ಮಂಡ್ಯ 75 ಜಿಲ್ಲಾ ವೈಭವ ಸಾರಲು 'ಅಮೃತ ರಥ'
ಮಂಡ್ಯ, ಫೆ.9: ಜಿಲ್ಲಾ ಅಮೃತ ಮಹೋತ್ಸವದ ಅಂಗವಾಗಿ ಅತ್ಯಾಕರ್ಷಕ ರೀತಿಯಲ್ಲಿ 'ಅಮೃತ ರಥ' ಸಂಚಾರಕ್ಕೆ ರೆಡಿಯಾಗಿ ನಿಂತಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿರುವ ವೈಶಿಷ್ಟ್ಯಗಳನ್ನು ಕಲಾತ್ಮಕವಾಗಿ ಅರಳಿಸಿ ರಥವನ್ನು ಅಲಂಕರಿಸಲಾಗಿದೆ.
ಜಿಲ್ಲೆಯ ಉಗಮಕ್ಕೆ ಕಾರಣರಾದ ಮಹನೀಯರು, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಜಾನಪದ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಅಮೋಘ ಕೊಡುಗೆ ನೀಡಿದವರ ಭಾವಚಿತ್ರಗಳಿಂದ ರಥವನ್ನು ಸಿಂಗರಿಸಲಾಗಿದೆ. [ಅಮೃತ ಮಹೋತ್ಸವ ವೆಬ್ ಸೈಟ್ ಆರಂಭ]
ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಜೀ.ಶಂ.ಪರಮಶಿವಯ್ಯ, ಎಸ್.ಸಿ.ಮಲ್ಲಯ್ಯ, ಹೆಚ್.ಕೆ.ವೀರಣ್ಣಗೌಡ, ಬೆಸಗರಹಳ್ಳಿ ರಾಮಣ್ಣ ಸೇರಿದಂತೆ ಜಿಲ್ಲೆಗೆ ಸ್ಮರಣೀಯ ಕೊಡುಗೆ ನೀಡಿದ ದಿಗ್ಗಜರ ಭಾವಚಿತ್ರಗಳನ್ನು ರಥದ ಮೇಲ್‍ಸ್ತರದಲ್ಲಿ ಅಳವಡಿಸಲಾಗಿದೆ. ರಥದ ಒಂದು ಭಾಗದಲ್ಲಿ ಮೂರು ವಿಭಾಗ ಮಾಡಿ ಅದರಲ್ಲಿ ಒಂದೊಂದು ತಾಲೂಕಿನ ವೈಶಿಷ್ಟ್ಯತೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಜೋಡಣೆ ಮಾಡಲಾಗಿದೆ.

ನಾಗಮಂಗಲ ತಾಲೂಕಿನ ಶ್ರೀ ಸೌಮ್ಯಕೇಶ್ವರ ದೇವಾಲಯ, ಪಾಂಡವಪುರ ತಾಲೂಕಿನ ಮೇಲುಕೋಟೆ, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಟಿಪ್ಪುವಿನ ಕೋಟೆ, ಮಳವಳ್ಳಿಯ ಶಿವನಸಮುದ್ರ ಜಲಪಾತ ಮತ್ತು ಸರ್.ಕೆ.ಶೇಷಾದ್ರಿ ಅಯ್ಯರ್ ಜಲ ವಿದ್ಯುತ್ ಉತ್ಪಾದನಾ ಕೇಂದ್ರ, ಮಂಡ್ಯ ತಾಲೂಕಿನಿಂದ ಬಸರಾಳು ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಮದ್ದೂರು ತಾಲೂಕಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ದೇವಸ್ಥಾನಗಳ ಕಲಾಕೃತಿಗಳನ್ನು ಅಳವಡಿಸಲಾಗಿದೆ.
ರಥದ ಸುತ್ತಲೂ ಸುಂದರವಾಗಿ ಕಾಣುವ ರೀತಿಯಲ್ಲಿ ಬಸರಾಳಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಹೊಯ್ಸಳ ಶೈಲಿಯನ್ನು ಅಳವಡಿಸಲಾಗಿದೆ. ಸಾಲಾಗಿ ನಿಂತಿರುವ ಆನೆಗಳ ಚಿತ್ರ ನೋಡಲು ಮನಮೋಹಕವಾಗಿದೆ.
ಸುಮಾರು 65 ಮಂದಿ ಕೆಲಸಗಾರರು ಹತ್ತು ದಿನಗಳ ಕಾಲ ಶ್ರಮವಹಿಸಿ ರಥವನ್ನು ತಯಾರಿಸಿದ್ದಾರೆ. ಈ ರಥದ ಮುಂಭಾಗವನ್ನು ಕಾವೇರಿ ಮಾತೆಯ ಪ್ರತಿಮೆಯಿಂದ ಅಲಂಕರಿಸಲಾಗುವುದು. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಗಳ ಜೊತೆಗೆ ಅಮೃತ ಮಹೋತ್ಸವದ ಲಾಂಛನ ಮತ್ತು 'ಸಕ್ಕರೆ ಸೀಮೆಗೆ ಅಮೃತ ಘಳಿಗೆ' ಟ್ಯಾಗ್ ಲೈನ್ ಇರಲಿದೆ.
ಮಂಗಳವಾರ ನಾಗಮಂಗಲ ಪಟ್ಟಣದಿಂದ ಅಮೃತ ರಥಕ್ಕೆ ಚಾಲನೆ ದೊರೆಯಲಿದೆ. ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ವಾರ್ತಾ ಇಲಾಖೆ ಸಚಿವ ರೋಷನ್ ಬೇಗ್ ಚಾಲನೆ ನೀಡುವರು. ಅಮೃತ ರಥ 10 ದಿನಗಳ ಕಾಲ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ಅಂತಿಮವಾಗಿ ಮಂಡ್ಯ ನಗರಕ್ಕೆ ಬಂದು ಸೇರಲಿದೆ.












Click it and Unblock the Notifications