬೇಕು. ನಮ್ಮ ಮಕ್ಕಳ ಮುಂದೆ ಸವಾಲು, ಪೈಪೋಟಿ ಇದ್ದು ಅವುಗಳನ್ನು ನಿಭಾಯಿಸಿ ಆಶಾಜೀವಿಯಾಗಿ ಬದುಕುವಂತೆ ಮತ್ತು ರಾಷ್ಟ್ರದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ನಿರ್ಮಾಣವಾಗುತ್ತವೆ ಎನ್ನುವ ನುಡಿಗೆ ತಕ್ಕಂತೆ ಬಾಳಬೇಕು ಎಂದು ಕರೆ ನೀಡಿದರು.
ಇನ್ನೂ ಕಡೂರು ಬಿಇಒ ಎಂ.ಎಚ್.ತಿಮ್ಮಯ್ಯ ಮಾತನಾಡಿ, ಸರ್ಕಾರಿ ನೌಕರರು ತಲ್ಲಣಗಳ ನಡುವೆ ಕೆಲಸ ನಿರ್ವಹಿಸುವಂತಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಆದ್ದರಿಂದ ನಮ್ಮ ವೃತ್ತಿ ಇಷ್ಟಪಟ್ಟು, ಪ್ರೀತಿಸಿ ನಿರ್ವಹಿಸಿದರೆ ನಮಗೆ ಶ್ರಮವೂ ಆಗದು, ನಮ್ಮ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಮಕ್ಕಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆ ಯಾಗುತ್ತಿದೆ. ಏಕೆಂದರೆ ಅವರಿಗೆ ಪೋಷಕರು ಎದುರಿಸುವ ಸಮಸ್ಯೆಗಳ ಅರಿವಿಲ್ಲ. ಅವರ ವೈಫಲ್ಯ ತಡೆಗಟ್ಟಲು ಬಾಂಧವ್ಯ ಗಟ್ಟಿಗೊಳಿಸುವ, ಮೌಲ್ಯ ಬೆಳೆಸುವ ಮೂಲಕ ಪೋಷಕರು ಅವರಿಗೆ ಕುಟುಂಬದ ಎಲ್ಲ ವಿಷಯಗಳ ಅರಿವು ಇರುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.












Click it and Unblock the Notifications