ಒಂದಂಕಿ ಲಾಟರಿ ಪ್ರಕರಣ: ಪೂರ್ವಾನುಮತಿ ಪಡೆದು ದೋಷಾರೋಪ ಪಟ್ಟಿ ಸಲ್ಲಿಸಲು ಅವಕಾಶ
ಬೆಂಗಳೂರು, ಆಗಸ್ಟ್ 24: ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಕೇಸು ದಾಖಲಿಸಿದ ಆರೋಪ ಸಂಬಂಧ 9 ಆರೋಪಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಬಿಐ ಸಲ್ಲಿಸಿದ್ದ ದಾವೆಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ರದ್ದು ಮಾಡಿದೆ. ಸರ್ಕಾರಿ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ವೇಳೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದ ಅಂಶ ಉಲ್ಲೇಖಿಸಿ ಪ್ರಕರಣ ರದ್ದು ಮಾಡಿದೆ. ಪೂರ್ವಾನುಮತಿ ಪಡೆದು ಅರೋಪಿತರ ವಿರುದ್ಧ ಹೊಸದಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ನ್ಯಾಯಾಲಯ ಸಿಬಿಐಗೆ ಸ್ವತಂತ್ರ ನೀಡಿದೆ.
ಇದರಿಂದಾಗಿ ಸುಳ್ಳು ಕೇಸು ದಾಖಲಿಸಿದ ಆರೋಪಕ್ಕೆ ಗುರಿಯಾಗಿದ್ದ ನಿವೃತ್ತ ಐಜಿಪಿ ಪದ್ಮನಯನ, ಇನ್‌ಸ್ಪೆಕ್ಟರ್ ಕನಕಲಕ್ಷ್ಮೀ, ಜಿ.ಟಿ. ರಾಮಸ್ವಾಮಿ, ವೇಣುಗೋಪಾಲ್, ಶ್ರೀಕಂಠ ರಂಗನಾಥ್, ರವಿ ಪ್ರಕಾಶ್, ತಿಪ್ಪೇಸ್ವಾಮಿ, ರವಿಕುಮಾರ್ ಹಾಗೂ ಲೋಕೇಶ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಒಂದಂಕಿ ಲಾಟರಿ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ದೊಡ್ಡ ಸದ್ದು ಮಾಡಿತ್ತು. ಕಿಂಗ್ ಪಿನ್ ಪಾರಿರಾಜನ್ ಜತೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ದಾಖಲಿಸಿದ್ದ ಪ್ರಕರಣನ್ನು ಸಿದ್ದರಾಮಯ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು.

ಪ್ರಕರಣ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಕಿಂಗ್ ಪಿನ್ ಪಾರಿರಾಜನ್, ನಿವೃತ್ತ ಎಸ್ಪಿ ಧರಣೀಂದ್ರ ಅವರಿಗೆ ಕ್ಲೀನ್ ಚೀಟ್ ಕೊಟ್ಟಿತ್ತು. ಬದಲಿಗೆ ಸುಳ್ಳು ಪ್ರಕರಣ ದಾಖಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ 9 ಪೊಲೀಸ್ ಅಧಿಕಾರಿಗಳ ವಿರುದ್ಧ ವೇ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯಕ್ಕೆ 9 ಆರೋಪಿತ ಸರ್ಕಾರಿ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು.
ಸಿಬಿಐ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಅರೋಪಿತ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ತಾಂತ್ರಿಕ ಕಾರಣ ನೀಡಿ ಪ್ರಕರಣ ರದ್ದು ಕೋರಿದ್ದು, ಒಂದು ವೇಳೆ ಆರೋಪಿತ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಪುನಃ ದೋಷಾರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಅವಕಾಶ ನೀಡಿದೆ. ಹೀಗಾಗಿ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದ್ದರೂ, ಭವಿಷ್ಯದಲ್ಲಿ ಸಂಕಷ್ಟ ಎದುರಾದರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications