ಕಾಂಗ್ರೆಸ್ ದಿಗ್ಗಜರ ವಿರುದ್ಧ ಸೋಮಣ್ಣ, ಅಶೋಕ್: ಟಗರು ಮುಂದೆ ನಿಂತು, ಬಂಡೆ ಉರುಳಿಸುತ್ತಾ ಬಿಜೆಪಿ?
ವರುಣಾ ಮತ್ತು ಕನಕಪುರದಲ್ಲಿ ಕೇಸರಿ ಪಕ್ಷದ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್‌ನ ಉನ್ನತ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿರುದ್ಧ ಇಬ್ಬರು ಹಿರಿಯ ಸಚಿವರನ್ನು ಬಿಜೆಪಿ ವರುಣಾ ಮತ್ತು ಕನಕಪುರದಲ್ಲಿ ಕಣಕ್ಕಿಳಿಸಿದೆ.
ಮಂಗಳವಾರವಷ್ಟೇ 189 ಕ್ಷೇತ್ರಗಳನ್ನು ಒಳಗೊಂಡ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಸದ್ಯ ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಘೋಷಣೆ ಮಾಡಲಾಗಿದ್ದು, 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಳ್ಳಲಾಗಿದೆ. ಗುರುವಾರದೊಳಗೆ ಬಿಜೆಪಿ ಮೂರನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲೇ ತನ್ನ ಪಕ್ಷದ ಸಚಿವರಿಗೆ ಬಹುದೊಡ್ಡ ಜವಬ್ದಾರಿಯನ್ನು ನೀಡಿದೆ.

ಐದು ಬಾರಿ ಶಾಸಕರಾಗಿರುವ ವಿ ಸೋಮಣ್ಣ ಅವರು ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲಿದ್ದಾರೆ. ಕನಕಪುರದಲ್ಲಿ ಶಿವಕುಮಾರ್ ವಿರುದ್ಧ ಆರು ಬಾರಿ ಶಾಸಕರಾಗಿರುವ ಆರ್ ಅಶೋಕ ಕಣಕ್ಕಿಳಿಯಲಿದ್ದಾರೆ. ಮಾತ್ರವಲ್ಲದೆ ಸೋಮಣ್ಣ ಮತ್ತು ಅಶೋಕ್ ಅವರು ಕ್ರಮವಾಗಿ ಚಾಮರಾಜನಗರ ಮತ್ತು ಪದ್ಮನಾಭನಗರದಿಂದಲೂ ಸ್ಪರ್ಧಿಸಲಿದ್ದಾರೆ.
ವರುಣಾ ಮತ್ತು ಕನಕಪುರ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲ ಅಥವಾ 'ಡಮ್ಮಿ' ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿತ್ತು. ಈಗ ಅಭ್ಯರ್ಥಿಗಳನ್ನು ಬದಲಾಯಿಸುವ ಮೂಲಕ ಕೇಸರಿ ಪಕ್ಷ ಜಯ ಗಳಿಸಲು ತೊಡೆ ತಟ್ಟಿ ನಿಂತಿದೆ.

ಸಮಬಲದ ಹೋರಾಟ ರೂಪಿಸುವ ಹೊಣೆ ಈಗ ಸೋಮಣ್ಣ ಮತ್ತು ಅಶೋಕ ಅವರ ಮೇಲಿದೆ. ಅವರು ಬಿಜೆಪಿಯ ನಿರೀಕ್ಷೆಗಳನ್ನು ಹುಸಿಯಾಗದಂತೆ ನೋಡಿಕೊಳ್ಳುವು ಬಹುದೊಡ್ಡ ಸವಾಲಾಗಿದೆ. ವಾಸ್ತವವಾಗಿ, ಸೋಮಣ್ಣ ಅವರಿಗೆ ರಾಜಕೀಯದಲ್ಲಿ ಸ್ನೇಹ ಸಂಬಂಧ ಹೊಂದಿರುವ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಇಷ್ಟವಿರಲಿಲ್ಲ.
2008 ಮತ್ತು 2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾದಲ್ಲಿ ಶೇ.50ಕ್ಕೂ ಹೆಚ್ಚು ಮತ ಗಳಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಶೇ.55ರಷ್ಟು ಮತ ಪಡೆದಿದ್ದರು. 2008 ರಲ್ಲಿ ಎಲ್ ರೇವಣ್ಣಸಿದ್ದಯ್ಯ ಅವರು ವರುಣಾದಲ್ಲಿ ಬಿಜೆಪಿ ಪಡೆದ ಅತಿ ಹೆಚ್ಚು ಮತ 37%ವಷ್ಟೇ. ಹೀಗಾಗಿ ವರುಣಾದಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ.

"ನಾನು ಇದನ್ನು ನಿರೀಕ್ಷಿಸಿರಲಿಲ್ಲ, ಆದರೆ ಪಕ್ಷವು ನನ್ನನ್ನು ನಂಬಿದೆ. ವರುಣಾದಿಂದ ನನ್ನ ಪ್ರಚಾರ ಆರಂಭಿಸುತ್ತೇನೆ. ಸೋಲು ಮತ್ತು ಗೆಲುವು ರಾಜಕೀಯದಲ್ಲಿ ನಾಣ್ಯದ ಎರಡು ಮುಖಗಳು'' ಎಂದು ಲಿಂಗಾಯತ ಸೋಮಣ್ಣ ಹೇಳಿದರು.
ಲಿಂಗಾಯತರ ಭದ್ರಕೋಟೆ ಕನಕಪುರ
ವರುಣಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರು ಇರುವುದು ಸೋಮಣ್ಣನವರಿಗೆ ಒಂದು ರೀತಿ ಅನುಕೂಲವಾಗಬಹುದು. "ವರುಣ ನನಗೆ ಹೊಸದಲ್ಲ. ನನಗೆ ಅಲ್ಲಿ ವರ್ಷಗಳ ಸಂಪರ್ಕವಿದೆ, ಆದರೆ ಅದರ ಶಾಸಕರಾಗಿದ್ದ ಸಿದ್ದರಾಮಯ್ಯನಷ್ಟು ಅಲ್ಲ. ನನ್ನ ಕೆಲಸವನ್ನು ನಾನು ಮಾಡುತ್ತೇನೆ, "ಎಂದು ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಸೋಮಣ್ಣ ಅವರು ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಒಕ್ಕಲಿಗ ಭದ್ರಕೋಟೆ ಕನಕಪುರ
ಒಕ್ಕಲಿಗ ಭದ್ರಕೋಟೆಯಾದ ಕನಕಪುರ ಮೂರು ಬಾರಿ ಪ್ರತಿನಿಧಿಸಿರುವ ಶಿವಕುಮಾರ್ ಅವರ ಕ್ಷೇತ್ರವಾಗಿದೆ. ಶಿವಕುಮಾರ್ ಈ ಹಿಂದೆ ಸಾತನೂರು ಕ್ಷೇತ್ರವನ್ನು ನಾಲ್ಕು ಬಾರಿ ನಿಭಾಯಿಸಿದ್ದರು. 2008 ರಿಂದ ಕನಕಪುರದಲ್ಲಿ ಅವರ ಮತಗಳಿಕೆ ಏರಿಕೆಯಾಗಿದೆ. 2008 ರಲ್ಲಿ 48% ರಿಂದ 2018 ರಲ್ಲಿ 68% ಕ್ಕೆ ಮತಗಳು ಶಿವಕುಮಾರ್ ಅವರಿಗೆ ಲಭಿಸಿದೆ. ಆದರೆ ಇಲ್ಲಿ ಬಿಜೆಪಿ 3% ಮತಗಳನ್ನೂ ದಾಟಿಲ್ಲ.
''ಶಿವಕುಮಾರ್ ವಿರುದ್ಧ ಅವರನ್ನು ಕಣಕ್ಕಿಳಿಸುವ ನಿರ್ಧಾರ ಆಶ್ಚರ್ಯಕರವಾಗಿದೆ. ನಾನು ಶಿಸ್ತಿನ ಸಿಪಾಯಿಯಾಗಿದ್ದೇನೆ ಮತ್ತು ಪಕ್ಷವು ನನ್ನಿಂದ ಏನು ಕೇಳುತ್ತದೆಯೋ ಅದನ್ನು ನಾನು ಮಾಡುತ್ತೇನೆ" ಎಂದು ಅಶೋಕ್ ಅವರು ಹೇಳಿದರು. ಶಿವಕುಮಾರ್ ವಿರುದ್ಧ ಗೆಲ್ಲುವ ಸಾಧ್ಯತೆಗಳ ಕುರಿತು ಮಾತನಾಡಿದ ಅಶೋಕ್, ಇಂದಿರಾ ಗಾಂಧಿ, ಬಿ ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ಹೆಚ್ ಡಿ ದೇವೇಗೌಡರಂತಹವರು ರಾಜ್ಯದಲ್ಲಿ ಚುನಾವಣೆಯಲ್ಲಿ ಸೋತಿದ್ದಾರೆ. 'ನಾನು ಹೋರಾಡುತ್ತೇನೆ. ಉಳಿದದ್ದು ವಿಧಿ' ಎಂದು ತಿಳಿಸಿದರು.
ರಾಜ್ಯ ಚುನಾವಣೆ ದಿನಾಂಕ
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದರು.











Click it and Unblock the Notifications