ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಜನ್ಯ ಹತ್ಯೆ ಆರೋಪಿಗಳಿಗೆ ಶಿಕ್ಷೆ ಯಾವಾಗ?

By ರಾಕೇಶ್ ಶೆಟ್ಟಿ
|
Google Oneindia Kannada News

"ಬಹುಶಃ ಆಗಿನ ಕಾಲವೇ ಚೆನ್ನಾಗಿತ್ತೆನೋ.ಆಗಲಾದರೂ ಕುರು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಅವಳ ಸಹಾಯಕ್ಕೆ ಕರೆದೊಡನೆಯೇ ಶ್ರೀ ಕೃಷ್ಣ ಪರಮಾತ್ಮ ಬಂದಿದ್ದ.ಪಾಪ! ಈ ಕಾಲದ ಹೆಣ್ಣು ಮಕ್ಕಳ ಕೂಗು ಆ ಕಾಣದ ದೇವರಿಗೂ, ಕಾನೂನು ಪಾಲಕರಾದ ಮನುಷ್ಯ(?)ರಿಗೂ ಕೇಳುತ್ತಿಲ್ಲ.ಕುರುಕ್ಷೇತ್ರದ ಯುದ್ಧದ ಮುಗಿದರೂ ಕೌರವರು ಇನ್ನೂ ಸತ್ತಿಲ್ಲ. ದ್ರೌಪದಿಯರ ಗೋಳು ಮುಗಿಯೋಲ್ಲ"

ಆಗ ಕೃಷ್ಣನೇನೋ ಕರೆದಾಗ ಬಂದಿದ್ದ.ಆದರೆ ಇಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಯಾಕೋ ವರುಷ ಕಳೆದರೂ ಇನ್ನು ಕರುಣೆ ತೋರಲಿಲ್ಲ!

ನನಗೆ ಈ ದೇವರುಗಳ ಮೇಲೆ ಒಮ್ಮೊಮ್ಮೆ ಕೋಪಬರುವುದು ಇದೇ ಕಾರಣಕ್ಕಾಗಿ, ಏನೆಲ್ಲಾ ಪಾಪಗಳನ್ನು ಮಾಡಿ ಒಂದು ನೇಮ,ಒಂದು ಹರಕೆ,ಒಂದು ಹೋಮ,ಒಂದು ಹವನ,ತಪ್ಪು ಕಾಣಿಕೆ ಸಲ್ಲಿಸಿ ಸುಮ್ಮನಾಗಿಬಿಡಬಹುದೇ? ಹಾಗಿದ್ದರೆ 'ಧರ್ಮ'ವೆಲ್ಲಿದೆ?

ದಿಲ್ಲಿಯಲ್ಲಿ ಕಳೆದ ಡಿಸೆಂಬರಿನಲ್ಲಿ ನಡೆದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ 'ನಿರ್ಭಯ' ಅತ್ಯಾಚಾರ ಪ್ರಕರಣದಲ್ಲಿ ಹೋರಾಟದ ಕಿಡಿಯನ್ನು ದೆಹಲಿಯ ವಿದ್ಯಾರ್ಥಿ ಮಿತ್ರರು ಹಚ್ಚಿದ್ದರು.ಅದು ದೇಶವ್ಯಾಪಿಯೂ ಹಬ್ಬಿತ್ತು. ಖುದ್ದು ಕೇಂದ್ರ ಸರ್ಕಾರವನ್ನೇ ಮಂಡಿಯೂರುವಂತೆ ಮಾಡಿದ್ದು ಯುವಶಕ್ತಿಗೆ ಸಂದ ಜಯವಾಗಿತ್ತು.ಈಗ ನಿರ್ಭಯ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದೆ.ಆದರೆ ನಮ್ಮ ಸೌಜನ್ಯ ಪ್ರಕರಣದ ಆರೋಪಿಗಳೇ ಇನ್ನೂ ಸಿಕ್ಕಿಲ್ಲ!

ಅತ್ಯಾಚಾರದ ಆರೋಪಿಗಳನ್ನು ವರ್ಷವಾದರೂ ಬಂಧಿಸಲಾಗದಷ್ಟು ನಿಷ್ಕ್ರಿಯರಾಗಿದ್ದಾರೆಯೇ ನಮ್ಮ ಕರ್ನಾಟಕ ಪೋಲಿಸರು? ಅಥವಾ ಪೋಲಿಸರನ್ನು ನಿಷ್ಕ್ರಿಯಗೊಳಿಸುವಲ್ಲಿ ಕಾಣದ 'ಕೈ' ಗಳು ಕೆಲಸ ಮಾಡುತ್ತಿವೆಯೇ? ಪ್ರಕರಣ ನಡೆದಾಗ ಇದ್ದಿದ್ದು ಬಿಜೆಪಿ ಸರ್ಕಾರ.ಈಗ ಇರುವುದು ಕಾಂಗ್ರೆಸ್ಸ್ ಸರ್ಕಾರ. ಹಾಗಿದ್ದರೆ ಆ ಕಾಣದ ಕೈಗಳು ಸರ್ಕಾರದ ಕೈಗಳನ್ನೇ ಕಟ್ಟಿಹಾಕಬಲ್ಲಷ್ಟು ಬಲಿಷ್ಟವಾಗಿವೆಯೇ?

ರಾಜ್ಯಾದ್ಯಂತ ಧಿಗ್ಬ್ರಮೆ ಹುಟ್ಟಿಸಿದ ಸೌಜನ್ಯಾಳ ಸಾವಿಗೆ ಮೊನ್ನೆ ಒಂದು ವರ್ಷ.ವರ್ಷವಾದರೂ ಪ್ರಕರಣದ ತನಿಖೆ ಸರಿಯಾಗಿ ನಡೆಯದೆ ಇರುವುದರಿಂದ ಜನರಲ್ಲಿ ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಧರ್ಮಸ್ಥಳ ನಮ್ಮ ಶ್ರದ್ಧಾಕೇಂದ್ರ

ಧರ್ಮಸ್ಥಳ ನಮ್ಮ ಶ್ರದ್ಧಾಕೇಂದ್ರ

'ಧರ್ಮಸ್ಥಳ'. ನಮ್ಮ ಕರ್ನಾಟಕದ ಶ್ರದ್ಧಾಕೇಂದ್ರಗಳಲ್ಲಿ ಬಹು ಮುಖ್ಯವಾದದ್ದು.ಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ದೊರೆಯುವ ವಸತಿ ಮತ್ತು ಕ್ಷೇತ್ರದ ಸ್ವಚ್ಚತೆಯಿಂದ ಉಳಿದ ತೀರ್ಥ ಕ್ಷೇತ್ರಗಳ ನಡುವೆ ವಿಶಿಷ್ಟವಾಗಿ ನಿಲ್ಲುತ್ತದೆ.

ಇವೆಲ್ಲದರ ಜೊತೆಗೆ ಆಯುರ್ವೇದ,ಯೋಗ,ಮಹಿಳಾ ಸ್ವ ಸಹಾಯ ಸಂಘಗಳು,ಸಿರಿ ಗ್ರಾಮೋದ್ಯೋಗ ಯೋಜನೆ,ಸ್ವ-ಉದ್ಯೋಗ ತರಬೇತಿ, ಪ್ರಕೃತಿ ಚಿಕಿತ್ಸೆ,ಶಿಕ್ಷಣ ಸಂಸ್ಥೆಗಳು, ಪಾಳುಬಿದ್ದ ದೇವಸ್ಥಾನಗಳ ಪುನರುತ್ಥಾನ ಮುಂತಾದ ಕೆಲಸಗಳಿಂದ ಎಲ್ಲರ ಗಮನ ಸೆಳೆಯುತ್ತಿರುವುದು ಧರ್ಮಸ್ಥಳ.

ಇಲ್ಲಿ ಸುಳ್ಳು ಆಣೆ-ಪ್ರಮಾಣ ಮಾಡಿದರೆ ಉಳಿಗಾಲವಿಲ್ಲ. ಈ ಕ್ಷೇತ್ರಕ್ಕೆ ಈಗ ಅಂಟಿರುವ ಕಳಂಕ ದೂರಾಗಬೇಕೆಂದರೆ ಆ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು.ಅಣ್ಣಪ್ಪ ಸ್ವಾಮಿ ಕಾವಲಿನ ಕ್ಷೇತ್ರದಲ್ಲಿ ದುಷ್ಟ ಜನರು ಮಾಡಿದ ತಪ್ಪಿಗೆ ಶಿಕ್ಷೆಯಾದಗಾಲೇ ಸೌಜನ್ಯ ಆತ್ಮಕ್ಕೆ ಶಾಂತಿ ಸಿಗುವುದು.
ಏನಿದು ಸೌಜನ್ಯಾ ಪ್ರಕರಣ

ಏನಿದು ಸೌಜನ್ಯಾ ಪ್ರಕರಣ

ಕಳೆದ ವರ್ಷ 2012 ರ ಅ. 9 ರಂದು ಸಂಜೆ. ಕಾಲೇಜಿನಿಂದ ಮನೆಗೆ ಹೊರಟ ಧರ್ಮಸ್ಥಳ ಕ್ಷೇತ್ರದ ಬಳಿಯ ಪಾಂಗಾಳದ, ಚಂದಪ್ಪ ಗೌಡ ಕುಸುಮಾವತಿ ದಂಪತಿ ಪುತ್ರಿ ಸೌಜನ್ಯಾ (17) ಮನೆಗೆ ಹೋಗಲೇ ಇಲ್ಲ.

ರಾತ್ರಿಯಾದರೂ ಮನೆಗೆ ಬಾರದ ಪುತ್ರಿಯನ್ನು ಮನೆಯವರು ರಾತ್ರಿಯಿಡೀ ಹುಡುಕಿದರೂ ಸಿಗಲಿಲ್ಲ.ಮರುದಿನ ಬೆಳಿಗ್ಗೆಯೂ ಹುಡುಕಾಟ ಮುಂದುವರಿಸಿದಾಗ ಮಧ್ಯಾಹ್ನದ ವೇಳೆಗೆ ನೇತ್ರಾವತಿ ಸ್ನಾನ ಘಟ್ಟದಿಂದ ಅನತಿ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಶವ ಸಿಕ್ಕಿತು. ಮನೆಯಲ್ಲಿನ ಹೊಸ ಅಕ್ಕಿ ಊಟವನ್ನು ನೆನೆದುಕೊಂಡು ಹೊರಟಿದ್ದ ಬಾಲೆ ದುರುಳರ ಕಾಮಪಿಪಾಸೆಗೆ ಬಲಿಯಾಗಿದ್ದಳು.
ಸಾಲು ಸಾಲು ಪ್ರತಿಭಟನೆಗಳು

ಸಾಲು ಸಾಲು ಪ್ರತಿಭಟನೆಗಳು

ಈ ಘಟನೆಯಿಂದ ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತದ ಸಜ್ಜನ ಮನಸ್ಸುಗಳು ಉರಿದೆದ್ದವು. ಜಾತಿ ಭೇದವಿಲ್ಲದೆ ಅಲ್ಲಲ್ಲಿ ಪ್ರತಿಭಟನೆಗಳು ನಡೆದವು. ಬಾಹಬಲಿ ಬೆಟ್ಟದ ಬಳಿ ಅನುಮಾನಾಸ್ಪದವಾಗಿ ಇದ್ದ ಒಬ್ಬನನ್ನು ಊರವರೇ ಹಿಡಿದು ಪೋಲಿಸರಿಗೆ ಒಪ್ಪಿಸಿದರು. ಬಂಧಿತ ಕಾರ್ಕಳದ ಸಂತೋಷ್ ಎಂಬಾತನೇ ಆರೋಪಿ ಎಂದು ಪೋಲಿಸರು ನಿರ್ಧರಿಸಿ ಕೈತೊಳೆದುಕೊಳ್ಳಲು ಅಂದಿನಿಂದಲೇ ಸನ್ನದ್ಧರಾದರು. ಆನಂತರ ತನಿಖೆ ಹಳ್ಳ ಹಿಡಿಯುತ್ತಾ ಹೋಯಿತು.ಸಂತೋಷನನ್ನು ಬಂಧಿಸಿದಾಗಲೇ ಜನ ಅನುಮಾನ ಪಟ್ಟಿದ್ದರು.

ಭುವಿತ್ ಶೆಟ್ಟಿ ತಮ್ಮ ಬ್ಲಾಗಿನಲ್ಲಿ ಸೌಜನ್ಯ ಪ್ರಕರಣವನ್ನು ಇನ್ನಷ್ಟು ವಿಸ್ತಾರವಾಗಿ ಬರೆದಿದ್ದಾರೆ.

ಕೇಸ್ ಹಳ್ಳ ಹಿಡಿದಿದ್ದು ಹೇಗೆ

ಕೇಸ್ ಹಳ್ಳ ಹಿಡಿದಿದ್ದು ಹೇಗೆ

ಕಾಲೇಜಿನ ಸಮವಸ್ತ್ರದಲ್ಲಿಯೇ ಈಕೆಯನ್ನು ಕರೆದೊಯ್ದು ಬಲಾತ್ಕಾರ ಮಾಡಿ ಬಟ್ಟೆಬರೆಗಳನ್ನು ಹರಿದು ಹಾಕಲಾಗಿತ್ತು. ಕೈಗಳನ್ನು ಚೂಡಿದಾರದ ಶಾಲಿನಿಂದ ಗಿಡವೊಂದಕ್ಕೆ ಕಟ್ಟಿಹಾಕಲಾಗಿತ್ತು. ಬಳಿಕ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಸಂದರ್ಭ ಬಾಲೆ ಪ್ರತಿ ಹೋರಾಟವನ್ನು ನಡೆಸಿದ್ದಾಳೆ ಎಂದು ಅಲ್ಲಿನ ದೃಶ್ಯ ಸಾರಿಸಾರಿ ಹೇಳುವ ಕುರುಹುಗಳಿದ್ದವು. ಶವ ಇದ್ದ ಸ್ಥಳದಲ್ಲಿ ದೂರವಾಣಿ ಸಂಖ್ಯೆಗಳಿರುವ ಚೀಟಿ ಪೋಲಿಸರಿಗೆ ಸಿಕ್ಕಿದೆ ಅದನ್ನು ನಾಶಮಾಡಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ.

ಅಲ್ಲದೆ ಬಳಿಕ ನಡೆದ ತನಿಖೆ ಸಂದರ್ಭ ಪೋಲಿಸರು ಸೌಜ್ಯನ್ಯಾಳ ಮನೆಯಿಂದಲೇ ಆಕೆಯ ಒಳ ಉಡುಪನ್ನು ಸ್ಥಳದಲ್ಲಿ ತಂದಿರಿಸಿದ್ದಾರೆಂದೂ ಆರೋಪಗಳಿವೆ.
ಯಾರಿಂದ ತನಿಖೆ

ಯಾರಿಂದ ತನಿಖೆ

ಆರಂಭದಿಂದಲೇ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಎಲ್ಲರೂ ಆಗ್ರಹಿಸಿದ್ದರು. ಆದರೆ ಅಂದಿನ ಸರಕಾರ ಕಿವಿಗೊಡಲಿಲ್ಲ. ಬದಲಾಗಿ ಸಿಐಡಿಗೆ ಒಪ್ಪಿಸಿತು. ಅವರೂ ಪೂರ್ಣ ತನಿಖೆ ಮಾಡಲಿಲ್ಲ. ತನಿಖಾಧಿಕಾರಿಗಳು ಬೇರೆ ಬೇರೆ ಬಂದರೂ ಪ್ರಯೋಜನವಾಗಿಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ಪೂರ್ಣ ಪ್ರಮಾಣದ ತನಿಖಾ ವರದಿ ಸಲ್ಲಿಕೆಯೇ ಆಗಲಿಲ್ಲ.ಇದೆಲ್ಲವನ್ನು ನೋಡಿದರೆ ಬಂಧಿತ ಆರೋಪಿಯೂ ಬಿಡುಗಡೆಯಾಗುವುದರಲ್ಲಿ ಸಂಶಯವಿಲ್ಲ. ಶಾಸಕ ವಸಂತ ಬಂಗೇರ ಸೌಜನ್ಯಾ ಸಾವಿನ ಬಗ್ಗೆ ವಿಧಾನಸಭೆಯಲ್ಲಿ ಪ್ರಬಲವಾದ ಧ್ವನಿ ಎತ್ತಿ ಪ್ರಕರಣದ ತನಿಖೆಗೆ ಚುರುಕು ಮುಟ್ಟಿಸುವ ಕಾರ್ಯ ಮಾಡಿದ್ದಾರೆ.

ಪ್ರಶ್ನೆಗಳಿಗೆ ಉತ್ತರ ಬೇಕಿದೆ

ಪ್ರಶ್ನೆಗಳಿಗೆ ಉತ್ತರ ಬೇಕಿದೆ

ದೆಹಲಿ ಮೊದಲಾದೆಡೆಗಳಲ್ಲಿನ ಇಂಥದ್ದೇ ಪ್ರಕರಣಗಳು ಶೀಘ್ರ ಇತ್ಯರ್ಥವಾಗುತ್ತಿರಬೇಕಾದರೆ ಸೌಜನ್ಯಾಳ ಸಾವು ನ್ಯಾಯವೇ ಎಂಬ ಪ್ರಶ್ನೆ ಇದೆ.ಹಳ್ಳಿಗೊಂದು ಕಾನೂನು,ದಿಲ್ಲಿಗೊಂದು ಕಾನೂನು ಯಾಕೆ? ಈ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡದೇ ಇರುವುದು ಯಾಕೆ? ಪ್ರಕರಣದ ಪೂರ್ಣ ಮಾಹಿತಿಯನ್ನು ಸರಕಾರ ಯಾಕೆ ಕೊಡುತ್ತಿಲ್ಲ? ಸಾರ್ವಜನಿಕರ ಅನುಮಾನಗಳನ್ನು ಸರಕಾರ ಯಾಕೆ ಪರಿಹರಿಸುತ್ತಿಲ್ಲ? ಪೋಲಿಸರು ದಿಟ್ಟ ತನಿಖೆಗೆ ಯಾಕೆ ಹಿಂದೇಟು ಹಾಕುತ್ತಿದ್ದಾರೆ? ತನಿಖೆಗೆ ಅಡ್ಡಿಪಡಿಸುತ್ತಿರುವ ಕಾಣದ ಕೈಗಳು ಯಾವುವು? ಎಂಬಿತ್ಯಾದಿ ಪ್ರಶ್ನೆಗಳು ತಾಲೂಕಿನ ಮತ್ತು ಇಡಿ ರಾಜ್ಯದ ಜನತೆಯನ್ನು ನ್ಯಾಯ ಸಿಗುವವರೆಗೆ ಕಾಡುತ್ತಲೇ ಇರಲಿದೆ."

ಆನ್ ಲೈನ್ ಅಭಿಯಾನ

ಆನ್ ಲೈನ್ ಅಭಿಯಾನ

ಚಿತ್ರದಲ್ಲಿ : ಮೃತ ವಿದ್ಯಾರ್ಥಿನಿ ಸೌಜನ್ಯ ಅವರ ನೊಂದ ತಾಯಿ. ಸೌಜನ್ಯ ಪರ ವರ್ಷದಿಂದ ದನಿಯೆತ್ತುತ್ತಿರುವ "ಜಸ್ಟಿಸ್ ಫಾರ್ ಕುಮಾರಿ ಸೌಜನ್ಯ" ( 'Justice For Kumari Sowjanya | Join This Page To Support Us |' ) ಅನ್ನುವ Facebook ಪುಟವಿದೆ. ಈ ಗುಂಪು ಕಳೆದ ಫೆಬ್ರವರಿ 4 ರಂದು ಬೆಳ್ತಂಗಡಿ ತಾಲೂಕು ಕಚೇರಿಯ ಮುಂದೆ 24 ಗಂಟೆಗಳ ಪ್ರತಿಭಟನೆ ನಡೆಸಿತ್ತು. ದುರಾದೃಷ್ಟವಶಾತ್ ಅವತ್ತು ಯಾವುದೇ ದೊಡ್ಡ ವಾಹಿನಿಗಳು ಇದನ್ನು ರಾಜ್ಯಮಟ್ಟದಲ್ಲಿ ಸುದ್ದಿ ಮಾಡಲಿಲ್ಲ.

ಪ್ರತಿಭಟನೆ ಮುಂದುವರೆದಿದೆ

ಪ್ರತಿಭಟನೆ ಮುಂದುವರೆದಿದೆ

ಸೌಜನ್ಯಾ ಜೊತೆ ಜೊತೆಗೆ ಈ ಸುತ್ತಮುತ್ತಲ ಭಾಗದಲ್ಲಿ ಈವರೆಗೂ ನಡೆದಿದೆಯೆನ್ನಲಾದ (ರಾಜ್ಯದಲ್ಲೇ ಅತಿ ಹೆಚ್ಚು ಅಸಹಜ ಸಾವು ಸಂಭವಿಸಿರುವುದು ಇಲ್ಲಿಯೇ ಅನ್ನುವ ವಾದವೂ ಇದೆ!) ಎಲ್ಲಾ ಅಸಹಜ ಸಾವಿನ ಪ್ರಕರಣದ ಆರೋಪಿಗಳಿಗೂ ಶಿಕ್ಷೆಯಾಗಬೇಕಿದೆ.

ಸೌಜನ್ಯಾ ಸಾವಿಗೆ ಒಂದು ವರ್ಷವಾಗುತಿದ್ದಂತೆ ಟಿವಿ 9 ಮತ್ತು ಇತರೆ ಸಂಘಟನೆಗಳು ಮತ್ತೆ ಈ ಹೋರಾಟಕ್ಕೆ ಜೀವ ನೀಡಿವೆ. ಸೌಜನ್ಯಾ ಪೋಷಕರು ಮತ್ತು ಹಿಂದೂ ಸಂಘಟನೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಪ್ರಭಾವಿ ಮಕ್ಕಳ ಹೆಸರನ್ನು ಪ್ರಕರಣದಲ್ಲಿ ಆರೋಪಿಸುತ್ತಿದ್ದಾರೆ.

ಬಡವರ ಮನೆಯ ಹೆಣ್ಣು ಮಕ್ಕಳೆಂದರೆ ತಿಂದು ಎಸೆಯುವ ಹಣ್ಣಿನ ಸಿಪ್ಪೆಗಳಂತಾಗಬಾರದು. ಸತ್ಯ ಅನ್ನುವುದು ಸೂರ್ಯನಿದ್ದಂತೆ ಅದಕ್ಕೆ ಕ್ಷಣಕಾಲ ಗ್ರಹಣ ಹಿಡಿಯಬಹುದು ಆದರೆ ಅವನ ಪ್ರಭೆಯನ್ನು ಶಾಶ್ವತವಾಗಿ ಮುಚ್ಚಿಡಲು ಸಾಧ್ಯವಿಲ್ಲ. ಹಾಗೆಯೇ ಸೌಜನ್ಯ ಪ್ರಕರಣವನ್ನು ಕಾಣದ "ಕೈ"ಗಳು ಈ ಕ್ಷಣದಲ್ಲಿ ಹಳ್ಳಹಿಡಿಸಿರಬಹುದು.

English summary
Sowjanya murder case, Sowjanya, 2nd PUC Student from SDM college, Ujire (Karnataka) brutally murdered on 09.10.2012. Local residents of Ujire, Beltangady are demanding justice for Sowjanya. Here is insight analysis about the case by Rakesh Shetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X