ಮಂಡ್ಯ 75: ಮುಖ್ಯ ವೇದಿಕೆಗೆ ನಾಲ್ವಡಿ ಕೃಷ್ಣರಾಜರ ಹೆಸರು
ಮಂಡ್ಯ, ಫೆ.17: ಜಿಲ್ಲಾ ಅಮೃತ ಮಹೋತ್ಸವದ ಅಂಗವಾಗಿ ಅತ್ಯಾಕರ್ಷಕ ರೀತಿಯಲ್ಲಿ 'ಅಮೃತ ರಥ' ತಾಲೂಕುಗಳಲ್ಲಿ ಸಂಚಾರ ಆರಂಭಿಸಿದೆ. ಈ ನಡುವೆ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅತ್ಯಾಕರ್ಷಕ ವೇದಿಕೆಯ ಚಿತ್ರಗಳು ಇಲ್ಲಿ ನೀಡಲಾಗಿದೆ.
ಮಂಡ್ಯ ಜಿಲ್ಲಾ ಅಮೃತ ಮಹೋತ್ಸವದ ಮುಖ್ಯ ವೇದಿಕೆ ನಿರ್ಮಾಣ ಕಾರ್ಯಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಗಿದ್ದು, ವೇದಿಕೆ ನಿರ್ಮಾಣ ಸಮಿತಿ ಅಧ್ಯಕ್ಷ ಶಾಸಕ ಡಿ.ಸಿ.ತಮ್ಮಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕ್ರೀಡಾಂಗಣದ ಒಂದು ಭಾಗದಲ್ಲಿ 40 X 60 ಅಡಿಯ ಒಂದು ವೇದಿಕೆ ಹಾಗೂ 100 X 60 ಅಡಿಯ ಮತ್ತೊಂದು ವೇದಿಕೆ ಸಿದ್ಧಗೊಳ್ಳುತ್ತಿವೆ. ಫೆ.20ರಂದು ಒಂದು ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಫೆ.21 ಮತ್ತು 22ರಂದು ಮತ್ತೊಂದು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಡಿ.ಸಿ.ತಮ್ಮಣ್ಣ ತಿಳಿಸಿದರು. [ಮಂಡ್ಯ 75 ಜಿಲ್ಲಾ ವೈಭವ ಸಾರಲು 'ಅಮೃತ ರಥ']
ಜಿಲ್ಲೆಯ ಉಗಮಕ್ಕೆ ಕಾರಣರಾದ ಮಹನೀಯರು, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಜಾನಪದ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಅಮೋಘ ಕೊಡುಗೆ ನೀಡಿದವರ ಭಾವಚಿತ್ರಗಳಿಂದ ರಥವನ್ನು ಸಿಂಗರಿಸಲಾಗಿದೆ. ಅಮೃತ ರಥ 10 ದಿನಗಳ ಕಾಲ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ಅಂತಿಮವಾಗಿ ಮಂಡ್ಯ ನಗರಕ್ಕೆ ಬಂದು ಸೇರಲಿದೆ. [ವೇದಿಕೆ ಚಿತ್ರಕೃಪೆ: ವೇದಿಕೆ ನಿರ್ಮಾತೃ ಕೆಆರ್ ರಂಗನಾಥ್]

ಮುಖ್ಯ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು
ಮಂಡ್ಯ ಜಿಲ್ಲೆ ಉದಯವಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣಕರ್ತರಾಗಿರುವುದರಿಂದ ವೇದಿಕೆಗೆ ಅವರ ಹೆಸರನ್ನೇ ಇಡಲು ಉದ್ದೇಶಿಸಲಾಗಿದೆ. ಮತ್ತೊಂದು ವೇದಿಕೆಗೆ ಸರ್.ಮಿರ್ಜಾ ಇಸ್ಮಾಯಿಲ್, ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರಿಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಸಭೆ ನಡೆಸಿ ತೀರ್ಮಾನಿಸಲಿದ್ದಾರೆ

ಮುಖ್ಯ ವೇದಿಕೆ ನಿರ್ಮಾಣ ಉಸ್ತುವಾರಿ
ಜಿಲ್ಲಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ ಜಿ.ಬೊರಸೆ, ವೇದಿಕೆ ನಿರ್ಮಾಣ ಸಮಿತಿ ಕಾರ್ಯದರ್ಶಿ ಚನ್ನಯ್ಯ, ಶಂಕರ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ.ಸೋಮಶೇಖರ್, ಜಿಪಂ ಉಪ ಕಾರ್ಯದರ್ಶಿ ಎನ್.ಡಿ.ಪ್ರಕಾಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಹೆಚ್.ಪಿ.ಮಂಜುಳಾ ಇತರರಿದ್ದರು. ವೇದಿಕೆಯನ್ನು ಕನ್ನಡವೇ ಸತ್ಯ ಖ್ಯಾತಿಯ ರಂಗನಾಥ್ ಅವರ ತಂಡ ನಿರ್ಮಿಸುತ್ತಿದೆ.

ಮಂಡ್ಯ ಹಬ್ಬಕ್ಕೆ ಆಕರ್ಷಕ ಪ್ರಚಾರ ರಥ
ನಾಗಮಂಗಲ ತಾಲೂಕಿನ ಶ್ರೀ ಸೌಮ್ಯಕೇಶ್ವರ ದೇವಾಲಯ, ಪಾಂಡವಪುರ ತಾಲೂಕಿನ ಮೇಲುಕೋಟೆ, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಟಿಪ್ಪುವಿನ ಕೋಟೆ, ಮಳವಳ್ಳಿಯ ಶಿವನಸಮುದ್ರ ಜಲಪಾತ ಮತ್ತು ಸರ್.ಕೆ.ಶೇಷಾದ್ರಿ ಅಯ್ಯರ್ ಜಲ ವಿದ್ಯುತ್ ಉತ್ಪಾದನಾ ಕೇಂದ್ರ, ಮಂಡ್ಯ ತಾಲೂಕಿನಿಂದ ಬಸರಾಳು ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಮದ್ದೂರು ತಾಲೂಕಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ದೇವಸ್ಥಾನಗಳ ಕಲಾಕೃತಿಗಳನ್ನು ಅಳವಡಿಸಲಾಗಿದೆ.

ಮಂಡ್ಯ 75ಕ್ಕೆ ಪ್ರತ್ಯೇಕ ವೆಬ್ ಸೈಟ್ ಚಾಲನೆ
www.mandya75.com ಹೆಸರಿನಲ್ಲಿ ವೆಬ್ ಸೈಟ್ ಆರಂಭಿಸಲಾಗಿದೆ. ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ, ಜಿಲ್ಲೆಯ ಸಾಮಾನ್ಯ ಮಾಹಿತಿಯನ್ನು ಈ ವೆಬ್ ಸೈಟ್ ನಲ್ಲಿ ನೀಡಲಾಗಿದ್ದು, ಈ ವರೆಗೆ ಲಭ್ಯವಿರುವ ಮಾಹಿತಿಯನ್ನು ಅಳವಡಿಸಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ಸಾಕಷ್ಟು ಮಾಹಿತಿಯನ್ನು ವೆಬ್ ಸೈಟ್ ಅಳವಡಿಸಲಾಗುವುದು.[ಪೂರ್ಣ ವರದಿ ಇಲ್ಲಿ ಓದಿ]

ಸಾಹಿತ್ಯ, ಕಲೆ, ಜಾನಪದ, ಮನರಂಜನೆಯ ಸಂಗಮ
ಮಂಡ್ಯ ಜಿಲ್ಲಾ ಅಮೃತ ಮಹೋತ್ಸವದ ಮುಖ್ಯ ಕಾರ್ಯಕ್ರಮಗಳು ಫೆಬ್ರವರಿ 20, 21 ಮತ್ತು 22 ರಂದು ಆಯೋಜಿಸಿದ್ದು, ಪೂರಕ ಕಾರ್ಯಕ್ರಮಗಳು ಫೆಬ್ರವರಿ 7 ರಿಂದಲೇ ಆರಂಭವಾಗಿವೆ. ಈ ಎಲ್ಲಾ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ನೀಡಲಾಗಿದೆ.
ವಸ್ತುಪ್ರದರ್ಶನ, ವಿಚಾರಗೋಷ್ಠಿಗಳು ಹಾಗೂ ವಿವಿಧ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಅಮೃತ ಮಹೋತ್ಸವವು ಮಂಡ್ಯ ಜಿಲ್ಲೆಗೆ ಅಮೃತ ಘಳಿಗೆಯಾಗಿದ್ದು, ಜನಮಾನಸದಲ್ಲಿ ಉಳಿಯುವಂತೆ ಆಚರಿಸಲಾಗುತ್ತಿದೆ.











Click it and Unblock the Notifications