ಜನಮೆಚ್ಚಿದ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದು ತಪ್ಪಿಲ್ಲ: ಕಾಂಗ್ರೆಸ್ ಸಮರ್ಥನೆ
ಕೈವಾರ ತಾತಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ವಾಗ್ವಾದವು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸರ್ಕಾರಿ ಕಾರ್ಯಕ್ರಮವನ್ನು ರಾಜಕೀಯ ವೇದಿಕೆ ಮಾಡಿಕೊಂಡ ವಿಚಾರವಾಗಿ ಪ್ರದೀಪ್ ಈಶ್ವರ್ ಅವರು ಬಿಜೆಪಿ ಬೆಂಬಲಿಗರಿಗೆ ಅವಾಜ್ ಹಾಕಿದ್ದಾರೆ. ಈ ಬಗ್ಗೆ ಬಿಜೆಪಿ ಎಕ್ಸ್‌ನಲ್ಲಿ ಟೀಕಿಸಿತ್ತು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಪ್ರದೀಪ್ ಈಶ್ವರ್ ಅವರ ನಡೆಯನ್ನು ಸಮರ್ಥಿಸಿಕೊಂಡಿದೆ.
ಆಕ್ಸಿಡೆಂಟಲ್ ಎಂಎಲ್‌ಎ ಪ್ರದೀಪ್ ಈಶ್ವರ್ ಅವರೇ ಅಲ್ಲಿ ನಡೆಯುತ್ತಿರುವುದು ಬಿಜೆಪಿ ಕಾರ್ಯಕ್ರಮವೂ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮವೂ ಅಲ್ಲ. ಅಲ್ಲಿ ನಡೆಯುತ್ತಿರುವುದು ಪವಾಡ ಪುರುಷ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ. ನಿಮಗೆ ಅಷ್ಟೊಂದು ಪ್ರಚಾರದ ಗೀಳಿದ್ದರೆ ಮಜಾ ಟಾಕೀಸ್ ಅಥವಾ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಹೋಗಿ. ನಿಮ್ಮ ಪ್ರಚಾರದ ಹಪಾಹಪಿಗಾಗಿ ಪೂಜನೀಯ ಕೈವಾರ ತಾತಯ್ಯ ಅವರ ವೇದಿಕೆಗೆ ಅವಮಾನಿಸಬೇಡಿ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿತ್ತು.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಆಕ್ಸಿಡೆಂಟಲ್ ಅಲ್ಲ ಜನಮೆಚ್ಚಿದ ಶಾಸಕ ಎಂದು ಸಮರ್ಥಿಸಿಕೊಂಡಿದೆ. ಕ್ಷೇತ್ರದ ಜನ ಪಾಳೇಗಾರ ಎಂದು ಮೆರೆಯುತ್ತಿದ್ದ, ನಿಮ್ಮ ಭ್ರಷ್ಟ ಮಾಜಿ ಮಂತ್ರಿಯನ್ನು ಸೋಲಿಸಿ ಮನೆಮಗನ ಕೈ ಹಿಡಿದು ಗೆಲ್ಲಿಸಿದ್ದಾರೆ. ಅಲ್ಲಿ ನಡೆಯುತ್ತಿದ್ದದ್ದು ಬಿಜೆಪಿ ಅಥವಾ ಸಂಘದ ಶಾಖೆಯ ಕಾರ್ಯಕ್ರಮವಲ್ಲ ಬಿಜೆಪಿ ನಾಯಕರ ಗುಣಗಾನ ಮಾಡಲು. ಅದು ಕೈವಾರ ತಾತಯ್ಯನವರ ಜಯಂತಿ, ಸರ್ಕಾರಿ ಕಾರ್ಯಕ್ರಮ ಎಂದು ಟಾಂಗ್ ನೀಡಿದೆ.
ಸರ್ಕಾರಿ ಕಾರ್ಯಕ್ರಮಗಳಿಗೆ ಒಂದು ಶಿಷ್ಟಾಚಾರವಿರುತ್ತದೆ. ಆ ಕನಿಷ್ಟ ಜ್ಞಾನವಿಲ್ಲದೆ, ವೇದಿಕೆಯ ಗೌರವ ಮರೆತು ಯಾರನ್ನೋ ಹೊಗಳಿ ಅಟ್ಟಕೇರಿಸಲು ಹೊರಟರೆ ಸಹಿಸಬೇಕೇ? ಸಹನೆಯ ಕಟ್ಟೆಯೊಡೆದು ಶಾಸಕರಾದ ಪ್ರದೀಪ್ ಈಶ್ವರ್ ಪ್ರಶ್ನಿಸಿ, ಆಕ್ಷೇಪಿಸಿದ್ದಾರೆ. ನಿಮ್ಮ ಪಾಳೇಗಾರಿಕೆ ಕಾಲ ಮುಗಿದಿದೆ, ಈಗಿರುವುದು ಕಾಂಗ್ರೆಸ್ ಆಡಳಿತದ ಪ್ರಜಾಪ್ರಭುತ್ವ ಎಂದು ಕಾಂಗ್ರೆಸ್ ಹೇಳಿದೆ.

ಈ ಕಾರ್ಯಕ್ರಮದಲ್ಲಿದ್ದ ಬಿಜೆಪಿ ಸಂಸದ ಪಿಸಿ ಮೋಹನ್ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರದೀಪ್ ಈಶ್ವರ್ ಅವರನ್ನ ಯಾರೂ ರೊಚ್ಚಿಗೆಬ್ಬಿಸಲಿಲ್ಲ. ಅದು ಸಮುದಾಯದ ಕಾರ್ಯಕ್ರಮ, ನನ್ನ ವೈಯಕ್ತಿಕ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮಕ್ಕೆ ಸರ್ಕಾರದಿಂದಲೇ ನನ್ನ ಹೆಸರನ್ನೂ ಹಾಕಲಾಗಿತ್ತು. ಹಾಗಾಗಿ ನಾನೂ ಭಾಗಿಯಾಗಿದ್ದೆ. ಬಲಿಜ ಸಮುದಾಯದವರು ನನಗೂ ಕೆಲ ಬೇಡಿಕೆ ಸಲ್ಲಿಸಿದರು. ಇದರಲ್ಲಿ ತಪ್ಪೇನಿದೆ? ಬಲಿಜ ಸಮುದಾಯಕ್ಕೆ ಬಿಜೆಪಿ ಸರ್ಕಾರ ಸಾಕಷ್ಟು ಕೊಡುಗೆ ಕೊಟ್ಟಿದೆ. ಆದರೆ ಕಾಂಗ್ರೆಸ್ ಸರ್ಕಾರದಿಂದ ಮೋಸವಾಗಿರುವ ಬಗ್ಗೆ ಸಮುದಾಯಕ್ಕೆ ಬೇಸರವೂ ಇದೆ. ಹಾಗಾಗಿ ಪ್ರದೀಪ್ ಈಶ್ವರ್ ಅವರು ಅಷ್ಟು ಆವೇಶಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರದೀಪ್ ಈಶ್ವರ್ ಅವರು ಇನ್ನೂ ಮೊದಲ ಬಾರಿ ಎಂಎಲ್‌ಎ ಆಗಿದ್ದಾರೆ. ಬಲಿಜ ಸಮುದಾಯಕ್ಕೆ ಅಭಿವೃದ್ಧಿ ಮಂಡಳಿ ಮಾಡಿದ್ದು, ಅದಕ್ಕೆ ಬರಬೇಕಾದ 300 ಕೋಟಿ ಅನುದಾನವನ್ನು ಅವರು ತಕ್ಷಣವೇ ತಂದು ಕೊಡಲಿ ಎಂದು ಸವಾಲ್ ಹಾಕಿದ್ದಾರೆ. ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಿ. ಇದರೊಂದಿಗೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂಪಾಯಿ ಠೇವಣಿಯನ್ನೂ ಇರಿಸಲಿ ಎಂದು ಪಿಸಿ ಮೋಹನ್ ಹೇಳಿದ್ದಾರೆ.











Click it and Unblock the Notifications