'ಸಿದ್ದರಾಮಯ್ಯ ಅವರ ನಿಜವಾದ ಮುಖವಾಡ ಬಯಲಾಗಿದೆ'
ಬೆಂಗಳೂರು, ಮೇ 28: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿ ಮೌಲ್ಯದ ಬೃಹತ್ ಭ್ರಷ್ಟಾಚಾರವನ್ನ ಅಧಿಕಾರಿ ತಲೆಗೆ ಕಟ್ಟಲು ಹೋಗಿ ಕಿರುಕುಳ ನೀಡಿದ್ದರಿಂದ ಆತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವಂತೆ ಸರ್ಕಾರ ಮಾಡಿದೆ. ಸಿದ್ದರಾಮಯ್ಯ ಅವರ ನಿಜವಾದ ಮುಖವಾಡ ಬಯಲಾಗಿದೆ. ಈ ಸರಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಹೋಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದ ಸಚಿವ ನಾಗೇಂದ್ರ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಈ ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿ ರಾಜ್ಯ ಮತ್ತು ರಾಜ್ಯದ ಜನತೆಯನ್ನು ಬಲಿ ಪಡೆಯುತ್ತಿದೆ. ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯಾಗಿದ್ದ ಚಂದ್ರಶೇಖರ್ ಅವರು ಈ ಸರಕಾರದ ಭ್ರಷ್ಟಾಚಾರದ ಬಲಿಪಶುವಾಗಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

ತಮ್ಮ ಡೆತ್ ನೋಟ್‍ನಲ್ಲಿ ನಿಗಮದ ಎಂ.ಡಿ. ಪದ್ಮನಾಭ, ಇನ್ನೊಬ್ಬ ಅಧಿಕಾರಿ ಹೆಸರನ್ನು ಬರೆದಿದ್ದು, ಈ ಇಲಾಖೆಯ ಸಚಿವರ ಮೌಖಿಕ ಆದೇಶದ ಪ್ರಕಾರ ಇಷ್ಟೆಲ್ಲ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ. ತಮಗೆ ಬೆದರಿಕೆ ಒಡ್ಡಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಪರಿಶಿಷ್ಟ ಪಂಗಡದ ಬಡವರಿಗೆ ಸೇರಬೇಕಿದ್ದ 187 ಕೋಟಿ ರೂಪಾಯಿಗಳನ್ನು ಮಾನ್ಯ ಸಚಿವರು, ನಿಗಮದ ಎಂ.ಡಿ. ಮತ್ತು ಅಧಿಕಾರಿಗಳು ಸೇರಿ ನಕಲಿ ಖಾತೆ ತೆರೆದು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾಗಿ ಹೇಳಿದ ಅವರು, ಭ್ರಷ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಕನ್ನಡಿ ಬೇರೆ ಬೇಕಿಲ್ಲ ಎಂದು ತಿಳಿಸಿದರು.
ಹಿಂದೆ ಈಶ್ವರಪ್ಪನವರ ಮೇಲೆ ಇದೇರೀತಿಯ ಆರೋಪ ಬಂದಿತ್ತು. ಅಲ್ಲಿ ಮೃತನ ಕೈಬರಹ ಇರಲಿಲ್ಲ. ಇಲ್ಲಿ ನೇಣಿಗೆ ಶರಣಾದ ಚಂದ್ರಶೇಖರ್ ತನ್ನ ಹಸ್ತಾಕ್ಷರದಲ್ಲಿ ಇಲಾಖೆಯ ಸಚಿವರನ್ನು ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯನವರು ಇಷ್ಟರೊಳಗೆ ನಾಗೇಂದ್ರರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ಅವತ್ತು ಕೇವಲ 9 ಕೋಟಿ ರೂ. ಆರೋಪಕ್ಕೆ ಸಂಬಂಧಿಸಿ ಈಶ್ವರಪ್ಪನವರ ರಾಜೀನಾಮೆಗೆ ಗಂಟಲು ಕಿರುಚಿಕೊಂಡ ಸಿದ್ದರಾಮಯ್ಯನವರು ಈಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಆತ್ಮಹತ್ಯೆಗೆ ದುಷ್ಪ್ರೇರಣೆ ಕೊಟ್ಟ ಸಂಬಂಧ ಸಚಿವರ ಹೆಸರನ್ನು ಎಫ್‍ಐಆರ್ ಅಡಿಯಲ್ಲಿ ಸೇರಿಸಬೇಕು; ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಒತ್ತಾಯಿಸಿದರು. ಕೂಡಲೇ ಮೃತರ ಕುಟುಂಬಕ್ಕೆ ರಕ್ಷಣೆ ಕೊಡಬೇಕು. ಭ್ರಷ್ಟಾಚಾರದಿಂದ ಒಂದು ಬಲಿ ಪಡೆದುದಾಗಿ ಕುಟುಂಬದ ಮುಂದೆ ಇಡೀ ಸಚಿವ ಸಂಪುಟ ಕ್ಷಮೆ ಯಾಚಿಸಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ನಿಜವಾದ ಮುಖವಾಡ ಬಯಲಾಗಿದೆ. ಈ ಸರಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಹೋಗಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಇದನ್ನು ತೀಕ್ಷ್ಣವಾಗಿ ಪರಿಗಣಿಸಲಿದೆ. ಸಚಿವರು ರಾಜೀನಾಮೆ ಕೊಡುವವರೆಗೆ ಹೋರಾಟ ಮಾಡಲಿದ್ದೇವೆ. ಈ ಸರಕಾರದ ಭ್ರಷ್ಟಾಚಾರಕ್ಕೆ ಚಂದ್ರಶೇಖರ್ ಅವರು ಮೊದಲ ಬಲಿ ಎಂದು ತಿಳಿಸಿದರು.












Click it and Unblock the Notifications