Government Employee: ಕರ್ನಾಟಕದ ಸರ್ಕಾರಿ ನೌಕರರಿಗೆ ವಿಶೇಷ ಅನುಮತಿ, ವಿವರ
ಬೆಂಗಳೂರು, ಅಕ್ಟೋಬರ್ 12: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ವಿವಿಧ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಪ್ರಮುಖವಾಗಿ ರಾಜ್ಯ ಸಂಘದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆಗಳು ದಿನಾಂಕ 09-12-2024 ರಿಂದ ದಿನಾಂಕ 27-12-2024ರವರೆಗೆ ನಡೆಯಲಿದೆ. ಸಂಘದ ಬೈಲಾ ನಿಯಮಗಳ ಅನ್ವಯ 5 ವರ್ಷಗಳ ಸದಸ್ಯತ್ವವನ್ನು ಹೊಂದಿರುವ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು, ಜಿಲ್ಲೆ, ಬೆಂಗಳೂರು ನಗರ ಮತ್ತು ರಾಜ್ಯ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಮತದಾನ ಮಾಡಬೇಕಿದೆ. ನೌಕರರು ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಲು ಅನುಕೂಲವಾಗುವಂತೆ ವಿಶೇಷ ಅನುಮತಿಯನ್ನು ನೀಡಿ ಆದೇಶವನ್ನು ಹೊರಡಿಸಲಾಗಿದೆ.

ಈ ಕುರಿತು ವೀರಭದ್ರ, ಸರ್ಕಾರ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು-1) ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಈ ಪತ್ರವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ದಿನಾಂಕ 8.10.2024 ರಿಂದ 4.12.2024 ರವರೆಗೆ ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸುವ ನೌಕರರಿಗೆ ವಿಶೇಷ ಅನುಮತಿ ನೀಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ರಾಜ್ಯಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರ ಪತ್ರವನ್ನು ಉಲ್ಲೇಖಿಸಲಾಗಿದೆ.
ವಿಶೇಷ ಅನುಮತಿ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ದಿನಾಂಕ 8.10.2024 ರಿಂದ 4.12.2024 ರವರೆಗೆ ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸುವ ಸರ್ಕಾರಿ ನೌಕರರಿಗೆ ಕಛೇರಿ ವೇಳೆಯಲ್ಲಿ ತೆರಳಿ ಮತದಾನ ಮಾಡಲು ವಿಶೇಷ ಅನುಮತಿ ನೀಡುವಂತೆ ಕೋರಲಾಗಿದೆ ಎಂದು ಹೇಳಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ತಾಲೂಕು ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಗಳು, ಜಿಲ್ಲೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕ ಸ್ಥಾನದ ಚುನಾವಣೆಗಳು ಮತ್ತು ಬೆಂಗಳೂರು ನಗರ ಜಿಲ್ಲೆಯ ವಿವಿಧ ಇಲಾಖೆಗಳ ರಾಜ್ಯ ಪರಿಷತ್ ಸದಸ್ಯ ಸ್ಥಾನದ ಚುನಾವಣೆಗಳು ದಿನಾಂಕ 8.10.2024 ರಿಂದ 4.12.2024 ರವರೆಗೆ, ಸಮಯ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ನಡೆಯಲಿದ್ದು, ಸದರಿ ಚುನಾವಣೆಯಲ್ಲಿ ಮತ ಚಲಾಯಿಸ ಬಯಸುವ ಸರ್ಕಾರಿ ನೌಕರರು ಕಚೇರಿ ವೇಳೆಯಲ್ಲಿ ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಲು 2 ಗಂಟೆಗಳ ವಿಶೇಷ ಅನುಮತಿ ನೀಡಲಾಗಿದೆ (ಭೋಜನ ವಿರಾಮದ ಮಧ್ಯಾಹ್ನ 1.30 ರಿಂದ 2.10ರ ವೇಳೆಯನ್ನು ಒಳಗೊಂಡಂತೆ).
ಸದರಿ ಸಂಘದ ಸದಸ್ಯರಾಗಿ, ಮತದಾರರ ಪಟ್ಟಿಯಲ್ಲಿ ಹೆಸರಿರುವ ನೌಕರರಿಗೆ ಮಾತ್ರ ವಿಶೇಷ ಅನುಮತಿಯನ್ನು ನೀಡಲಾಗಿದೆ. ಈ ಅಧಿಕೃತ ಜ್ಞಾಪನದನ್ವಯ ನೀಡಲಾಗಿರುವ ವಿಶೇಷ ಅನುಮತಿಯನ್ನು ಉಪಯೋಗಿಸಿಕೊಂಡು ಮತ ಚಲಾಯಿಸಲು ತೆರಳುತ್ತಿರುವ ಬಗ್ಗೆ ನೌಕರರು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಮತ ಚಲಾಯಿಸಬಹುದಾಗಿದ್ದು, ಮತದಾನದ ನಂತರ ಪುನಃ ಕಚೇರಿ ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದ, ಸಂಬಂಧಿತ ಮೇಲಾಧಿಕಾರಿಗಳು ಈ ವಿಶೇಷ ಅನುಮತಿಯಿಂದ ಕಚೇರಿ ಕೆಲಸಗಳಿಗೆ ತೊಡಕಾಗದಂತೆ ಹಾಗೂ ವಿಧಾನ ಮಂಡಲದ ಕಾರ್ಯಕಲಾಪಗಳಿಗೆ ಅಡಚಣೆಯಾಗದಂತೆಯೂ ಎಚ್ಚರವಹಿಸುವಂತೆ ಈ ಮೂಲಕ ಸೂಚಿಸಿದೆ.
ಚುನಾವಣಾ ವೇಳಾಪಟ್ಟಿ
* ತಾಲ್ಲೂಕು ಶಾಖೆ ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆ ದಿನಾಂಕ 09-10-2024 ರಿಂದ ದಿನಾಂಕ 28-10-2024.
* ತಾಲ್ಲೂಕು ಶಾಖೆಗಳ ತಾಲ್ಲೂಕು ಅಧ್ಯಕ್ಷರು, ಯೋಜನಾ ಶಾಖೆಗಳ ಅಧ್ಯಕ್ಷರು ಹಾಗೂ ತಾಲ್ಲೂಕು-ಯೋಜನಾ ಶಾಖೆಗಳ ಖಜಾಂಚಿ ಹಾಗೂ ರಾಜ್ಯಪರಿಷತ್ ಸದಸ್ಯರ ಚುನಾವಣೆ ದಿನಾಂಕ 30-10-2024 ರಿಂದ ದಿನಾಂಕ 16-11-2024.
* ಜಿಲ್ಲಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಚುನಾವಣೆ ದಿನಾಂಕ 28-10-2024 ರಿಂದ ದಿನಾಂಕ 16-11-2024.
* ಜಿಲ್ಲಾ ಶಾಖೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ ಮತ್ತು ರಾಜ್ಯಪರಿಷತ್ ಸದಸ್ಯರ ಚುನಾವಣೆ ದಿನಾಂಕ 19-11-2024 ರಿಂದ ದಿನಾಂಕ 04-12-2024.
* ಬೆಂಗಳೂರು ನಗರ ಜಿಲ್ಲೆಯ ರಾಜ್ಯಪರಿಷತ್ ಸದಸ್ಯರ ಮತಕ್ಷೇತ್ರವಾರು ಚುನಾವಣೆ ದಿನಾಂಕ 17-09-2024 ರಿಂದ ದಿನಾಂಕ 04-12-2024.
* ರಾಜ್ಯ ಸಂಘದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆ ದಿನಾಂಕ 09-12-2024 ರಿಂದ ದಿನಾಂಕ 27-12-2024.












Click it and Unblock the Notifications