ಗೌರಿ ಹತ್ಯೆ ಪ್ರಕರಣ : ಬಂಧಿತನ ಮಂಪರು ಪರೀಕ್ಷೆಗೆ ಎಸ್‌ಐಟಿ ಮನವಿ
ಬೆಂಗಳೂರು, ಮಾರ್ಚ್ 09: ಗೌರಿ ಲಂಕೇಶ್ ಹಂತಕರಿಗೆ ಸಹಾಯ ಮಾಡಿದ್ದಾನೆ ಎಂದು ಅನುಮಾನಿಸಲಾಗಿರುವ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಮಂಪುರು ಪರೀಕ್ಷೆಗೆ ಅವಕಾಶ ಕೊಡಬೇಕು ಎಂದು ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ವಿಶೇಷ ಅನುಮತಿ ಮೇರೆಗೆ ಎಂಟು ದಿನಗಳ ಕಾಲ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದ ಎಸ್‌ಐಟಿ ತಂಡವು ಕೊನೆಯ ದಿನವಾದ ಇಂದು ಆತನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿತು.
ನವೀನ್ ಕುಮಾರ್ ಪದೇ ಪದೇ ತನ್ನ ಹೇಳಿಕೆ ಬದಲಿಸುತ್ತಿದ್ದು, ಸರಿಯಾಗಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿರುವ ಎಸ್‌ಐಟಿ, ನವೀನ್‌ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ಕೊಡಬೇಕೆಂದು ಅರ್ಜಿ ಹಾಕಿದೆ.

ಆದರೆ ನವೀನ್ ಪರ ವಕೀಲರು ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಈಗಾಗಲೇ ಆರೋಪಿಯನ್ನು ಎಂಟು ದಿನಗಳ ಕಾಲ ತನಿಖೆ ಮಾಡಲಾಗಿದೆ. ಆತನಿಗೆ ಸಂಬಂಧವಿಲ್ಲದ ಪ್ರಕರಣದ ಬಗ್ಗೆ ಮಂಪರು ಪರೀಕ್ಷೆ ಮಾಡುವ ಅಗತ್ಯ ಇಲ್ಲ ಎಂದು ವಾದಿಸಿದ್ದಾರೆ. ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 15 ಕ್ಕೆ ಮುಂದೂಡಿದೆ.
ನವೀನ್ ಕುಮಾರ್ ನ ಕರೆ ದಾಖಲೆಗಳು (ಸಿಡಿಆರ್), ಆತ ಕಟ್ಟಿರುವ 'ಹಿಂದೂ ಯುವಸೇನಾ' ಸಂಘಟನೆಯ ಸದಸ್ಯರ ವಿಚಾರಣೆ ನಡೆಸಿರುವ ಎಸ್‌ಐಟಿಯು ಗೌರಿ ಹಂತಕರ ಬಗ್ಗೆ ಈತನಿಗೆ ಖಚಿತ ಮಾಹಿತಿ ಇರುವ ಸಾಧ್ಯತೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಆದರೆ ನವೀನ್ ಕುಮಾರ್ ಗಂಟೆಗೊಮ್ಮೆ ಹೇಳಿಕೆಗಳನ್ನು ಬದಲಿಸುತ್ತಿದ್ದು, ಪೊಲೀಸರ ಮುಂದೆ ಒಪ್ಪಿಕೊಂಡ ಕೃತ್ಯಗಳನ್ನು ನ್ಯಾಯಾಲಯದಲ್ಲಿ ನಕಾರಿಸುತ್ತಿದ್ದಾನೆ ಹಾಗಾಗಿ ಮಂಪರು ಪರೀಕ್ಷೆಗೆ ಮನವಿ ಮಾಡಿದೆ.












Click it and Unblock the Notifications