Get Updates
Get notified of breaking news, exclusive insights, and must-see stories!

'ಅಳಿಯನ ಕುರುಡು ಬೆಳಗಾದರೆ ಗೊತ್ತಾಗುವ' ಹಾಗೆ 'ಬಾವಿಗೆ ತಳ್ಳಿ ಆಳ ನೋಡುವ ಸಿದ್ದರಾಮಯ್ಯ'

ಬೆಂಗಳೂರು, ಆ. 21: "ದಲಿತ ಪರ ಕಾಳಜಿ, ದಲಿತೋದ್ಧಾರ, ಸಾಮಾಜಿಕ ನ್ಯಾಯ ಎಂಬ ಬರಿ ಬಾಯಿ ಮಾತಿನ ಮೂಲಕ ತುಟಿಗೆ ತುಪ್ಪ ಸವರುವಂತೆ ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರಿಗೆ, ದಲಿತೋದ್ಧಾರ ಎಂಬುದು ಗಂಟಲಿಂದ ಹೊರಗೆ ಅಂಟಿದೆ. ಅವರ ಹೃದಯದಲ್ಲಿ ಎಂದೂ ಸಹ ನೈಜವಾಗಿ ಬೆಳೆದಿಲ್ಲ ಎಂದು ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

"ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಮತ್ತು ಧ್ರುವನಾರಾಯಣ್ ಕಾಂಗ್ರೆಸ್‌ನಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. 'ಅಳಿಯನ ಕುರುಡು ಬೆಳಗಾದರೆ ಗೊತ್ತಾಗುತ್ತೆ' ಎಂಬ ಗಾದೆ ಮಾತಿನಂತೆ ಚುನಾವಣೆಗಳು ಬಂದಾಗಲೇ ರಾಮಲಿಂಗಾರೆಡ್ಡಿ, ಧ್ರುವನಾರಾಯಣ್ ಸೇರಿದಂತೆ ಪ್ರಚಾರಕ್ಕಾಗಿ ಮಾತನಾಡುವ ಕಾಂಗ್ರೆಸ್ ನಾಯಕರ ಬಣ್ಣ ಬಯಲಾಗುತ್ತದೆ" ಎಂದು ಲೇವಡಿ ಮಾಡಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ, ಮಾತಿನುದ್ದಕ್ಕೂ ಗಾದೆ ಮಾತು ಬಳಸುತ್ತಲೇ ಕಾಂಗ್ರೆಸ್ ನಾಯಕರನ್ನು ಗೇಲಿ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಸೇರಿದಂತೆ ಎಲ್ಲರ ಬಗ್ಗೆಯೂ ಒಂದೊಂದು ಗೇಲಿ ಗಾದೆ ಮಾತು ಹೇಳಿದ್ದಾರೆ!

'ಹಾಳೂರಿಗೆ ಉಳಿದವನೇ ಗೌಡ'

'ಹಾಳೂರಿಗೆ ಉಳಿದವನೇ ಗೌಡ'

"ಬಿಜೆಪಿ ನಾಯಕರ ಬಗ್ಗೆ ಮಾತನಾಡುತ್ತಲೇ ಇದ್ದರೆ ನಾವೂ ರಾಷ್ಟ್ರಮಟ್ಟದ ನಾಯಕರಾಗಿ ಮಿಂಚುತ್ತೇವೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಇಡೀ ದೇಶದಲ್ಲೇ ಕಾಂಗ್ರೆಸ್ ಪಕ್ಷ ಮಿಂಚು ಹುಳವಾಗಿ ಕಾಣಿಸಿಕೊಂಡು ಮಾಯವಾಗಿದೆ. ಭಾರತದ ಇತಿಹಾಸದಲ್ಲೇ ದೊಡ್ಡ ಪಕ್ಷ ಕಾಂಗ್ರೆಸ್‍ನಲ್ಲಿ ನಾಯಕರಿಲ್ಲದೇ ಕುಟುಂಬ ರಾಜಕಾರಣ ಕೇಂದ್ರೀಕೃತವಾಗಿ ಬೆಳೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗ 'ಹಾಳೂರಿಗೆ ಉಳಿದವನೇ ಗೌಡ' ಎಂಬಂತಾಗಿದೆ." ಎಂದು ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಗಾದೆ ಮಾತುಗಳನ್ನು ಬಳಸುವ ಮೂಲಕ ಕಾಂಗ್ರೆಸ್ ನಾಯಕರನ್ನು ತಿವಿದಿದ್ದಾರೆ.

'ಕಾಡಿಗೆ ಕಣ್ಣಿನ ಚೆಲುವೆ ಮನೆಗೆ ಕೇಡು ತಂದಳು'

'ಕಾಡಿಗೆ ಕಣ್ಣಿನ ಚೆಲುವೆ ಮನೆಗೆ ಕೇಡು ತಂದಳು'

"ಚಾಮರಾಜನಗರದಲ್ಲಿ 'ಸೋತು ಸುಣ್ಣ'ವಾಗಿರುವ ಮಾಜಿ ಸಂಸದ ಧ್ರುವನಾರಾಯಣ್ ಸ್ವಾರ್ಥ ರಾಜಕಾರಣಿ. ಎಂದೂ ಸಹ ದಲಿತ ಪರವಾದ ನಿಲುವನ್ನು ಹೊಂದದ ವ್ಯಕ್ತಿ. ಅವರು ಸಮುದಾಯದ, ಜಾತಿಗಳ ಅಭಿವೃದ್ಧಿಗೆ ಅವರ ಕೊಡುಗೆ ಏನು? ಅವರೊಬ್ಬ ಬಿಳಿ ಆನೆಯ ರೀತಿ. ಚುನಾವಣಯಲ್ಲಿ ಸೋತಿರುವ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿದ ಮೇಲೆ 'ಕಾಡಿಗೆ ಕಣ್ಣಿನ ಚಲುವೆ ಮನೆಗೆ ಕೇಡು ತಂದಳು' ಎಂಬಂತಾಗಿದೆ.

"ಅವರು ಸಂಸದರಾಗಿದ್ದಾಗ ತಳ ಸಮುದಾಯದ, ದಲಿತರ ಅಭಿವೃದ್ಧಿಗೆ ಎಂದೂ ಸಹ ಸಂಸತ್ತಿನ ಅಧಿವೇಶನದಲ್ಲಿ ತುಟಿ ಬಿಚ್ಚಲಿಲ್ಲ. ಸೋತ ನಂತರ ತನ್ನ ಉಳಿವಿಗಾಗಿ 'ಗುಂಗಾಡಿ ಹುಳುವಿನಂತೆ ಸದ್ದು ಮಾಡಿ' ಮಾಧ್ಯಮಗಳ ಮುಂದೆ ಅಬ್ಬರಿಸುತ್ತಿದ್ದಾರೆ ಎಂದು ಮತ್ತೊಂದು ನಾಣ್ಣುಡಿ ಬಳಸಿ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

'ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ'

'ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ'

ಇನ್ನು ಕಾಂಗ್ರೆಸ್ ಪಕ್ಷದಲ್ಲಿನ ಮುಂದಿನ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಛಲವಾದಿ ನಾರಾಯಣಸ್ವಾಮಿ ತಮ್ಮದೇ ದಾಟಿಯಲ್ಲಿ ವ್ಯಂಗ್ಯವಾಡಿದ್ದಾರೆ. "ಅದೇ ಪಕ್ಷದಲ್ಲಿ ಇದ್ದು ಬಂದಿರುವ ನನಗೇ ಆ ಪಕ್ಷದ ಆಂತರಿಕ ಮನಸ್ಥಿತಿಯ ಬಗ್ಗೆ ಅರಿವಿದೆ. ಅಲ್ಲಿಯ ಉನ್ನತ ನಾಯಕರಲ್ಲೇ ಭಿನ್ನಾಭಿಪ್ರಾಯಗಳಿವೆ. ಒಬ್ಬರನ್ನು ಕಂಡರೆ ಮತ್ತೊಬ್ಬರು ಸಹಿಸಿಕೊಳ್ಳುತ್ತಿಲ್ಲ. 'ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ' ಭಾವಿ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್‌ನಲ್ಲಿ ನಡೆಸಿರುವ 'ಗದ್ದಿಗೆ ಗುದ್ದಾಟ' 'ಬೂದಿ ಮುಚ್ಚಿದ ಕೆಂಡದಂತಿದೆ' ಎಂದು ತಿವಿದಿದ್ದಾರೆ.

"ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕಂಡರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಆಗದು. ಮೂಲ-ವಲಸಿಗ ಮುಖಂಡರು ಎಂಬ ಭಾವನೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಹೋಗಿಲ್ಲ" ಎಂದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳನ್ನು ತಿಳಿಸಿದ್ದಾರೆ.

'ಬಾವಿಗೆ ತಳ್ಳಿ ಆಳ ನೋಡುವುದು'

'ಬಾವಿಗೆ ತಳ್ಳಿ ಆಳ ನೋಡುವುದು'

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆಯೂ ಛಲವಾದಿ ನಾರಾಯಣಸ್ವಾಮಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. "ಕಳೆದ ವಿಧಾನಸಭೆಯ ನಂತರ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡಕ್ಕೂ ದಲಿತ ಮುಖ್ಯಮಂತ್ರಿ ಮಾಡಬೇಕೆಂಬ ಜ್ಞಾನೋದಯವಾಗಲಿಲ್ಲ. ಸಿದ್ದರಾಮಯ್ಯನವರೂ ಚಾತುರ್ವರ್ಣ ಪರಿಪಾಲಕರಂತೆ ಏಣಿಶ್ರೇಣಿಯ ಅಡಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ಶೂದ್ರರ ನಂತರ ದಲಿತರು ಎಂಬಂತೆ ತಾವೇ ಅಧಿಕಾರ ಹಿಡಿದುಬಿಟ್ಟರು. ಆದರೆ ಕೇಂದ್ರದ ಮೋದಿ ಸರ್ಕಾರ ತಮ್ಮ ಸಂಪುಟದಲ್ಲಿ ದಲಿತರಿಗೆ ಹೆಚ್ಚು ಸಚಿವ ಸ್ಥಾನ ನೀಡುವ ಮೂಲಕ ತಳ ಸಮುದಾಯದ ಅಭಿವೃದ್ಧಿಗೆ ಬದ್ಧ ಎಂದು ತೋರಿಸಿಕೊಟ್ಟಿದೆ"

"ತಮಗೆ ಅಧಿಕಾರ ಸಿಗದೇ ಇದ್ದಾಗ ತಮ್ಮನ್ನು ಸುತ್ತುವರೆದಿದ್ದ ಹಿತೈಷಿಗಳನ್ನು 'ಬಾವಿಗೆ ತಳ್ಳಿ ಆಳ ನೋಡಿದ್ದು' ಯಾರಿಗೂ ಗೊತ್ತಿಲ್ಲವೇ? ಅವರೊಬ್ಬ ಅನುಕೂಲ ಸಿಂಧು ರಾಜಕಾರಣಿ. ಜಿಡ್ಡುಗಟ್ಟಿದ ಕಾಂಗ್ರೆಸ್‌ ಪಕ್ಷಕ್ಕಿಂತ ಬಿಜೆಪಿ ಹೆಚ್ಚು ಚುರುಕಾಗಿ ತಳವರ್ಗದ ಸಮಸ್ಯೆಗಳಿಗೆ ಸ್ಪಂದಿಸಿದೆ" ಎಂದು ಇದೇ ಸಂದರ್ಭದಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

'ನೀರಿನಿಂದ ಹೊರ ತೆಗೆದ ಮೀನು'

'ನೀರಿನಿಂದ ಹೊರ ತೆಗೆದ ಮೀನು'

"ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದಿದ್ದಕ್ಕೆ, ಇಡೀ ದೇಶದಲ್ಲೇ ಅದು ತಿರಸ್ಕಾರಕ್ಕೆ ಒಳಗಾಗಿರುವ ಪಕ್ಷವಾಗಿದೆ. ಆ ಪಕ್ಷದ ದೊಡ್ಡ ದೊಡ್ಡ ನಾಯಕರೇ ತಿಹಾರ್ ಜೈಲಿನಲ್ಲಿ ವಾಸವಾಗಿ ಹೊರ ಬಂದಿದ್ದಾರೆ. ಅವರೇನು ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೇ? ಅಧಿಕಾರ ಇಲ್ಲದದಿದ್ದರಿಂದ ಆ ಪಕ್ಷದ ನಾಯಕರು 'ನೀರಿನಿಂದ ಹೊರ ತೆಗೆದ ಮೀನಿ'ನಂತೆ ಆಗಿದ್ದಾರೆ. ಅಲ್ಲಿನ ಕಾಂಗ್ರೆಸ್ ಮುಖಂಡರು. ಹೇಗಾದರೂ ಸರಿ ಅಧಿಕಾರ ಹಿಡಿದು ದೇಶದಲ್ಲಿ ಭ್ರಷ್ಟಾಚಾರದ ಹೆಮ್ಮರ ಬೆಳಸಲು ಮುಂದಾಗಿದ್ದಾರೆ" ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಷಮತೆಯಿಂದ ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಹೀಗಾಗಿ ಈಗಿನಿಂದಲೇ ಸುಳ್ಳುಗಳನ್ನು ಬಿತ್ತುತ್ತ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಜನರೇನು ದಡ್ಡರಲ್ಲ. ಸಾಮಾಜಿಕ, ರಾಜಕೀಯ ಪ್ರಜ್ಞೆ ಅವರಲ್ಲಿ ಆಳವಾಗಿ ಬೆಳೆದು ಹೆಮ್ಮರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ತಮ್ಮ ಮಾತಿನುದ್ದಕ್ಕೂ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಗಾದೆ ಮಾತುಗಳನ್ನು ಬಳಸಿ ಕಾಂಗ್ರೆಸ್ ಪಕ್ಷದ ನಾಯಕರನ್ನು ತಿವಿದಿದ್ದು ವಿಶೇಷವಾಗಿತ್ತು!

Recommended Video

      ಕಾಂಗ್ರೆಸ್ ಯೋಗ್ಯತೆ ಬಗ್ಗೆ ಮಾತನಾಡಿದ ಬಿಜೆಪಿ ಕಟೀಲ್! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+