Chikkaballapur: ಕೆಂಪೇಗೌಡ ಜಯಂತಿಯಲ್ಲಿ ಹೈಡ್ರಾಮಾ; ಹೆಚ್‌ಡಿಕೆ ವಿರುದ್ಧ ಗುಡುಗಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ಇಂದು ರಣರಂಗವಾಗಿ ಮಾರ್ಪಟ್ಟಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡೆಗೆ ಒಕ್ಕಲಿಗ ಸಮುದಾಯ ಹಾಗೂ ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕರ ಮೇಲೆ ಚಪ್ಪಲಿ ಎಸೆಯಲಾದ ಘಟನೆ ನಡೆದಿದೆ. ಅಷ್ಟೇ ಅಲ್ಲದೆ, ಪ್ರದೀಪ್‌ ಈಶ್ವರ್‌ ಕಾರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಕುಮಾರಣ್ಣನಿಗೆ ಪ್ರದೀಪ್ ಈಶ್ವರ್ ಸವಾಲ್

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ನೇರವಾಗಿಯೇ ಸಮರ ಸಾರಿರುವ ಶಾಸಕ ಪ್ರದೀಪ್ ಈಶ್ವರ್, ಭೂಮಿ ಖರೀದಿಯ ವಿಚಾರವನ್ನು ಮುಂದಿಟ್ಟುಕೊಂಡು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. "ಕುಮಾರಣ್ಣ, 32 ಎಕರೆ ಜಮೀನು ಖರೀದಿಸಲು ನಿಮಗೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು?" ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು. ಇಷ್ಟಕ್ಕೇ ನಿಲ್ಲದ ಶಾಸಕರು, "ಕುಮಾರಣ್ಣ ನಿಂಗೆ ತಾಕತ್ತಿದ್ದರೆ ನೇರವಾಗಿ ಬಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿಂತು ಗೆದ್ದು ತೋರಿಸಿ" ಎಂದು ಬಹಿರಂಗ ಸವಾಲು ಹಾಕಿದ್ದರು. ಶಾಸಕರ ಈ ವಿವಾದಾತ್ಮಕ ಹೇಳಿಕೆಗಳು ಜೆಡಿಎಸ್ ಕಾರ್ಯಕರ್ತರು ಹಾಗೂ ಒಕ್ಕಲಿಗ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು.

Pradeep Eshwar

ಗೇಟ್ ಬೀಗ ಮುರಿದು ಒಳ ನುಗ್ಗಿದ ಯುವಕರು

ಇಂದು ನಗರದ ಕನ್ನಡ ಭವನದಲ್ಲಿ ಸರ್ಕಾರಿ ವತಿಯಿಂದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ, ಅಲ್ಲಿಗೆ ಧಾವಿಸಿದ ಜೆಡಿಎಸ್ ಮುಖಂಡರು ಮತ್ತು ಒಕ್ಕಲಿಗ ಸಮುದಾಯದ ನೂರಾರು ಯುವಕರು ಪ್ರತಿಭಟನೆಗೆ ಮುಂದಾದರು. ಆರಂಭದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಭಟನಾಕಾರರನ್ನು ಪೊಲೀಸರು ಮುಖ್ಯ ಗೇಟ್‌ನಲ್ಲೇ ತಡೆದರು. ಆದರೆ, ಆಕ್ರೋಶಗೊಂಡ ಯುವಕರು ಗೇಟ್ ಬೀಗ ಮುರಿದು ಸಭಾಂಗಣದ ಒಳಗೆ ನುಗ್ಗಿದರು.

ಜನಮೆಚ್ಚಿದ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದು ತಪ್ಪಿಲ್ಲ: ಕಾಂಗ್ರೆಸ್‌ ಸಮರ್ಥನೆ
ಜನಮೆಚ್ಚಿದ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದು ತಪ್ಪಿಲ್ಲ: ಕಾಂಗ್ರೆಸ್‌ ಸಮರ್ಥನೆ

'ಹುಚ್ಚ ಹುಚ್ಚ' ಎಂದು ಘೋಷಣೆ

ವೇದಿಕೆಯ ಮುಂಭಾಗಕ್ಕೆ ಬಂದ ಪ್ರತಿಭಟನಾಕಾರರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶದಿಂದ ಮುಗಿಬಿದ್ದರು. "ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಒಬ್ಬ ಹುಚ್ಚ" ಎಂದು ಘೋಷಣೆ ಕೂಗುತ್ತಾ, ಅವರು ತಕ್ಷಣವೇ ಕುಮಾರಸ್ವಾಮಿ ಅವರ ಕ್ಷಮೆ ಕೇಳಬೇಕು ಮತ್ತು ಕಾರ್ಯಕ್ರಮದಿಂದ ಹೊರಹೋಗಬೇಕು ಎಂದು ಪಟ್ಟು ಹಿಡಿದರು. ಇನ್ನು ರಸ್ತೆಯಲ್ಲಿ ಚಲಿಸುತ್ತಿದ್ದಾಗ ಶಾಸಕರ ಮೇಲೆ ಚಪ್ಪಲಿ ಎಸೆಯಲಾಯಿತು ಎಂದು ವರದಿಯಾಗಿದೆ.

ಕಾರ್ಯಕ್ರಮದಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಪ್ರಭು ಅವರು, "ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು, ಶಾಂತಿ ಕಾಪಾಡಿ" ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಆದರೂ ಗದ್ದಲ ನಿಲ್ಲದಿದ್ದಾಗ ವೇದಿಕೆಯ ಮೇಲಿದ್ದ ಮಂಗಳನಾಥ ಸ್ವಾಮೀಜಿ ಅವರು ಮಧ್ಯಪ್ರವೇಶಿಸಿದರು. ನಾವು ಕೆಂಪೇಗೌಡರ ವಂಶದವರು, ದಯವಿಟ್ಟು ಯಾರೂ ಇಲ್ಲಿ ಕೂಗಾಡಬೇಡಿ. ಸ್ವಾಮೀಜಿ ಮಾತಿಗೆ ಗೌರವ ಕೊಡಿ. ಐದು ನಿಮಿಷಗಳ ಕಾಲ ಮುಖಂಡರ ಜೊತೆ ಚರ್ಚಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳೋಣ" ಎಂದು ಭರವಸೆ ನೀಡಿ ಆಕ್ರೋಶಗೊಂಡಿದ್ದ ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

"ದುಡ್ಡು, ಎಣ್ಣೆಗಾಗಿ ಬಂದ ಚೇಲಾಗಳು" ಎಂದು ಗುಡುಗಿದ ಶಾಸಕ

ತಮ್ಮ ಕಾರಿಗೆ ಮುತ್ತಿಗೆ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿ, ಕ್ಷಮೆಯಾಚನೆಗೆ ಒತ್ತಾಯಿಸಿದ ಪ್ರತಿಭಟನಾಕಾರರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ. "ಇವರೆಲ್ಲ ಹೆಚ್‌ಡಿಕೆ ಚೇಲಾಗಳು, ದುಡ್ಡು ಮತ್ತು ಎಣ್ಣೆಗಾಗಿ ಬಂದು ನನ್ನ ವಿರುದ್ಧ ಇಲ್ಲಿ ಕೂಗಾಡುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ" ಎಂದು ಶಾಸಕರು ತಿರುಗೇಟು ನೀಡಿದ್ದಾರೆ. ಸದ್ಯ ಚಿಕ್ಕಬಳ್ಳಾಪುರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೆಂಪೇಗೌಡ ಜಯಂತಿಯಂತಹ ಸೌಹಾರ್ದಯುತ ಕಾರ್ಯಕ್ರಮ ರಾಜಕೀಯ ಅಖಾಡವಾಗಿ ಮಾರ್ಪಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+