ಧರ್ಮಸ್ಥಳದ ಸುತ್ತಮುತ್ತ ಏನಿದು ಅಸಹಜ ಸಾವು?
ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಸಂದರ್ಶನದ ಆಯ್ದ ಭಾಗ.
ಪ್ರ: ಧರ್ಮಸ್ಥಳದ ಸುತ್ತಮುತ್ತಲಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಸಹಜ ಸಾವು ಪ್ರಕರಣ, ಏನಿದು ಈ ಅಸಹಜ ಪ್ರಕರಣ?
ಶೆಟ್ಟಿ: ಇದು ಇಂದು ನಿನ್ನೆಯ ಕಥೆಯಲ್ಲ ಸ್ವಾಮಿ. ಹತ್ತಾರು ವರ್ಷಗಳಿಂದ ನಡೆಯುತ್ತಿರುವ ಘಟನೆಗಳು. ವಾರಸುದಾರ ಇಲ್ಲದ ಸಾವುಗಳು. ಅದೆಷ್ಟೋ ನಿಗೂಢ ಸಾವನ್ನು ಧರ್ಮಸ್ಥಳ ಸುತ್ತಮುತ್ತಲಿನ ಜನರು ಕಂಡಿದ್ದಾರೆ. RTI ಮೂಲಕ ಸಾಧ್ಯವಾದಷ್ಟು ದಾಖಲೆಗಳನ್ನು ಪಡೆದಿದ್ದೇವೆ. ಹತ್ತು ವರ್ಷಗಳಲ್ಲಿ ಸುಮಾರು 452 ಈ ರೀತಿಯ ಅಸಹಜ ಸಾವಿನ ಪ್ರಕರಣ ನಡೆದಿದೆ. ಒಂದೇ ಒಂದು ಕೇಸು ಪೊಲೀಸ್ ಠಾಣೆಯ ಮೆಟ್ಟಲೇರಲಿಲ್ಲ, ತನಿಖೆ ಕೂಡಾ ನಡೆಯಲಿಲ್ಲ ಎಂದು ಬೇರೆ ಹೇಳ ಬೇಕಾಗಿಲ್ಲ.
ಪ್ರ: ಆಟೋ ಚಾಲಕರಿಗೆ ಧರ್ಮಸ್ಥಳದಲ್ಲಿ 'D Number' ಎಂದು ಕೊಡಲಾಗುತ್ತಿದೆ. ಇದಕ್ಕೆ ವಿರುದ್ದವಾಗಿ ಮಹೇಶ್ ಶೆಟ್ಟಿಯವರು ಜನರನ್ನು ಒಗ್ಗೂಡಿಸಿ ಹೋರಾಟಕ್ಕೆ ಇಳಿದಿದ್ದಾರೆ. ಸೌಜನ್ಯ ಕುಟುಂಬದ ಬಗ್ಗೆ ಅವರಿಗೆ ಯಾವುದೇ ಕನಿಕರವಿಲ್ಲ ಎನ್ನುವ ಮಾತನ್ನು ನೇರವಾಗಿ ಧರ್ಮಾಧಿಕಾರಿಗಳು ಹೇಳಿದ್ದಾರೆ. ಈ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಶೆಟ್ಟಿ: ಇಡೀ ಭಾರತದಲ್ಲಿ ಒಂದು ಕಾನೂನಾದರೆ, ಧರ್ಮಸ್ಥಳದಲ್ಲಿ ಮತ್ತೊಂದು ಕಾನೂನು. ಮತ್ತು ಮೇಲಿನ ಮಾತು ಧರ್ಮಾಧಿಕಾರಿಗಳಿಗೆ ಶೋಭೆ ತರುವಂತದಲ್ಲ. ಅಲ್ಲಿ ಅವರು ಹೇಳಿದ್ದೇ ದರ್ಬಾರು. ಈ ಹಿಂದೆ ನಾನು ರಿಕ್ಷಾ ಯೂನಿಯನ್ ಅಧ್ಯಕ್ಷನಾಗಿದ್ದೆ. ಅಲ್ಲಿ ಸುಮಾರು 200-250 ಆಟೋಗಳಿವೆ ಮತ್ತು ನಾಲ್ಕು ಆಟೋ ಯೂನಿಯನ್ ಗಳಿವೆ. ಈಗ ನಾನು ಯಾವ ಯೂನಿಯನ್ನಿಗೂ ಅಧ್ಯಕ್ಷನಾಗಿಲ್ಲ. ಹಾಲಿ ನಾಲ್ಕೂ ಯೂನಿಯನ್ ಅಧ್ಯಕ್ಷರು ಮಹೇಶ್ ಶೆಟ್ಟಿ ಸದ್ಯ ಅಧ್ಯಕ್ಷನಾಗಿಲ್ಲ ಎಂದು ಬರೆದುಕೊಟ್ಟ ಪತ್ರ ದಾಖಲೆ ನನ್ನಲ್ಲಿದೆ.

ಪ್ರ:ಒಂದು ವರ್ಷ ಸುಮ್ಮನಿದ್ದ ಈ ಸೌಜನ್ಯ ಪ್ರಕರಣಕ್ಕೆ ಮತ್ತೆ ಹೋರಾಟದ ಪ್ರಚೋದನೆ ಸಿಕ್ಕಿದ್ದು ಹೇಗೆ?
ಶೆಟ್ಟಿ: ಪ್ರಚೋದನೆ ಅನ್ನುವುದಕ್ಕಿಂತ ಪ್ರೇರಣೆ ಸರಿಯಾದ ಪದ ಎನ್ನುವುದು ನನ್ನ ನಂಬಿಕೆ. ಮೃತ ಸೌಜನ್ಯ ಮಾಮೂಲಿ ಹುಡುಗಿಯಾಗಿರಲಿಲ್ಲ. ಮನೆಗೆ ಬೇಕಾದ ಮಗಳಾಗಿದ್ದಳು. ತಂದೆ ತಾಯಿಯ ಪ್ರೀತಿಯ ಕೂಸಾಗಿದ್ದಳು. ಸೌಜನ್ಯ ಎನ್ನುವುದು ದೈವೀಶಕ್ತಿ. ಮಂಜುನಾಥ ಮತ್ತು ಅಣ್ಣಪ್ಪಸ್ವಾಮಿಯ ಆರಾಧಕಳು ಅವಳು. ಈ ಹೋರಾಟಕ್ಕೆ ಧುಮಕಲು ಅವಳೇ ನನಗೆ ಪ್ರೇರಣೆ.
ಪ್ರ: ಧರ್ಮಸ್ಥಳದ ಗ್ರಾಮೀಣಾಭಿವೃದ್ದಿ ಯೋಜನೆಗೆ ಸ್ಥಳೀಯರ ವಿರೋಧವಿದೆಯೇ?
ಶೆಟ್ಟಿ: ಖಂಡಿತ ಬೇಸರವಿದೆ. ಬಡ್ಡಿಗೆ ದುಡ್ಡು ಕೊಟ್ಟು ಸೂಕ್ತ ಸಮಯದಲ್ಲಿ ಮರುಪಾವತಿ ಮಾಡದಿದ್ದಲ್ಲಿ ಗೂಂಡಾಗಿರಿ ಮಾಡುತ್ತಾರೆ. ಕಾರ್ಕಳದಲ್ಲಿ ಒಂದು ಮನೆಯವರು ಈ ಯೋಜನೆಯ ಫಲಾನುಭವಿಗಳಾಗಿದ್ದರು. ದುಡ್ಡು ಪಾವತಿಸದಿದ್ದಕ್ಕೆ ಮನೆಯ ಸುತ್ತಮುತ್ತವಿದ್ದ ಮರಗಳನ್ನು ಕಡಿದುಕೊಂಡು ಹೋಗಿದ್ದಾರೆ. ಬಡ್ಡಿ ಕೊಡದಿದ್ದರೆ ಹಂಚು ತೆಗೆದು ಕೊಂಡು ಹೋಗುವುದು ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ.












Click it and Unblock the Notifications