Sonia Gandhi: ಸೋನಿಯಾ ಗಾಂಧಿ 2 ಬಾರಿ ಪ್ರಧಾನಿ ಪ್ರಧಾನಿಯಾಗಬಹುದಿತ್ತು, ಈ ಕಾರಣಕ್ಕೆ ಆಗಲಿಲ್ಲ: ಸಿಎಂ ಡಿ.ಕೆ ಶಿವಕುಮಾರ್
Sonia Gandhi: ಸೋನಿಯಾ ಗಾಂಧಿಯವರು ಎರಡು ಬಾರಿ ದೇಶದ ಪ್ರಧಾನಿಯಾಗಬಹುದಿತ್ತು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೋನಿಯಾ ಗಾಂಧಿ ಅವರ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಸೋನಿಯಾ ಗಾಂಧಿಯವರು ಎರಡು ಬಾರಿ ದೇಶದ ಪ್ರಧಾನಿಯಾಗಬಹುದಿತ್ತು ಅಂತ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಸೋನಿಯಾ ಗಾಂಧಿ ಅವರು ಪಿಎಂ ಆಗಬಹುದಿತ್ತು. ಆದರೆ ಅವರು ಅಧಿಕಾರವನ್ನು ತ್ಯಾಗ ಮಾಡಿದರು. ನನಗೆ ಅಧಿಕಾರಕ್ಕಿಂತ ಈ ದೇಶದ ಭವಿಷ್ಯ ಮುಖ್ಯ ಎಂದು ಭಾವಿಸಿ ಆರ್ಥಿಕ ತಜ್ಞರಾಗಿದ್ದ ಡಾ.ಮನಮೋಹನ್ ಸಿಂಗ್ ಅವರನ್ನು ದೇಶದ ಪ್ರಧಾನಿಯನ್ನಾಗಿಸಿದರು. ದೇಶಕ್ಕಾಗಿ ಇಂದಿರಾ ಗಾಂಧಿ ಅವರು, ರಾಜೀವ್ ಗಾಂಧಿ ಅವರು ತಮ್ಮ ಬದುಕನ್ನೇ ತ್ಯಾಗ ಮಾಡಿದರು. ಇದು ಕಾಂಗ್ರೆಸ್ ನ ತ್ಯಾಗದ ಇತಿಹಾಸ. ಬಿಜೆಪಿ, ಜೆಡಿಎಸ್ ನವರು ಈ ದೇಶಕ್ಕಾಗಿ ಏನನ್ನು ತ್ಯಾಗ ಮಾಡಿದ್ದಾರೆ? ಅದಕ್ಕೆ ಹೇಳುವುದು ಈ ದೇಶದ ಚರಿತ್ರೆ. ಅದು ಕಾಂಗ್ರೆಸ್ ಚರಿತ್ರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Sonia Gandhi: ಭಾರತ್ ಜೋಡೋ ಯಾತ್ರೆ - ದೇಶದ ಬದಲಾವಣೆಗೆ ಹೊಸ ದಿಕ್ಕು: ಡಿಕೆಶಿ
ಸೆಪ್ಟೆಂಬರ್ 9ರ ಬುಧವಾರ ಕೆಪಿಸಿಸಿ ಭಾರತ್ ಜೋಡೋ ಭವನದಲ್ಲಿ ನಡೆದ 'ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಾತ್ರೆಯ ಆಶಯ, ದೇಶದ ಏಕತೆ, ಸೌಹಾರ್ದತೆಯನ್ನು ಮತ್ತೊಮ್ಮೆ ಸ್ಮರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಭಾರತ್ ಜೋಡೋ ಯಾತ್ರೆ ಕೇವಲ ಪಕ್ಷದ ಕಾರ್ಯಕ್ರಮವಲ್ಲ, ಇದು ದೇಶದ ಐಕ್ಯತೆ, ಸಮಗ್ರತೆ ಹಾಗೂ ಜನರ ನೋವು-ನಲಿವುಗಳನ್ನು ಅರಿತು, ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಬದಲಾವಣೆಯ ಹೊಸ ಗಾಳಿಗೆ ನಾಂದಿ ಹಾಡಬೇಕೆಂದು ರಾಹುಲ್ ಗಾಂಧಿಯವರು ದೇಶಕ್ಕೆ ನೀಡಿದ ಐತಿಹಾಸಿಕ ಸಂದೇಶವಾಗಿದೆ. ಭಾರತ್ ಜೋಡೋ ನಮ್ಮ ಸಂಕಲ್ಪ, ಜನರ ಏಕತೆ ನಮ್ಮ ಶಕ್ತಿ ಎಂದಿದ್ದಾರೆ.
ಪ್ರತಿ ಧರ್ಮದವರಿಗೂ ಈ ದೇಶದಲ್ಲಿ ಬದುಕುವ ಹಕ್ಕಿದೆ: ಬಿ.ಕೆ ಹರಿಪ್ರಸಾದ್
ಪ್ರತಿ ಧರ್ಮದವರಿಗೂ ಈ ದೇಶದಲ್ಲಿ ಬದುಕುವ ಹಕ್ಕಿದೆ. ಪ್ರತಿಯೊಬ್ಬರೂ ಈ ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ, ಬೆವರು ಹರಿಸಿದ್ದಾರೆ. ದೇಶದ ಏಕತೆ, ಶಾಂತಿ ಕಾಪಾಡಬೇಕು, ಸಂವಿಧಾನ ರಕ್ಷಿಸಬೇಕು ಎಂಬ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡಿದರು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ 240 ಕಿ.ಮೀ. ಪಾದಯಾತ್ರೆ ನಡೆಸಿದ್ದರು. ದೇಶದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ರಾಹುಲ್ ಗಾಂಧಿ ಅವರು 10 ಸಾವಿರ ಕಿ.ಮೀ. ಯಾತ್ರೆ ಕೈಗೊಂಡರು. ಇದು ದೇಶದ ಐತಿಹಾಸಿಕ ದಾಖಲೆ. ಅವರು ಪ್ರಧಾನಿ ಆಗಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ಮಾಡಲಿಲ್ಲ, ಬದಲಿಗೆ ಈ ದೇಶದ ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಬಡವರ ನೋವು ಅರಿಯುವ ಉದ್ದೇಶ ಅವರದ್ದಾಗಿತ್ತು ಎಂದು ಹೇಳಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಸಚಿವರಾದ ಶರಣಪ್ರಕಾಶ್ ಪಾಟೀಲ್, ಶಿವಲಿಂಗೇಗೌಡ, ಮಾಜಿ ಎಂಎಲ್‌ಸಿ ಎಂ. ನಾರಾಯಣಸ್ವಾಮಿ, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


Click it and Unblock the Notifications
