Breaking; ಆಸ್ತಿ ಖರೀದಿದಾರರಿಗೆ ಸಿಹಿಸುದ್ದಿ ಕೊಟ್ಟ ಕರ್ನಾಟಕ ಸರ್ಕಾರ
ಬೆಂಗಳೂರು, ಏಪ್ರಿಲ್ 21; ಕರ್ನಾಟಕ ಸರ್ಕಾರ ಆಸ್ತಿ ಖರೀದಿ ಮಾಡುವವರಿಗೆ ಸಿಹಿಸುದ್ದಿ ನೀಡಿದೆ. ಮಾರ್ಗಸೂಚಿ ಬೆಲೆಯಲ್ಲಿ ನೀಡಿದ್ದ ಶೇ 10 ರಿಯಾಯಿತಿಯನ್ನು 24/7/2022ರ ತನಕ ವಿಸ್ತರಣೆ ಮಾಡಲಾಗಿದೆ.
ಕಂದಾಯ ಇಲಾಖೆ ರಾಜ್ಯದಾದ್ಯಂತ ಎಲ್ಲ ಸ್ವತ್ತುಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ ಮಾರ್ಗಸೂಚಿ ಬೆಲೆಯಲ್ಲಿ ಶೇ 10ರ ರಿಯಾಯಿತಿ ಘೋಷಣೆ ಮಾಡಿತ್ತು. 1/1/2022 ರಿಂದ 31/3/2022ರ ತನಕ ಮೂರು ತಿಂಗಳ ಅವಧಿಗೆ ಮೊದಲು ಇದನ್ನು ಘೋಷಣೆ ಮಾಡಲಾಗಿತ್ತು.
ಗುರುವಾರ ಹೊಸ ಆದೇಶ ಹೊರಡಿಸಿದ್ದು ಜನರ ಬೇಡಿಕೆಯಂತೆ ಈ ರಿಯಾಯಿತಿಯನ್ನು ದಿನಾಂಕ 25/4/2022 ರಿಂದ 24/7/2022 ವರೆಗೆ ಮುಂದುವರೆಸಲಾಗುತ್ತದೆ ಎಂದು ತಿಳಿಸಲಾಗಿದೆ.

ಕೋವಿಡ್ ಕಾಲದಲ್ಲಿ ಆದ ನಷ್ಟವನ್ನು ಭರಿಸಲು ಕರ್ನಾಟಕ ಸರ್ಕಾರ ಆಸ್ತಿ ಖರೀದಿಗೆ ಬೆಂಬಲ ನೀಡಿತ್ತು. ಆದ್ದರಿಂದ ಎಲ್ಲಾ ಸ್ವತ್ತುಗಳ ಮಾರಾಟ ಮತ್ತು ಖರೀದಿ ಮಾರ್ಗಸೂಚಿ ದರದಲ್ಲಿ ಕಡಿತಗೊಳಿಸಿ ಜನವರಿಯಲ್ಲಿ ಆದೇಶ ಹೊರಡಿಸಿತ್ತು.
ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಅಪಾರ್ಟ್‌ಮೆಂಟ್, ಕಟ್ಟಡ ಸೇರಿ ವಿವಿಧ ಮಾರಾಟ, ಖರೀದಿಗೆ ಈ ರಿಯಾಯಿತಿ ಅನ್ವಯವಾಗುತ್ತದೆ. ಈಗ ಈ ರಿಯಾಯಿತಿಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.
ಸರ್ಕಾರದ ಈ ತೀರ್ಮಾನದಿಂದ ಮಾರ್ಗಸೂಚಿ ದರ ಇಳಿಕೆಯಾಗಲಿದೆ. ಇದರಿಂದಾಗಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಕಡಿಮೆಯಾಗಲಿದೆ. ಆಸ್ತಿ ಖರೀದಿ ಮಾಡುವವರಿಗೆ ಉಳಿತಾಯವಾಗಲಿದ್ದು, ಆಸ್ತಿ ಖರೀದಿ ಹೆಚ್ಚಾದರೆ ಸರ್ಕಾರಕ್ಕೆ ಆದಾಯವೂ ಹೆಚ್ಚಲಿದೆ.












Click it and Unblock the Notifications