ಪೋಷಕರ ಪ್ರತಿಕ್ರಿಯೆಯೇ ಮಕ್ಕಳ ಆತ್ಮವಿಶ್ವಾಸ, ಪ್ರತಿಕ್ರಿಯಿಸುವ ಮೊದಲು ಯೋಚಿಸಿ: ಬೇಳೂರು ಸುದರ್ಶನ ಬರಹ

ಈ ವರ್ಷ ಎಸೆಸೆಲ್ಸಿ ಪರೀಕ್ಷೆ ಎದುರಿಸಿದ್ದ ಮಕ್ಕಳ ತಂದೆ ತಾಯಂದಿರೆ, ಪೋಷಕರೆ,
ಫಲಿತಾಂಶ ಅಂತೂ ಬಂದಿದೆ. ನಿಮ್ಮ ಮಕ್ಕಳು ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿರಬಹುದು; ಅಥವಾ ಕಡಿಮೆ ಅಂಕಗಳನ್ನು ಪಡೆದು 'ಜಸ್ಟ್ ಪಾಸ್' ಆಗಿರಬಹುದು. ಅಥವಾ....... ಅನುತ್ತೀರ್ಣರೂ (ಫೇಲು) ಆಗಿರಬಹುದು.

ಮೊದಲು ನಿಮ್ಮ ಮಕ್ಕಳು ಫೇಲಾಗಿದ್ದರೆ, ನನ್ನದೊಂದು ಸುದೀರ್ಘ ಚಪ್ಪಾಳೆ ಸ್ವೀಕರಿಸಿ. ಅವರ ಬದುಕಿನ ಅವಕಾಶಗಳು ಈಗ ಸಿಕ್ಕಾಪಟ್ಟೆ ಜಾಸ್ತಿ ಆಗಿವೆ! ವಿಫಲತೆ ಅಂತಿಮ ಫಲಿತಾಂಶವಲ್ಲ; ಅದು ಕಲಿಕೆಯ ಒಂದು ಹಂತ ಮಾತ್ರ. ಮಕ್ಕಳು ಒಂದು ಬಾರಿ ಸೋತರೆ ಅವರು ಕತೆ ಮುಗಿದೇ ಹೋಯ್ತು ಅಂತಲ್ಲ; ಅವರು ಹೊಸ ದಾರಿ ಹುಡುಕುವ ಅವಕಾಶ ಪಡೆದಿದ್ದಾರೆ ಅಷ್ಟೆ.

SSLC

ಮಕ್ಕಳು ನಿಜಕ್ಕೂ ತಾವು ಯಾವುದರಲ್ಲಿ ಆಸಕ್ತಿ ಹೊಂದಿದ್ದೇವೆ ಎಂದು ತಿಳಿದುಕೊಳ್ಳೋ ಹಂತದಲ್ಲೇ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳು ನಡೆಯುವುದೇ ದೊಡ್ಡ ದುರಂತ. ನನ್ನ ಪ್ರಕಾರ ಎಸೆಸೆಲ್ಸಿ ಓದಿದ ಮೇಲೆ ಮಕ್ಕಳು ಹಳ್ಳಿಗೆ ಹೋಗಿ ಎರಡು ವರ್ಷ ಕೌಶಲ್ಯ, ಬದುಕು, ಪರಿಸರ, ಪ್ರಾಣಿ, ಪಕ್ಷಿಗಳ ಬಗ್ಗೆ ಸ್ವಂತ ಆಸಕ್ತಿ ಬೆಳೆಸಿಕೊಳ್ಳಬೇಕು. ಹೊರತು ರಜೆಗಳನ್ನು, ಉಲ್ಲಾಸಭರಿತ ಆಟೋಟಗಳನ್ನು ಮರೆತು ರೂಮಿನಲ್ಲಿ ಕೂತು ಪ್ರವೇಶ ಪರೀಕ್ಷೆಗಳಿಗೆ ಉರು ಹೊಡೆಯುವುದು ಸಹಜವೇನಲ್ಲ.

ಆದ್ದರಿಂದ ನಿಮ್ಮ ಮಕ್ಕಳೇನಾದರೂ ಫೇಲಾಗಿದ್ದರೆ ಮೊದಲು ಅವರೊಂದಿಗೆ ಒಂದು ಒಳ್ಳೆ ಊಟದ ಪಾರ್ಟಿ ಮಾಡಿ; ಅವರಿಗೆ ಒಳ್ಳೆ ಉಡುಗೆ ಕೊಡಿಸಿ. ಎಸೆಸೆಲ್ಸಿ ಫೇಲಾದ ಕೂಡಲೇ ಬದುಕೇ ಮುಗಿದುಹೋಯ್ತು ಅನ್ನೋ ಆತಂಕ ಬೇಡವೇ ಬೇಡ.

ನಮ್ಮ ನಾಡಿನ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಡಲ ತಡಿಯ ಭಾರ್ಗವ ಡಾ. ಕೆ. ಶಿವರಾಮ ಕಾರಂತರೂ ಹೆಚ್ಚು ಓದಿದವರಲ್ಲ; ಪ್ರಯಾಗ್ ರಾಜ್‌ನ ಸಂಗೀತ ವಿಶ್ವವಿದ್ಯಾಲಯದಲ್ಲಿ ಮುಖ್ಯ ಪ್ರಾಧ್ಯಾಪಕರಾಗಿದ್ದ ರಾಮಾಶ್ರೇಯ ಝಾ 'ರಾಮ ರಂಗ್' ಎಂಬ ಹಿಂದುಸ್ತಾನಿ ಸಂಗೀತದ ಮಹಾನ್ ಪಂಡಿತರೂ ಎಸೆಸೆಲ್ಸಿ ದಾಟಲಿಲ್ಲ. ಇನ್ನೂ ಹಲವು ಹೆಸರುಗಳನ್ನು ಉದಾಹರಿಸಬಹುದು. ಹಾಗಂತ ಅವರೆಲ್ಲ ಜನ್ಮತಃ ದಿವ್ಯಜ್ಞಾನಿಗಳೇನೂ ಆಗಿರಲೂ ಇಲ್ಲ. ಎಲ್ಲವನ್ನೂ ಕಲಿತು ಮುಂದೆ ಬಂದರು; ಸಮಾಜದಲ್ಲಿ ಮನ್ನಣೆ ಗಳಿಸಿದರು. ಹೆಚ್ಚು ಓದದೆಯೂ ಯಶಸ್ವಿ ಉದ್ಯಮಿಗಳಾದ ನೂರಾರು ಜನರ ಕಥೆಗಳನ್ನೂ ನೀವು ಈಗಾಗಲೇ ಓದಿರುತ್ತೀರಿ. ಆದ್ದರಿಂದ ಶೈಕ್ಷಣಿಕ ಅರ್ಹತೆಯೇ ಬದುಕಿನಲ್ಲಿ ಯಶ ಸಾಧಿಸುವ ಏಕೈಕ ಮಾನದಂಡವಲ್ಲ.

ಇಲ್ಲಿ ಒಂದು ಮುಖ್ಯ ಸಂಗತಿ ನೆನಪಿಡಿ: ಪರೀಕ್ಷೆಯ ಅಂಕಗಳು ಮಕ್ಕಳ ಬುದ್ಧಿಮತ್ತೆಯ ಸಂಪೂರ್ಣ ಅಳತೆಯಲ್ಲ; ಅದು ಕೇವಲ ಒಂದು ಭಾಗ ಮಾತ್ರ. ಪರೀಕ್ಷೆಗಳು ಮುಖ್ಯವಾಗಿ ನೆನಪು ಮತ್ತು ಬರವಣಿಗೆ ಸಾಮರ್ಥ್ಯವನ್ನು ಅಳೆಯುತ್ತವೆ. ಆದರೆ ಬದುಕಿನಲ್ಲಿ ಬೇಕಾಗಿರುವ ಸೃಜನಶೀಲತೆ, ಸಮಸ್ಯೆ ಪರಿಹಾರ ಶಕ್ತಿ, ಮಾನಸಿಕ ಸಮತೋಲನ ಇವುಗಳನ್ನು ಅಂಕಗಳಿಂದ ಅಳೆಯಲು ಸಾಧ್ಯವಿಲ್ಲ.

ಹಾಗಂತ ಎಸೆಸೆಲ್ಸಿ ಪರೀಕ್ಷೆಯನ್ನು ಮತ್ತೆ ಬರೆದು ಪಾಸಾಗಿ ಉನ್ನತ ಶಿಕ್ಷಣ ಪಡೆಯುವುದೂ ತಪ್ಪಲ್ಲ. ನಿಮ್ಮ ಮಕ್ಕಳು ಫೇಲಾಗಿದ್ದರೆ ಖಂಡಿತ ಅವರ ಆಸಕ್ತಿಗಳು ಇನ್ನೆಲ್ಲೋ ಇರಬೇಕು. ಒಮ್ಮೆ ನಿಮ್ಮ ಮಕ್ಕಳಿಗೆ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಭಾಗವಹಿಸಲು ಹೇಳಿ. ಇದು ನಿಮ್ಮ ಮಕ್ಕಳ ಸಹಜ ಆಸಕ್ತಿಯೇನು ಎಂಬುದನ್ನು ಗುರುತಿಸುವ ಒಂದು ಚಿಕ್ಕ ಪರೀಕ್ಷೆ, ಅಷ್ಟೆ. ಹಾಗೆ ವೃತ್ತಿಪರ ಪರೀಕ್ಷೆಯ ಬಗ್ಗೆ ಗೊತ್ತಿಲ್ಲದಿದ್ದರೆ ನಿಮ್ಮ ಊರಿನಲ್ಲಿ ಈ ಬಗ್ಗೆ ಅನುಭವ, ಮಾಹಿತಿ ಇರಬಹುದಾದ ಹಿರಿಯರನ್ನು ಸಂಪರ್ಕಿಸಿ. ಕೆಲವು ಆನ್‌ಲೈನ್ ಪರೀಕ್ಷೆಗಳೂ ಇರಬಹುದು; ನೋಡಿ. ಈ ಪರೀಕ್ಷೆಯಲ್ಲಿ ಬರುವ ಫಲಿತಾಂಶವು ಬಹುತೇಕ ನಿಮ್ಮ ಮಗ/ಮಗಳ ನಿಜವಾದ ಆಸಕ್ತಿಯ ಬಗ್ಗೆ ಬೆಳಕು ಚೆಲ್ಲುತ್ತದೆ.

ನೀವು ಯಾವುದೇ ಆರ್ಥಿಕ ಸ್ಥಿತಿಯ ಕುಟುಂಬವಾಗಿದ್ದರೂ ನಿಮ್ಮ ಮಕ್ಕಳನ್ನು ಅವರ ಆಸಕ್ತಿಗೆ ತಕ್ಕಂತೆ ಬೆಳೆಸಬಹುದು ಎಂಬುದನ್ನು ಮರೆಯಬೇಡಿ. ಮತ್ತೆ ಪರೀಕ್ಷೆ ಬರೆಯಲು ಮಕ್ಕಳ ಮನ ಒಲಿಸಿ. ಹಾಗೆ ಓದಲು ಸಾಧ್ಯವೇ ಇಲ್ಲ ಎಂದಾದರೆ ಮಾತ್ರ ಅವರ ಆಸಕ್ತಿಗೆ ತಕ್ಕ ರಂಗದಲ್ಲಿ ತರಬೇತಿ ಕೊಡಿಸಿ.

ಓದನ್ನು ಮುಂದುವರಿಸಿದರೆ? ಆಗ ಕೂಡಾ ಅವರ ಆಸಕ್ತಿಯ ವಿಷಯದ ಬಗ್ಗೆ ಕೋರ್ಸ್ ಹುಡುಕಿ ಸೇರಿಸಿ. ಅದು ಸಂಗೀತವೋ, ನೃತ್ಯವೋ, ಆಟವೋ, - ಯಾವುದೇ ಕ್ಷೇತ್ರವೂ ಇರಬಹುದು. ಓದು ಮತ್ತು ಈ ಪಠ್ಯೇತರ ತರಬೇತಿ - ಎರಡೂ ಇದ್ದರೆ ಒತ್ತಡ ಹೆಚ್ಚುವುದೇನೂ ಇಲ್ಲ. ವಾಸ್ತವವಾಗಿ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮಕ್ಕಳು ಹೆಚ್ಚು ಆತ್ಮವಿಶ್ವಾಸ, ಸಮಯ ನಿರ್ವಹಣೆ ಮತ್ತು ಗಮನಶಕ್ತಿ ಬೆಳೆಸಿಕೊಳ್ಳುತ್ತಾರೆ ಎಂಬುದನ್ನು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಕ್ರೀಡೆಗಳು ಸಹನಶೀಲತೆ ಕಲಿಸುತ್ತವೆ; ಸಂಗೀತ ಮತ್ತು ಕಲೆಗಳು ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. ಈ ಗುಣಗಳು ಶೈಕ್ಷಣಿಕ ಫಲಿತಾಂಶಗಳ ಮೇಲೂ ಒಳ್ಳೆಯ ಪರಿಣಾಮ ಬೀರುತ್ತವೆ. ಎಸೆಸೆಲ್ಸಿ ಎಂಬ ಗಡಿ ದಾಟುವುದು ಆದ್ಯತೆಯಾಗಿರಲಿ. ಆಸಕ್ತಿಯನ್ನು ಬಿಡುವುದು ಬೇಡ. ಅಂಕಗಳಿಗಾಗಿ ಓದುವ ಕಲಿಕೆಗಿಂತಲೂ ತುಂಬಾ ಮುಖ್ಯವಾಗಿರುವುದು - ನಿಮ್ಮ ಮಕ್ಕಳ ಕೌಶಲ್ಯ ಹೆಚ್ಚಳ.

ದಯವಿಟ್ಟು ಯಾರೂ ಟೆನ್ಶನ್ ತಗೊಳ್ಳೋದೇ ಬೇಡ. ಖುಷಿಯಾಗಿರಿ. ಬೇಸಗೆ ರಜೆಯನ್ನು ಅನುಭವಿಸಿ. ಮಕ್ಕಳು ಕಡಿಮೆ ಅಂಕ ಪಡೆದು ಪಾಸಾಗಿದ್ದರೆ ಅದು ಅವರ ವಿಫಲತೆಯಲ್ಲ ಪಾಲಕರೇ!! ಕಡಿಮೆ ಅಂಕ ಪಡೆದರೆ ತಪ್ಪು ಅನ್ನೋದು ಖಂಡಿತ ತಪ್ಪು!! ಕಡಿಮೆ ಅಂಕ ಬಂದಿದ್ರೆ ಮಕ್ಕಳು ಬೇಜಾರಾಗೋದೂ ಬೇಡ; ಮುಖ ಒಣಗಿಸಿಕೊಳ್ಳೋದೂ ಬೇಡ.

ನಿಮ್ಮ ಪ್ರತಿಕ್ರಿಯೆಯೇ ನಿಮ್ಮ ಮಕ್ಕಳ ಆತ್ಮವಿಶ್ವಾಸವನ್ನು ಕಟ್ಟಬಹುದು ಅಥವಾ ಕುಗ್ಗಿಸಬಹುದು ಎಂಬುದನ್ನು ಮರೆಯಬೇಡಿ.

1.ಮಕ್ಕಳ ಜೊತೆ ಮುಕ್ತವಾಗಿ ಮಾತಾಡಿ; ಅವರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಕೇಳಿ. ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿ.

2.ಹೋಲಿಕೆ ಮಾಡೋದನ್ನು ದಯವಿಟ್ಟು ತಪ್ಪಿಸಿ ; "ಅವನಿಗೆ/ ಅವಳಿಗೆ ಇಷ್ಟು ಅಂಕ, ನಿನಗೆ ಯಾಕೆ ಇಲ್ಲ?" ಅನ್ನೋ ಮಾತು ಬೇಡವೇ ಬೇಡ.

3.ಮಕ್ಕಳ ಚಿಕ್ಕಪುಟ್ಟ ಸಾಧನೆಗಳನ್ನೂ ಗಮನಿಸಿ ; ಅದು ಅಂಕಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಅವರ ಪ್ರಯತ್ನವನ್ನು ಮೆಚ್ಚಿ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

4.ಮಕ್ಕಳ ಮೇಲೆ ತಕ್ಷಣದ ಒತ್ತಡ ಹಾಕಬೇಡಿ; ಫಲಿತಾಂಶ ಬಂದ ಕೂಡಲೇ ಮುಂದಿನ ದಾರಿ ನಿರ್ಧರಿಸಲು ಅವಸರ ಬೇಡ. ಅವರಿಗೆ ಸ್ವಲ್ಪ ಸಮಯ ಕೊಡಿ.

5.ಮಕ್ಕಳನ್ನು ಟೀಕಿಸುವುದಕ್ಕಿಂತ, ಮಾರ್ಗದರ್ಶನ ನೀಡಿ ; ತಪ್ಪುಗಳನ್ನೇ ಮಾತ್ರ ತೋರಿಸುವುದರಿಂದ ಅವರು ಹೆಚ್ಚೇನೂ ಹೇಳದೆಯೇ ಮುಚ್ಚಿಕೊಳ್ಳುತ್ತಾರೆ; ಸರಿಯಾದ ದಾರಿಯನ್ನು ತೋರಿಸಿದರೆ ಅವರು ಬೆಳೆಯುತ್ತಾರೆ.

6.ಮಕ್ಕಳ ಆಸಕ್ತಿಯನ್ನು ಗಮನಿಸಿ; ಅವರು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ಅದೇ ಅವರ ಭವಿಷ್ಯದ ದಿಕ್ಕಾಗಬಹುದು.

7.ಮಕ್ಕಳಿಗೆ ವಿಶ್ರಾಂತಿ ಮತ್ತು ಆಟಕ್ಕೂ ಅವಕಾಶ ಕೊಡಿ ; ನಿರಂತರ ಓದು ಮಾತ್ರ ಯಶಸ್ಸಿಗೆ ದಾರಿ ಅಲ್ಲ. ಆಟ, ಸ್ನೇಹ, ವಿಶ್ರಾಂತಿ ಕೂಡ ಸಮಾನವಾಗಿ ಅಗತ್ಯ.

ಮಕ್ಕಳು ಕಲೆ, ಸಂಗೀತ, ನಾಟಕ, ಸಿನೆಮಾ, ಧ್ವನಿಗ್ರಹಣ, ಛಾಯಾಗ್ರಹಣ ಇತ್ಯಾದಿ ಕೋರ್ಸುಗಳನ್ನು ಮಾಡಿದರೆ ಅದು ಸಮಾಜಕ್ಕೂ ಕೊಡುಗೆ. ಮಕ್ಕಳ ಸೃಜನಶೀಲತೆಗೂ ಅವಕಾಶ ಸಿಕ್ಕಿದ ಹಾಗೆಯೇ ಆಗುತ್ತದೆ. ಇಂದು ಕೌಶಲ್ಯಾಧಾರಿತ ಶಿಕ್ಷಣಕ್ಕೂ ಹೆಚ್ಚಿನ ಅವಕಾಶಗಳಿವೆ - ಐಟಿಐ, ಪಾಲಿಟೆಕ್ನಿಕ್, ಡಿಸೈನ್, ಅನಿಮೇಶನ್, ಡಿಜಿಟಲ್ ಮೀಡಿಯಾ ಇತ್ಯಾದಿ ಕ್ಷೇತ್ರಗಳು ಮಕ್ಕಳಿಗೆ ಹೊಸ ದಾರಿಗಳನ್ನು ತೆರೆದಿವೆ.

ಎಸೆಸೆಲ್ಸಿ ಬದುಕಿನ ಒಂದು ಅತಿಚಿಕ್ಕ ಹೆಜ್ಜೆ. ಬದುಕಿನಲ್ಲಿ ಎದುರಿಸಬೇಕಾದ ಪರೀಕ್ಷೆಗಳು ಇದಕ್ಕಿಂತ ದೊಡ್ಡವು.

ಮಕ್ಕಳು ಯಶ ಸಾಧಿಸಲು ಅಂಕಗಳೇ ಸಾಕಾಗುವುದಿಲ್ಲ; ಆಸಕ್ತಿ, ಅವಕಾಶ ಮತ್ತು ಬೆಂಬಲ - ಈ ಮೂರೂ ಇದ್ದರೆ ಅವರು ತಮ್ಮದೇ ದಾರಿಯನ್ನು ತಾವೇ ಹುಡುಕಿಕೊಳ್ಳುತ್ತಾರೆ. ಕೃತಕ ಬುದ್ಧಿಮತ್ತೆಯ ಭರಾಟೆಯ ಈ ಕಾಲದಲ್ಲಿ ಕೇವಲ ಒಂದೆರಡು ಸರ್ಟಿಫಿಕೇಟುಗಳಿಂದ ಬದುಕು ಕಟ್ಟಿಕೊಳ್ಳುವುದು ಕಷ್ಟ. ಬಹುಕುಶಲತೆ (multiskills) ಇದ್ದವರಿಗೇ ಈಗ ಅವಕಾಶಗಳು ತೆರೆದುಕೊಳ್ಳುತ್ತಿವೆ.

ನಿಮ್ಮ ಮಕ್ಕಳಿಗೆ ಸುಂದರವಾಗಿ, ಸರಳವಾಗಿ ಬದುಕುವುದೇ ಮುಖ್ಯ ಎಂಬುದನ್ನು ಕಲಿಸಿ; ಆಗ ಸಂಬಳ ಎಷ್ಟೇ ಇದ್ದರೂ ಜೀವನ ಸುಗಮವಾಗಿರುತ್ತದೆ. ಇದು ನಾನು ಹೇಳಿದಷ್ಟು ಸುಲಭವಲ್ಲ ಎಂಬುದು ನನಗೂ ಗೊತ್ತು. ಆದರೆ ಇದೇ ನಮ್ಮೆಲ್ಲರ ಸಮೃದ್ಧ ಜೀವನದ ನಿಜಸೂತ್ರ ಆಗಬೇಕಿದೆ.

ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ನನ್ನ ಹಾರ್ದಿಕ ಶುಭಾಶಯಗಳು!

ಬರಹ: ಬೇಳೂರು ಸುದರ್ಶನ
(ಲೇಖಕರು ಈ ಹಿಂದೆ ಮುಖ್ಯಮಂತ್ರಿಯ ಐಟಿ ಸಲಹೆಗಾರರಾಗಿದ್ದವರು. ಶಿಕ್ಷಣ, ಜಾನಪದ ಸೇರಿದಂತೆ ಹಲವು ವಿಚಾರಗಳಲ್ಲಿ ಆಸಕ್ತರು. ಕನ್ನಡ ಸಂಸ್ಕೃತಿಯನ್ನು ಸದೃಢಗೊಳಿಸುವ ಹಲವು ಪ್ರಯತ್ನಗಳಲ್ಲಿ ಸಕ್ರಿಯರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+