Dharmasthala Case: ಧರ್ಮಸ್ಥಳದಲ್ಲಿ 15 ವರ್ಷದ ಬಾಲಕಿಯ ಶವ ಹೂತಿಟ್ಟ ಪ್ರಕರಣ: ಸ್ಪೋಟಕ ಮಾಹಿತಿ ಬಹಿರಂಗ
ಮಂಗಳೂರು, ಆಗಸ್ಟ್ 06: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿ ಅನಾಮಿಕ ವ್ಯಕ್ತಿ ನೀಡಿದ ದೂರು ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಅನಾಮಿಕ ವ್ಯಕ್ತಿಯ ಗಂಭೀರ ಆರೋಪದ ತನಿಖೆ ತೀವ್ರಗೊಳಿಸಿದ ಎಸ್ಐಟಿ ತಂಡ, ಅನಾಮಿಕ ಗುರುತಿಸಿದ್ದ 13 ಸ್ಥಳಗಳ ಪೈಕಿ 11ನೇ ಪಾಯಿಂಟ್‌ನಲ್ಲಿ ಉತ್ಖನನ ನಡೆಯಲಿದೆ. ಅನಾಮಿಕ ವ್ಯಕ್ತಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ ಬೆನ್ನಲ್ಲೇ ಮತ್ತೊಬ್ಬ ದೂರುದಾರ ಗಂಭೀರ ಆರೋಪ ಮಾಡಿದ್ದು, ಎಸ್‌ಐಟಿ ಮತ್ತಷ್ಟು ತನಿಖೆಯನ್ನ ತೀವ್ರಗೊಳಿಸಿದೆ.
ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಶವವನ್ನು ಹೂತಿಡಲಾಗಿದೆ ಎಂದು ಸಮಾಜ ಸೇವಕ ಜಯಂತ್ ಆರೋಪಿಸಿದ್ದಾರೆ. ಈ ಆರೋಪದ ಮೇರೆಗೆ ಎಸ್ಐಟಿ ಸೂಚನೆ ಮೇರೆಗೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಬಾಲಕಿಯ ಶವವನ್ನು ಹೂತಿಟ್ಟಿರುವ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕ ಎಂ.ಎ.ಸಲೀಂ ಅವರು ಗ್ರಾಮದಲ್ಲಿ ಪ್ರಕರಣ ದಾಖಲಿಸಿಕೊಳ್ಳದೆ ಬಾಲಕಿಯ ಶವವನ್ನು ಹೂತು ಹಾಕಿರುವ ದೂರಿನ ಬಗ್ಗೆಯೂ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

ಆಗಸ್ಟ್ 4 ರಂದು ಧರ್ಮಸ್ಥಳ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ, ಜಯಂತ್ ಎಂಬುವರು 2002 ಮತ್ತು 2003 ರ ನಡುವೆ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ 15 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸದೆ ಮತ್ತು ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಸದೆ ಅದನ್ನು ಆ ಶವವನ್ನು ಹೂತಿಟ್ಟಿದ್ದರು. ಪೊಲೀಸ್ ಅಧಿಕಾರಿಯೊಬ್ಬರು ಇದು ಆತ್ಮಹತ್ಯೆ ಮಾಡಿಕೊಂಡ 40 ವರ್ಷದ ಮಹಿಳೆಯ ಶವ ಎಂದು ಸ್ಥಳೀಯ ಜನರಿಗೆ ತಿಳಿಸಿದ್ದರು ಎಂಬ ಮಾತು ಕೇಳಿ ಬಂದಿದೆ.
ಜಯಂತ್ ಆಗಸ್ಟ್ 2 ರಂದು ತನ್ನ ದೂರನ್ನು ಎಸ್‌ಐಟಿಗೆ ವಹಿಸಿದ್ದರು ಮತ್ತು ಎಸ್‌ಐಟಿ ಪ್ರತಿಯಾಗಿ ಧರ್ಮಸ್ಥಳ ಪೊಲೀಸರನ್ನು ಸಂಪರ್ಕಿಸಲು ಕೇಳಿಕೊಂಡಿತು. ಆಗಸ್ಟ್ 4 ರಂದು ಧರ್ಮಸ್ಥಳ ಪೊಲೀಸರು ದೂರನ್ನು ಅರ್ಜಿಯಾಗಿ ಸ್ವೀಕರಿಸಿದ ನಂತರ, ಸಲೀಂ ಅವರು ಅದನ್ನು ಎಸ್‌ಐಟಿಗೆ ವರ್ಗಾಯಿಸಲು ಆದೇಶಿಸಿದರು.
ಈ ಬಗ್ಗೆ ದೂರುದಾರ ಜಯಂತ್ ಅವರು ಮಾತನಾಡಿ, ಈ ಘಟನೆಗೆ ನಾನೇ ಪ್ರತ್ಯಕ್ಷ ಸಾಕ್ಷಿ. ನನ್ನ ಜೊತೆ ನಾಲ್ಕೈದು ಮಂದಿ ಪ್ರತ್ಯಕ್ಷ ಸಾಕ್ಷಿ ಇದ್ದಾರೆ. ಗೌಪ್ಯತೆ ಕಾಪಾಡೋದಕ್ಕೆ ದೂರು ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಈಗಲೂ ಆ ವ್ಯಕ್ತಿ ಬದುಕಿದ್ದಾರೆ. ಈ ದೂರಿನ ಬಗ್ಗೆ ಎಫ್ಐಆರ್ ದಾಖಲಿಸಿಕೊಳ್ಳಬೇಕು. ಸಂಪೂರ್ಣವಾಗಿ ತನಿಖೆ ಮಾಡಬೇಕು. ಎಫ್ಐಆರ್ ದಾಖಲು ಮಾಡದಿದ್ದರೆ ಎಸ್ಐಟಿ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದು ಹೇಳಿದ್ದಾರೆ.
ಆನಾಮಿಕ ವ್ಯಕ್ತಿ 11ನೇ ಪಾಯಿಂಟ್ ಬದಲಿಗೆ ಸಮೀಪದ ಬಂಗ್ಲ ಗುಡ್ಡದಲ್ಲಿ ಅಗೆಯುವಂತೆ ಅನಾಮಿಕ ವ್ಯಕ್ತಿ ತೋರಿಸಿದ್ದಾನೆ. ಸದ್ಯ ಅನಾಮಿಕ ತೋರಿಸಿದ ಸ್ಥಳದಲ್ಲಿ ಇಡೀ ಮನುಷ್ಯ ಅಸ್ಥಿಪಂಜರ ದೊರಕಿದೆ. ಬಂಗ್ಲ ಗುಡ್ಡದಲ್ಲಿ ಉತ್ಖನನ ಕಾರ್ಯಾಚರಣೆ ಮುಕ್ತಾಗೊಂಡಿದ್ದು, ವ್ಯಕ್ತಿಯೊಬ್ಬನ ಇಡೀ ಅಸ್ಥಿಪಂಜರ ಪತ್ತೆ ಸಿಕ್ಕಿದೆ. ಭೂಮಿಯ ಮೇಲ್ಮೈನಲ್ಲೇ ಅಸ್ಥಿಪಂಜರ ಪತ್ತೆಯಾಗಿದೆ. ಅನಾಮಿಕ ಬೇರೆ ಜಾಗ ತೋರಿಸಿದಾಗ ಇದು ಪತ್ತೆಯಾಗಿದೆ. ಅಸ್ಥಿಪಂಜರದ ಜೊತೆ ಗಂಡಸಿನ ಉಡುಪು, ಹಗ್ಗ ಕೂಡ ಪತ್ತೆಯಾಗಿದೆ. ಅನಾಮಿಕ ವ್ಯಕ್ತಿ ತೋರಿಸಿರುವ ಕಳೇಬರ ಕಳೆದ ಒಂದೂವರೆ ವರ್ಷದ ಹಿಂದೆ ಗಂಡಸು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಅಸ್ಥಿಪಂಜರವಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.












Click it and Unblock the Notifications