'ಅಂಬರೀಶ್, ಶ್ರೀನಿವಾಸ್ ಪ್ರಸಾದ್‌ರನ್ನು ಜೆಡಿಎಸ್‌ಗೆ ಆಹ್ವಾನಿಸಿಲ್ಲ'

Posted By:
Subscribe to Oneindia Kannada

ಬೆಂಗಳೂರು, ಜೂನ್ 22 : 'ಸಚಿವ ಸ್ಥಾನ ಕಳೆದುಕೊಂಡಿರುವ ವಿ.ಶ್ರೀನಿವಾಸ ಪ್ರಸಾದ್ ಮತ್ತು ಅಂಬರೀಶ್ ಅವರನ್ನು ಜೆಡಿಎಸ್ ಸೇರುವಂತೆ ಆಹ್ವಾನಿಸಿಲ್ಲ. ಇಬ್ಬರಿಗೂ ಆತ್ಮಸ್ಥೈರ್ಯ ತುಂಬಿದ್ದೇನೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು, 'ನಾನು ಯಾರನ್ನೂ ಜೆಡಿಎಸ್ ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ಇನ್ನೊಂದು ಪಕ್ಷದ ಪರಿಸ್ಥಿತಿಯ ಲಾಭ ಪಡೆಯುವ ಪ್ರಯತ್ನ ನಾನೆಂದೂ ಮಾಡಿಲ್ಲ' ಎಂದು ಹೇಳಿದರು. [ಅಂಬರೀಶ್ ಜೆಡಿಎಸ್ ಸೇರ್ಪಡೆ]

deve gowda

'ಶ್ರೀನಿವಾಸ ಪ್ರಸಾದ್ ಅವರು ನಮ್ಮ ಹಳೆಯ ಸ್ನೇಹಿತರು. ಅವರಿಗೆ ಕರೆ ಮಾಡಿ ಆತ್ಮಸ್ಥೈರ್ಯ ತುಂಬಿದ್ದೇನೆ. ಅಂಬರೀಶ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು. ಅಂಥ ದುಡುಕಿನ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ಕಿವಿಮಾತು ಹೇಳಿದ್ದೇನೆ' ಎಂದರು. [ಪ್ರಸಾದ್, ಅಂಬರೀಶ್ ಚಿತ್ತ ಎತ್ತ? ಇದ್ದಲ್ಲೋ, ಗೌಡ್ರೋ, ಬಿಎಸ್ವೈನಾ?]

'ರಾಜ್ಯ ಕಾಂಗ್ರೆಸ್‌ನಲ್ಲಿ ಏನಾಗುತ್ತಿದೆ? ಎಂಬುದನ್ನು ಜನರು ನೋಡುತ್ತಿದ್ದಾರೆ. ಮೂಲ ಕಾಂಗ್ರೆಸಿಗರು ಮೂಲೆ ಗುಂಪಾಗಿದ್ದಾರೆ. ಈ ಹಿಂದೆ ನನ್ನ ಜೊತೆ ಇದ್ದ ಹಳೆಯ ಸ್ನೇಹಿತರು ಅಧಿಕಾರ ನಡೆಸುತ್ತಿದ್ದಾರೆ. ಅವರು ಒಳ್ಳೆಯ ಆಡಳಿತ ಕೊಡಬೇಕು ಎಂಬುದು ನನ್ನ ಆಶಯ' ಎಂದು ಹೇಳಿದರು. [ಸಿದ್ದು ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ವೇಳೆ ಕಂದಾಯ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ಮತ್ತು ವಸತಿ ಸಚಿವ ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಟ್ಟಿದ್ದರು. ಉಭಯ ನಾಯಕರಿಗೂ ಜೆಡಿಎಸ್ ಸೇರುವಂತೆ ಆಹ್ವಾನ ನೀಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
JDS national president H.D.Deve Gowda has dismissed speculations that he invited former minister V.Srinivas Prasad and Ambareesh join JDS. Siddaramaiah dropped both ministers during cabinet reshuffle.
Please Wait while comments are loading...