Siddheshwar Swamiji: ಈ ಉದ್ಯಾನಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರು ಇಟ್ಟ ಸರ್ಕಾರ
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದ ಮೂರನೇ ಬೃಹತ್ ಕೆರೆ ವಿಜಯಪುರದ ಮಮದಾಪುರ ಕೆರೆ. ಇಲ್ಲಿ ಒಟ್ಟು 2 ಲಕ್ಷ ಗಿಡಗಳನ್ನು ನೆಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇನ್ನು ಇಲ್ಲಿನ ಮಮದಾಪುರ ಉದ್ಯಾನಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಹೆಸರನ್ನು ರಾಜ್ಯ ಸರ್ಕಾರ ಇಟ್ಟಿದೆ ಎಂದು ಕೈಗಾರಿಕೆ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಮಾಹಿತಿ ನೀಡಿದರು.
ವಿಜಯಪುರ ಜಿಲ್ಲೆಯ ಮಮದಾಪುರದಲ್ಲಿ ಇರುವ 1,494.38 ಎಕರೆ ವಿಸ್ತೀರ್ಣದ 'ಜೀವವೈವಿಧ್ಯ ಉದ್ಯಾನ'ಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಹೆಸರನ್ನು ಸರ್ಕಾರದಿಂದ ಅಧಿಕೃತವಾಗಿ ಇಡಲಾಗಿದೆ ಎಂದ ಬುಧವಾರ ತಿಳಿಸಿದರು. ಉದ್ಯಾನಕ್ಕೆ ಸ್ವಾಮೀಜಿ ಹೆಸರು ಇಟ್ಟಿದ್ದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದರು.

ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ತಮಗೆ ಸದಾ ಮಾರ್ಗದರ್ಶಕರಾಗಿದ್ದರು. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಅತೀವ ಸಂತಸವಾಗಿದೆ. ಇನ್ನುಮುಂದೆ ಮಮದಾಪುರ ಉದ್ಯಾನವು 'ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜೀವವೈವಿಧ್ಯ ಪರಂಪರೆ ತಾಣ' ಎಂದು ಕರೆಯಲ್ಪಡುತ್ತದೆ.
ಮಮದಾಪುರ ಉದ್ಯಾನವು ನೀರು ಮತ್ತು ಮಣ್ಣಿನ ಸಂರಕ್ಷಣೆ, ಪ್ರಾಣಿ ಮತ್ತು ಪಕ್ಷಿ ಸಂಕುಲಗಳ ಆವಾಸ, ಸ್ಥಳೀಯರ ಜೀವನಕ್ಕೆ ಆಸರೆಯಾಗುರುವ ಅನನ್ಯ ತಾಣವಾಗಿದೆ. ಇದಕ್ಕೆ ಶ್ರೀಗಳ ಹೆಸರಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿಕೊಂಡಿದ್ದೆ. ಇದಕ್ಕೆ ಅವರು ಕ್ಷಿಪ್ರವಾಗಿ ಸ್ಪಂದಿಸಿದ್ದಾರೆ ಎಂದು ಅವರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು.
ವಿಜಯಪುರ ಕೆರೆ ಅಭಿವೃದ್ಧಿಗೆ ಪಣ
ರಾಜ್ಯದಲ್ಲಿ ಮೂರನೇ ಅತೀ ದೊಡ್ಡ ಕೆರೆ ಮಮದಾಪುರ ಕೆರೆ ವಿಶಾಲವಾಗಿದೆ. ಇಲ್ಲಿ ಸುಮಾರು ಎರಡು ಲಕ್ಷ ಸಸಿಗಳನ್ನು ನೆಟ್ಟು ಬೆಳೆಸಲು ಹಸಿರಿಗೆ ಕೊಡುಗೆ ನೀಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ 60000ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಇಲ್ಲಿ ಬೃಹತ್ ಉದ್ಯಾನ ಸೃಷ್ಟಿ ಮಾಡಲಾಗಿದೆ.
ಮಲೆನಾಡಿನಲ್ಲಿ ಬೆಳೆಯುವ ಅಕ್ಕಿ ಸೇರಿದಂತೆ ವಿವಿಧ ರೀತಿಯ ವ್ಯವಸಾಯ ಈ ವಿಜಯಪುರ ಜಿಲ್ಲೆಯಲ್ಲಿ ಸಹ ನಡೆಯಬೇಕು ಎಂಬ ಉದ್ದೇಶ ಸರ್ಕಾರದ್ದಾಗಿದೆ. ಈ ಕೆರೆಯಲ್ಲಿ ಬಾಸುಮತಿ ಅಕ್ಕಿ ಸಹಿತ ವಿವಿಧ ಬೆಳೆಗಳನ್ನು ಬೆಳೆಯಲು ಈ ಕೆರೆ ಸಾಕಷ್ಟು ಅನುಕೂಲವಾಗಿತ್ತು. ನಂತರ ಹಲವು ವರ್ಷಗಳಿಂದ ಕೆರೆ ಬತ್ತಿ ಹೋಗಿದೆ. ಜಾಲಿ ಗಿಡ ಬೆಳೆದು ಹಾಳಾಗಿತ್ತು. ಇದೀಗ ಅಲ್ಲಿ ಲಕ್ಷಾಂತರ ಗಿಡಗಳನ್ನು ನೆಡಲಾಗುತ್ತಿದೆ ಎಂದು ಈ ಹಿಂದೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದರು.












Click it and Unblock the Notifications