Midday Meal Scheme: ಗಗನಕ್ಕೇರಿದ ತರಕಾರಿ ಬೆಲೆ: ಮಧ್ಯಾಹ್ನದ ಬಿಸಿಯೂಟ ಯೋಜನೆ ಮೇಲೆ ಗಂಭೀರ ಪರಿಣಾಮ- ವರದಿ, ವಿವರ
ಬೆಂಗಳೂರು, ಜುಲೈ 14: ತರಕಾರಿಗಳ ಬೆಲೆ ದಿನೇದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಟೊಮೆಟೊ ಬೆಲೆ ಗಗನಕ್ಕೇರುತ್ತಿದೆ. ಇದು ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರದ ಅಕ್ಷರ ದಾಸೋಹ ಯೋಜನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ವರದಿ ಮಾಡಿದೆ.
ಅಕ್ಷರ ದಾಸೋಹ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸರ್ಕಾರ ನೀಡುತ್ತಿದೆ. ಎನ್‌ಜಿಯೊ ಅಥವಾ ಶಾಲೆಯಲ್ಲಿರುವ ಅಡುಗೆ ಮನೆಗಳ ಮೂಲಕ ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 1,764 ಶಾಲೆಗಳ ಪೈಕಿ 1,495 ಶಾಲೆಗಳಿಗೆ ಎನ್‌ಜಿಒಗಳು ಆಹಾರ ಒದಗಿಸುತ್ತವೆ. 169 ಶಾಲೆಗಳು ಶಾಲಾ ಆವರಣದಲ್ಲಿ ಅಡುಗೆ ಕೋಣೆಗಳನ್ನು ಹೊಂದಿವೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2,241 ಶಾಲೆಗಳ ಪೈಕಿ 1,935 ಶಾಲೆಗಳು ಎನ್‌ಜಿಒಗಳ ಮೂಲಕ ಮಧ್ಯಾಹ್ನದ ಊಟವನ್ನು ವಿತರಿಸುತ್ತಿವೆ. 306 ಶಾಲೆಗಳಲ್ಲಿನ ಅಡುಗೆ ಮನೆಯಲ್ಲಿ ಬಿಸಿಯೂಟವನ್ನು ತಯಾರಿಸಲಾಗುತ್ತದೆ. ಆದ್ದರಿಂದ, ಎರಡೂ ಜಿಲ್ಲೆಗಳ 4,005 ಶಾಲೆಗಳಲ್ಲಿ, 3,430 ಶಾಲೆಗಳು ಎನ್‌ಜಿಒಗಳ ಮೂಲಕ ಮತ್ತು 575 ಶಾಲೆಗಳು ಶಾಲೆಗಳಲ್ಲಿ ಅಡುಗೆ ಕೇಂದ್ರಗಳ ಮೂಲಕ ಮಧ್ಯಾಹ್ನದ ಊಟವನ್ನು ನೀಡುತ್ತವೆ.

ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 120 ರೂಪಾಯಿ ದಾಟಿದೆ. ಬೀನ್ಸ್, ಸೋರೆಕಾಯಿ, ಮೆಣಸಿನಕಾಯಿ, ಇತರ ತರಕಾರಿಗಳು ಮತ್ತು ಕೊತ್ತಂಬರಿ ಸಹ ಹೆಚ್ಚಿನ ಬೆಲೆಯನ್ನು ತಲುಪಿದೆ. ಕೋಳಿ, ಮೊಟ್ಟೆ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದು ಸವಾಲಾಗಿ ಪರಿಣಮಿಸಿದೆ.
ಸರ್ಕಾರವು ಮಧ್ಯಾಹ್ನದ ಊಟದ ಯೋಜನೆಯಡಿ ಶಾಲೆಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುತ್ತದೆ. ತರಕಾರಿ, ಸಾಂಬಾರ್ ಪುಡಿ, ಉಪ್ಪು ಸೇರಿ ಹಲವು ಪದಾರ್ಥಗಳಿಗೆ ಅನುದಾನ ಬಿಡುಗಡೆಯಾಗಿದೆ. 1 ರಿಂದ 5 ನೇ ತರಗತಿಗಳಿಗೆ ಪ್ರತಿ ವಿದ್ಯಾರ್ಥಿಗೆ ರೂ.1.93 ಮತ್ತು 6 ರಿಂದ 10ನೇ ತರಗತಿಗಳ ಪ್ರತಿ ವಿದ್ಯಾರ್ಥಿಗೆ ರೂ. 2.89 ರಷ್ಟನ್ನು ಸರ್ಕಾರ ನೀಡಿದೆ. ಚಿಲ್ಲರೆ ಅಂಗಡಿಗಳಲ್ಲಿ ಮೊಟ್ಟೆಯ ಬೆಲೆ 7 ರಿಂದ 7.5 ರೂ. ಇದೆ. ಆದರೆ ಸರಕಾರ ಪ್ರತಿ ಮೊಟ್ಟೆಗೆ ಕೇವಲ ಐದು ರೂಪಾಯಿ ನೀಡುತ್ತದೆ. ಮೊಟ್ಟೆ ಸಾಗಿಸಲು ಮತ್ತು ಅಡುಗೆ ಮಾಡಲು ಒಂದು ರೂಪಾಯಿ ವಿತರಿಸಲಾಗುತ್ತದೆ.

ಮಧ್ಯಾಹ್ನದ ಬಿಸಿಯೂಟದಲ್ಲಿ ಒಂದರಿಂದ ಐದನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 50 ಗ್ರಾಂ ಪೌಷ್ಟಿಕ ಆಹಾರ ಮತ್ತು ತರಕಾರಿಗಳು ನೀಡಲಾಗುತ್ತಿದೆ. 6 ರಿಂದ 10 ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 75 ಗ್ರಾಂ ನೀಡಲಾಗತ್ತಿದೆ. ಎನ್‌ಜಿಒಗಳ ಮೂಲಕ ನೀಡುವ ಆಹಾರದಲ್ಲಿನ ಪೋಷಕಾಂಶಗಳ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ. ಆದರೆ ಶಾಲೆಯ ಅಡುಗೆ ಕೇಂದ್ರಗಳಲ್ಲಿ ಖರೀದಿಸುವ ತರಕಾರಿ ಮತ್ತು ದಿನಸಿಗಳ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಎಲ್ಲರೂ ವಿಚಾರಿಸುತ್ತಾರೆ. ಹೀಗಾಗಿ ತರಕಾರಿ ಬೆಲೆ ಏರಿಕೆಯಿಂದ ಶಾಲೆಯ ಊಟದ ಪ್ರಮಾಣ ಕಡಿಮೆಯಾಗಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು, ಎನ್‌ಜಿಒಗಳು ತರಕಾರಿಗಳು ಮತ್ತು ದಿನಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದರಿಂದ ಕಡಿಮೆ ಬೆಲೆಗೆ ಪಡೆಯುತ್ತವೆ. ಮಾರುಕಟ್ಟೆಯ ಬೆಲೆ ಏರಿಳಿತಗಳಿಂದ ಎನ್‌ಜಿಒಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಅಡುಗೆ ಕೋಣೆ ಇರುವ ಶಾಲೆಗಳಿಗೆ ಬೆಲೆ ಏರಿಕೆಯಿಂದ ಭಾರಿ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ.
ಬೆಲೆ ಏರಿಕೆಯಿಂದ ಸರಕಾರ ನೀಡಿದ ಮೊತ್ತದಲ್ಲಿ ಅರ್ಧ ಕೆಜಿ ಟೊಮೆಟೊ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಮಧ್ಯಾಹ್ನ ಊಟದ ಉಸ್ತುವಾರಿ ನೋಡಿಕೊಳ್ಳುವ ಸರಕಾರಿ ಶಾಲೆಯ ಶಿಕ್ಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಅಪರ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ಮಾತನಾಡಿ, ಮಾರುಕಟ್ಟೆ ಬೆಲೆ ಆಧರಿಸಿ ಸರಕಾರ ಅನುದಾನ ನೀಡುತ್ತಿಲ್ಲ. ಆದರೂ, ಬೆಲೆ ಏರಿಕೆಯು ಶಾಲಾ ಊಟದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಬೆಲೆ ಏರಿಕೆಯಿಂದ ಖರ್ಚು ನಿರ್ವಹಣೆ ಕಷ್ಟವಾಗಿದ್ದರೂ ಹೆಚ್ಚುವರಿ ಹಣದಲ್ಲಿ ನಿರ್ವಹಣೆ ಮಾಡಲಾಗುವುದು ಎಂದಿದ್ದಾರೆ.












Click it and Unblock the Notifications