ಡಿಕೆಶಿಯನ್ನು ಹೊಗಳಿದ ಬಳಿಕ ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಎಸ್‌ಟಿ ಸೋಮಶೇಖರ್ ಗಂಭೀರ ಆರೋಪ- ಏನದು?
ಬೆಂಗಳೂರು, ಆಗಸ್ಟ್ 17: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಬೆಳವಣಿಗೆಯ ನಡುವೆಯೇ ಸೋಮಶೇಖರ್ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ. ಆದರೆ, ತಾವು ಕಾಂಗ್ರೆಸ್ ಸೇರುವ ಯೋಚನೆ ಇಲ್ಲವೆಂದು ತಿಳಿಸಿದ್ದಾರೆ.
ಎಸ್‌ಟಿ ಸೋಮಶೇಖರ್ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಮ್ಮ ಕ್ಷೇತ್ರದ ಸ್ಥಳೀಯ ( ಬಿಜೆಪಿ ) ಮುಖಂಡರು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಆದರೂ, ಪಕ್ಷ ತೊರೆಯುವ ಯೋಚನೆ ಇಲ್ಲ ಎಂದು ಸೋಮಶೇಖರ್ ಗುರುವಾರ ಹೇಳಿದ್ದಾರೆ.

ಡಿಕೆ ಶಿವಕುಮಾರ್ ನನ್ನ ಕ್ಷೇತ್ರಕ್ಕೆ ಬಂದಿದ್ದರು. ಅವರ ಭೇಟಿ ಬಗ್ಗೆ ಅಧಿಕಾರಿಗಳು ನನಗೆ ಮಾಹಿತಿ ನೀಡಿರಲಿಲ್ಲ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದರ ಬಗ್ಗೆ ಮಾತ್ರ ಡಿಕೆಶಿ ಅವರೊಂದಿಗೆ ಚರ್ಚಿಸಿದ್ದೇನೆ. ನಾನು ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು ನಿಜ. ಆದರೆ, ಅವರೊಂದಿಗೆ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದು ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ.
ಯಶವಂತಪುರದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಸೋಮಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕರು ತಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಗಂಭೀರ ಆರೋಪ ಮಾಡಿರುವ ಸೋಮಶೇಖರ್, 'ನನ್ನ ಕ್ಷೇತ್ರದ ಸ್ಥಳೀಯ ಬಿಜೆಪಿ ಮುಖಂಡರು ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಚುನಾವಣೆ ವೇಳೆ ನನ್ನ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ್ದಾರೆ. ಕೆಲವು ಬಿಜೆಪಿ ನಾಯಕರು ನನ್ನನ್ನು ಕಾಂಗ್ರೆಸ್ ಸೇರುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಎಂದಿಗೂ ಕಾಂಗ್ರೆಸ್ ಸೇರುವ ಬಗ್ಗೆ ಮಾತನಾಡಿಲ್ಲ. ಸೇರುವ ಯಾವುದೇ ಯೋಜನೆ ಇಲ್ಲ' ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಕೆಂಪೇಗೌಡ ಬಡಾವಣೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದರು. ಈ ವೇಳೆ ಮಾತನಾಡಿದ್ದ ಸೋಮಶೇಖರ್ ಅವರು ಶಿವಕುಮಾರ್ ಅವರನ್ನು ತಮ್ಮ 'ರಾಜಕೀಯ ಗುರು' ಎಂದು ಬಣ್ಣಿಸಿದ್ದರು.
ಈ ಮಧ್ಯೆ, ಗುರುವಾರ ಬೆಂಗಳೂರಿನ ತಮ್ಮ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ ಅವರು ಸೋಮಶೇಖರ್ ಅವರು ಬಿಜೆಪಿಯಲ್ಲಿ ಸಂತೋಷವಾಗಿಲ್ಲ ಎಂಬುದಾಗಿ ಹೇಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಗೊಂದಲವನ್ನು ಸೃಷ್ಟಿಸಿದೆ.
'ನಾನು ಅವರನ್ನು ಸಂಪರ್ಕಿಸಿಲ್ಲ. ಅವರು ಕಾಂಗ್ರೆಸ್‌ಗಾಗಿ ದುಡಿದಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದೆ. ಅವರು ಉತ್ತಮವಾಗಿ ಕೆಲಸ ಮಾಡಿ ಪಕ್ಷದ ಟಿಕೆಟ್‌ನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ನಲ್ಲಿಯೇ ಮುಂದುವರಿದಿದ್ದರೆ ಸಚಿವರಾಗುತ್ತಿದ್ದರು. ಆ ಪಕ್ಷದಲ್ಲಿ ನನಗೆ ನೆಮ್ಮದಿ ಇಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯವಾಗಬಹುದು. ಅವರು ಬರಲು ಬಯಸಿದರೆ ನಾವು ಸ್ವಾಗತಿಸುತ್ತೇವೆ' ಎಂದು ಪರಮೇಶ್ವರ ತಿಳಿಸಿದ್ದಾರೆ.
ಸೋಮಶೇಖರ್ ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ ಸೇರಿದಂತೆ ಬಿಜೆಪಿ ನಾಯಕರು ಸೋಮಶೇಖರ್ ಜತೆ ಮಾತುಕತೆ ನಡೆಸಿದ್ದಾರೆ. ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಶವಂತಪುರ ಶಾಸಕರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications