ಬೀದಿ ಬದಿ ವ್ಯಾಪಾರಿಗಳನ್ನು ನಿರ್ಲಕ್ಷಿಸುತ್ತಿರುವ ರಾಜ್ಯ ಸರ್ಕಾರ
ಬೆಂಗಳೂರು ಜುಲೈ 17: ಬೀದಿ ವ್ಯಾಪಾರಿಗಳನ್ನು ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರ ನಮಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ತರುವಲ್ಲಿ ವಿಫಲವಾಗುವ ಮೂಲಕ ರಾಜ್ಯ ಸರ್ಕಾರ ಬೀದಿ ಬದಿ ವ್ಯಾಪಾರಿಗಳನ್ನು ನಿರ್ಲಕ್ಷಿಸುತ್ತಿದೆ.
ಈ ಕುರಿತು 'ಒನ್ ಇಂಡಿಯಾ'ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ರಂಗಸ್ವಾಮಿ ಅವರು, ಕೊರೋನಾ ಭೀತಿ ಕಡಿಮೆಯಾದರೂ ಬೀದಿ ಬದಿ ವ್ಯಾಪಾರಿಗಳ ಆರ್ಥಿಕತೆ ಚೇತರಿಕೆ ಆಗಿಲ್ಲ. ಕಾರಣ ರಾಜ್ಯ ಸರ್ಕಾರ ವಹಿಸಿರುವ ನಿರ್ಲಕ್ಷ್ಯ ಎಂದು ದೂರಿದರು.
ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗಾಗಿ ಸಾಲ ಸೌಲಭ್ಯ, ಸಮೀಕ್ಷೆ, ಗುರುತಿನ ಚೀಟಿ ವಿತರಣೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ರಾಜ್ಯದಲ್ಲಿ ಅವುಗಳು ಅನುಷ್ಠಾನಕ್ಕೆ ಬಾರದ್ದರಿಂದ ರಸ್ತೆ ಬದಿ ವ್ಯಾಪಾರಿಗಳು ಜೀವ ದುಸ್ತರವಾಗಿದೆ. ರಾಜ್ಯದಲ್ಲಿರುವ 272 ನಗರ ಸಂಸ್ಥೆಯ ಅಡಿಯಲ್ಲಿ 'ಪಟ್ಟಣ ವ್ಯಾಪಾರಿ ಸಮಿತಿ' ಸಭೆ ನಡೆಸಬೇಕು.
ಸಭೆಯಲ್ಲಿ ಪಾಲ್ಗೊಳ್ಳುವ ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ವ್ಯವಸ್ಥಾಪಕರು, ಪಾಲಿಕೆ ಅಧಿಕಾರಿಗಳು, ಕೌಶಲ್ಯಾಭಿವೃದ್ಧಿ ಇಲಾಖೆ ಸೇರಿದಂತೆ ಸಂಬಂಧಿತ ಮುಖ್ಯಸ್ಥರು ವ್ಯಾಪಾರಿಗಳ ಸಮಸ್ಯೆ ಚರ್ಚಿಸಬೇಕು. ರಾಜ್ಯಾದ್ಯಂತ ವ್ಯಾಪಾರಿಗಳ ಸೂಕ್ತ ಸಮೀಕ್ಷೆ ನಡೆಸಿ ವ್ಯಾಪಾರಕ್ಕೆ ಅನುಮತಿ, ವ್ಯವಸ್ಥಿತ ಮಾರುಕಟ್ಟೆ, ಪರವಾನಿಗೆ ನೀಡಬೇಕು. ಸಮಿತಿ ಸದಸ್ಯರಿಗೆ ಭತ್ಯೆ ನೀಡಬೇಕು. ಪಿಎಂ ಸ್ವನಿಧಿ ಯೋಜನೆಯಡಿ ಸಾಲ ನೀಡದ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ವ್ಯಾಪಾರಿಗಳ ಬದುಕಿಗೆ ಸ್ಪೂರ್ತಿಯಾಗಬೇಕು.
ಆದರೆ ಇದ್ಯಾವುದು ಸಮರ್ಪಕವಾಗಿ ನಡೆಯುದೇ ವರ್ಷಗಳೆ ಕಳೆದಿವೆ. ರಾಜ್ಯದ 272ನಗರ ಸಂಸ್ಥೆಯಗಳ ವ್ಯಾಪ್ತಿಯಲ್ಲಿ ಟಿವಿಸಿ ಸಭೆ ಸರಿಯಾಗಿ ನಡೆಯುತ್ತಿಲ್ಲ. ಇನ್ನು ಬೆಂಗಳೂರಿನ ಎಂಟು ವಲಯಗಳ ಪೈಕಿ ಪಶ್ಚಿಮ ವಲಯ, ಪೂರ್ವ, ದಕ್ಷಿಣ ಮತ್ತು ಆರ್‌ಆರ್ ನಗರಗಳಲ್ಲಿ ಮಾತ್ರ ಸಭೆ ನಡೆದಿವೆ. ಉಳಿದಂತೆ ದಾಸರಹಳ್ಳಿ ವಲಯ, ಯಲಹಂಕ, ಮಹದೇವಪುರ ಹಾಗೂ ಬೊಮ್ಮನಹಳ್ಳಿಯಲ್ಲಿ ಸಭೆ ನಡೆಸುವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.

ವ್ಯಾಪಾರಿಗಳಿಗೆ ಆದ ಅನ್ಯಾಯವೇನು?
ಬೃಹತ್ ನಗರ ಸೇರಿದಂತೆ ರಾಜ್ಯದಲ್ಲಿ ರಸ್ತೆ ಬದಿ ಹೂ, ಹಣ್ಣು, ತರಕಾರಿ, ಚಾಟ್ಸ್, ತಿಂಡಿ, ತಿನಿಸು ಇನ್ನಿತರ ಮಾರಾಟ ಮಾಡುವ ವ್ಯಾಪಾರಿಗಳ ಸಮೀಕ್ಷೆ ನಡೆಸಬೇಕು. ಸರ್ಕಾರದ ವತಿಯಿಂದಲೇ ವ್ಯಾಪಾರಿಗಳಿಗೆ ತರಬೇತಿ ನೀಡಬೇಕು. ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಗೆ ಆಗುತ್ತಿರುವ ಪೊಲೀಸರ ತೊಂದರೆ, ಕಿರುಕುಳ ಸರಿಪಡಿಸಬೇಕು. ಪಡಿತರ ಚೀಟಿ, ಎಲ್ಲರಿಗೂ ಪರವಾನಿಗೆ, ವ್ಯವಸ್ಥಿತ ವ್ಯಾಪಾರಕ್ಕೆ ಮಾರುಕಟ್ಟೆ ಯಲ್ಲಿ ಸ್ಥಳ ನಿಗದಿ ಮಾಡಬೇಕು. ಆದರೆ ಇದ್ಯಾವುದನ್ನು ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಮಾಡದ್ದರಿಂದ ವ್ಯಾಪಾರಿಗಳಿಗೆ ಅನ್ಯಾಯವಾಗಿದೆ.

ಸಾಲ ಸೌಲಭ್ಯ ಒದಗಿಸಬೇಕು
ಮುಖ್ಯವಾಗಿ ಬ್ಯಾಂಕ್ ಗಳು ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಬೇಕು. ಪಡೆದ ಸಾಲ ತೀರಿಸಿದ ವ್ಯಾಪಾರಿಗೆ ಪುನಃ ಅದರ ದುಪ್ಪಟ್ಟು ಸಾಲ ನೀಡಿ ನೆರವಾಗಬೇಕು. ಆದರೆ ಸಾಲ ಕೇಳಿ ಸಾಕಷ್ಟು ಬಾರಿ ಬ್ಯಾಂಕ್ ಗಳಿಗೆ ಎಡತಾಕಿದರೂ ಪ್ರಯೋಜನವಾಗಿಲ್ಲ. ಸಾಲ ನೀಡಲು ಬ್ಯಾಂಕ್ ಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ ಸರ್ಕಾರದ ಯೋಜನೆಗಳು ವ್ಯಾಪಾರಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಅವರು ವಿವರಿಸಿದರು.

ವ್ಯಾಪಾರಿಗಳಿಗೆ ಮರಿಚೀಕೆಯಾದ ಯೋಜನೆಗಳು
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ 'ಪಿಎಂ ಸುರಕ್ಷಾ ಭೀಮಾ ಯೋಜನೆ', 'ಪಿಎಂ ಜೀವನ್ ಜ್ಯೋತಿ ಭೀಮಾ ಯೋಜನೆ', ಪಿಎಂ ಶ್ರಮಯೋಗಿ ಮಾನ್‌ಧನ್ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಯೋಜನೆ', ಪಿಎಂ ಸ್ವನಿಧಿ ಸಾಲ ಯೋಜನೆ, ಜನನಿ ಸುರಕ್ಷಾ ಯೋಜನೆ' ಸೇರಿದಂತೆ ವಿವಿಧ ಯೋಜನೆಗಳು ಬೀದಿ ಬದಿ ವ್ಯಾಪಾರಿಗಳಿಗೆ ಮರಿಚೀಕೆಯಾಗಿವೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಯೋಜನೆಗಳ ಲಾಭ ವ್ಯಾಪಾರಿಗಳಿಗೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ರಂಗಸ್ವಾಮಿ ಅವರು, ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಬೀದಿ ಬದಿ ವ್ಯಾಪಾರಿಗಳ ಹಿತ ಕಾಪಾಡಬೇಕು. ಅಗತ್ಯ ಎಲ್ಲ ಸರ್ಕಾರಿ ಸೌಲಭ್ಯ ನೀಡಬೇಕು. ವ್ಯಾಪಾರಿಗಳ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಜುಲೈ 18ರಂದು ಬೀದಿ ಬದಿ ವ್ಯಾಪಾರಿಗಳ ಸಂಭ್ರಮಾಚರಣೆ
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇದೇ ಜುಲೈ 18ರ ಸೋಮವಾರದಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಡಾ.ರಾಜಕುಮಾರ್ ಗಾಜಿನ ಮನೆಯಲ್ಲಿ 'ಬೀದಿ ಬದಿ ವ್ಯಾಪಾರಿಗಳ ಸಂಭ್ರಮಾಚರಣೆ' ನಡೆಯಲಿದೆ. ಕರ್ನಾಟಕ ಬೀದ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ನಡೆಸುವಂತೆ ಕೇಂದ್ರದಿಂದ ವಿವಿಧ ರಾಜ್ಯಗಳಿಗೆ ಸುಮಾರು 20ಲಕ್ಷ ರೂ. ಅನುದಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ವ್ಯಾಪಾರಿಗಳ ಮಕ್ಕಳಿಗೆ ಹಾಡು, ನೃತ್ಯ, ನಾಟಕ ಇನ್ನಿತರ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ. ಪ್ರತಿಭಾನಿತ್ವ ಮಕ್ಕಳನ್ನುಅತಿಥಿಗಳು ಗೌರವಿಸಲಿದ್ದಾರೆ.
ಸಮಾರಂಭವನ್ನು ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಸರ್ಕಾರ ಮಟ್ಟದ ಮಂತ್ರಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಈ ಸಂಧರ್ಭದಲ್ಲಾದರೂ ಬೀದಿ ಬದಿವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ವಿವಿಧ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವ, ಸಂಬಂಧಿಸಿ ಇಲಾಖೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿ ನೆರವಾಗುತ್ತದೆ ಎಂದು ಬೀದಿ ಬದಿ ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ ಎಂದು ರಂಗಸ್ವಾಮಿ ತಿಳಿಸಿದ್ದಾರೆ.












Click it and Unblock the Notifications