ವಿದ್ಯಾರ್ಥಿನಿ ಹಾಕಿದ ಓಪನ್ ಚಾಲೆಂಜಿಗೆ ಸಚಿವ ಆಂಜನೇಯ ಬೇಸ್ತು!
ಚಿತ್ರದುರ್ಗದ ಶಾಲೆಯೊಂದರ ವಿದ್ಯಾರ್ಥಿನಿಯೊಬ್ಬಳು ಸಚಿವ ಆಂಜನೇಯ ಕನ್ನಡ ಮಾಧ್ಯಮದ ಬಗ್ಗೆ ಮಾಡಿದ ಭಾಷಣವನ್ನೆಲ್ಲಾ ಕೇಳಿ, ಸಚಿವರು ವೇದಿಕೆಯಿಂದ ಕೆಳಗೆ ಬರುವ ತನಕ ಕಾದು ನಂತರ ಸಚಿವರ ಬೆವರಿಳಿಸಿದ್ದಾಳೆ.
ಚಿತ್ರದುರ್ಗ, ಸೆ 22: ಕನ್ನಡ ಮಾಧ್ಯಮದಲ್ಲೇ ಓದಿ ಎಂದು ಸಾರ್ವಜನಿಕವಾಗಿ ಉದ್ದುದ್ದ ಭಾಷಣ ಬಿಗಿಯುವ ರಾಜಕೀಯ ಮುಖಂಡರ ಮಕ್ಕಳು ಹೆಚ್ಚಾಗಿ ಆಂಗ್ಲ ಶಾಲೆಯಲ್ಲೇ ಓದುವುದು ಹೊಸ ವಿಚಾರವಲ್ಲ.
ಆದರೆ, ಚಿತ್ರದುರ್ಗದ ಶಾಲೆಯೊಂದರ ವಿದ್ಯಾರ್ಥಿನಿಯೊಬ್ಬಳು ಸಚಿವ ಆಂಜನೇಯ ಕನ್ನಡ ಮಾಧ್ಯಮದ ಬಗ್ಗೆ ಮಾಡಿದ ಭಾಷಣವನ್ನೆಲ್ಲಾ ಕೇಳಿ, ಸಚಿವರು ವೇದಿಕೆಯಿಂದ ಕೆಳಗೆ ಬರುವ ತನಕ ಕಾದು ಸಚಿವರ ಬೆವರಿಳಿಸಿದ್ದಾಳೆ.

ಶುಕ್ರವಾರ (ಸೆ 22) ಚಿತ್ರದುರ್ಗದ ಬಾಲಕರ ಸರಕಾರೀ ಪದವಿಪೂರ್ವ ಕಾಲೇಜಿನಲ್ಲಿನ 'ಪ್ರತಿಭಾ ಕಾರಂಜಿ ಕಾರ್ಯಕ್ರಮ' ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಆಂಜನೇಯ, ಸರಕಾರೀ ಶಾಲೆಯಲ್ಲಿ ಓದಿದ ಹಲವರು ಸಮಾಜಕ್ಕೆ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದಾರೆ.
ಇದಕ್ಕೆ ಉದಾಹರಣೆ ವಿಶ್ವೇಶ್ವರಯ್ಯ, ಯು ಆರ್ ರಾವ್ ಮುಂತಾದವರು. ಹಾಗಾಗಿ, ಸರಕಾರೀ ಶಾಲೆಯೆಂದು ಯಾರೂ ಉದಾಸೀನತೆ ತೋರಬೇಡಿ ಎಂದು ಸಚಿವ ಆಂಜನೇಯ ಭಾಷಣ ಮಾಡಿ, ವೇದಿಕೆಯಿಂದ ಕೆಳಗಿಳಿದು ಬಂದರು.
ಸಚಿವರಿಗಾಗಿ ಕಾದು ನಿಂತಿದ್ದ ವಿದ್ಯಾವಿಕಾಸ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ನಯನಾ, ಸಚಿವರನ್ನು ಅಡ್ಡಗಟ್ಟಿ.. ಸರ್ ಮೊದಲು ಸರಕಾರೀ ಶಾಲೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ ಎಂದು ಸಲಹೆ ನೀಡಿದಳು.
ಸರಕಾರೀ ಶಾಲೆಯಲ್ಲಿನ ಅವ್ಯವಸ್ಥೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಈ ಹಿಂದೆ ಕೂಡಾ ಪ್ರಯತ್ನಿಸಿದ್ದೆ, ಆದರೆ ಅದು ಪ್ರಯೋಜನವಾಗಲಿಲ್ಲ. ನಮ್ಮ ಸರಕಾರೀ ಶಾಲೆಗಳು ಉಳಿಯಬೇಕೆಂದರೆ, ಮೊದಲು ಜನಪ್ರತಿನಿಧಿಗಳ ಮಕ್ಕಳು ಸರಕಾರೀ ಶಾಲೆಗೆ ಬರಬೇಕು ಸರ್ ಎಂದು ವಿದ್ಯಾರ್ಥಿನಿ ನಯನಾ ಸಚಿವರಲ್ಲಿ ಮನವಿ ಮಾಡಿದಳು.
ಆ ನಂತರ ಮಾಧ್ಯಮರೊಂದಿಗೆ ಮಾತನಾಡುತ್ತಿದ್ದ ವಿದ್ಯಾರ್ಥಿನಿ ನಾನು ಓಪನ್ ಚಾಲೆಂಜ್ ಹಾಕುತ್ತೇನೆ, ಸಚಿವರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರ ಮಕ್ಕಳು ಕನ್ನಡ ಶಾಲೆಗೆ ಹೋಗುತ್ತಾರಾ?
ಮೊದಲು ಸರಕಾರೀ ಶಾಲೆಯಲ್ಲಿ ಮೂಲಭೂತ ಸೌಕರ್ಯ ಸರಿಪಡಿಸಲಿ, ನಾಯಕರ ಮಕ್ಕಳು ಸರಕಾರೀ ಶಾಲಾ ಕಾಲೇಜುಗಳಲ್ಲಿ ಓದಲಿ, ನಾನೂ ಕೂಡಾ ಇಂಗ್ಲಿಷ್ ಮೀಡಿಯಂ ನಿಂದ ಸರಕಾರೀ ಕಾಲೇಜಿಗೆ ಬರುತ್ತೇನೆಂದು ಚಾಲೆಂಜ್ ಹಾಕಿದ್ದಾಳೆ. (ಮಾಹಿತಿ: ಪಬ್ಲಿಕ್ ಟಿವಿ)












Click it and Unblock the Notifications