Government Employees: 7ನೇ ವೇತನ ಆಯೋಗದಡಿ ಸಂಬಳ ಪರಿಷ್ಕರಣೆ: ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು, ಫೆಬ್ರವರಿ 17: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಏಳನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ವರದಿ ಸ್ವೀಕರಿಸಿದ ನಂತರ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಈ ಕುರಿತು ಬಜೆಟ್‌ ಮಂಡಿಸಿದ ಅವರು, ಆಡಳಿತ ಸುಧಾರಣೆ ಒಂದು ನಿರಂತರ ಪ್ರಕ್ರಿಯೆಯಾಗಿದೆ. ಆಡಳಿತ ಸುಧಾರಣಾ ಆಯೋಗ-2 ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ಬಗ್ಗೆ ಸಲ್ಲಿಸಿರುವ ವರದಿಗಳನ್ನು ಪರಿಶೀಲಿಸಿ, ಅವುಗಳ ಅನುಷ್ಠಾನದ ಕುರಿತು ಪರಿಶೀಲಿಸಲು ಸರ್ಕಾರ ಆಡಳಿತ ಸುಧಾರಣಾ ಆಯೋಗವನ್ನು ರಚಿಸಿದೆ. ಈ ಆಯೋಗವು ಆಡಳಿತ ಸುಧಾರಣಾ ಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡಲಿದೆ.

Siddaramaiahs reaction on 7th Pay Commission salary revision

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ವಿವಿಧ ಕಾನೂನಿನಡಿಯಲ್ಲಿ 7,214 ಸಂಸ್ಥೆಗಳ ಶಾಸನಬದ್ಧ ಲೆಕ್ಕಪರಿಶೋಧಕರಾಗಿರುತ್ತದೆ. ಈ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಏಕರೂಪತೆಯನ್ನು ತರಲು ಲೆಕ್ಕಪರಿಶೋಧನಾ ಕಾಯ್ದೆಯನ್ನು ಜಾರಿಗೆ ತರಲಾಗುವುದು.

ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲುಗಳಿಗೆ ನೇರ ಪರಿಹಾರ ಒದಗಿಸುವ ದೃಷ್ಟಿಯಿಂದ ಜನಸ್ಪಂದನ ಕಾರ್ಯಕ್ರಮವನ್ನು ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ಆಯೋಜಿಸಲಾಗುತ್ತಿದೆ. ಈವರೆಗೆ ರಾಜ್ಯಮಟ್ಟದ ಎರಡು ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಒಟ್ಟಾರೆ 18,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮೊದಲ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅಹವಾಲುಗಳ ಪೈಕಿ ಶೇ.94ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಎರಡನೇ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅಹವಾಲುಗಳನ್ನೂ ಸಹ ನಿಗದಿತ ಕಾಲಮಿತಿಯಲ್ಲಿ ಬಗೆಹರಿಸಲಾಗುವುದು.

Siddaramaiahs reaction on 7th Pay Commission salary revision

ಇ-ಆಡಳಿತ

ನಮ್ಮ ಸರ್ಕಾರವು ತಂತ್ರಜ್ಞಾನ ಬಳಕೆಯ ಮೂಲಕ ನಾಗರಿಕರಿಗೆ ಸರ್ಕಾರದ ಸೇವೆಗಳನ್ನು ಸುಲಭವಾಗಿ, ಪರಿಣಾಮಕಾರಿಯಾಗಿ ಹಾಗೂ ಪಾರದರ್ಶಕವಾಗಿ ಒದಗಿಸಲು ಮತ್ತು ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯಗಳು ಸಕಾಲದಲ್ಲಿ ತಲುಪುವುದನ್ನು ಖಾತರಿಪಡಿಸಲು ಆದ್ಯತೆ ನೀಡುತ್ತದೆ. ಕುಟುಂಬ ದತ್ತಾಂಶದ ಮೂಲಕ ರಾಷ್ಟ್ರದ ಅತಿದೊಡ್ಡ ಜನಕಲ್ಯಾಣ ಕಾರ್ಯಕ್ರಮಗಳಾದ ೫ ಗ್ಯಾರಂಟಿ ಯೋಜನೆಗಳನ್ನು ಕೇವಲ 3 ತಿಂಗಳಲ್ಲಿ 5 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ತಲುಪಿಸಲು ಸಾಧ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ 36,000 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಈ ತಂತ್ರಾಂಶವನ್ನು ಇನ್ನಷ್ಟು ಬಲಪಡಿಸಲು ಆದ್ಯತೆ ನೀಡಲಾಗುವುದು.

ವಿವಿಧ ಫಲಾನುಭವಿ-ಆಧಾರಿತ ಯೋಜನೆಗಳ ಅಡಿಯಲ್ಲಿ ನಗದು ವರ್ಗಾವಣೆಯನ್ನು ರಾಜ್ಯ ಡಿ.ಬಿ.ಟಿ. ವೇದಿಕೆಯ ಮೂಲಕ ಜಾರಿಗೊಳಿಸಲಾಗುತ್ತಿದೆ. ಫಲಾನುಭವಿಗಳಿಗೆ ನೀಡುತ್ತಿರುವ ನಗದುರಹಿತ ಪ್ರಯೋಜನಗಳನ್ನೂ ಸಹ ಹಂತ ಹಂತವಾಗಿ ರಾಜ್ಯ ಡಿ.ಬಿ.ಟಿ. ವೇದಿಕೆಯ ಅಡಿಯಲ್ಲಿ ತರಲಾಗುವುದು.

ಕಾಮಗಾರಿಗಳ ಆರ್ಥಿಕ ಹಾಗೂ ಭೌತಿಕ ಪ್ರಗತಿಯನ್ನು ಮೇಲ್ವಿಚಾರಣೆ ನಡೆಸಲು ಹಾಗೂ ಪಾರದರ್ಶಕತೆ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ವೇದಿಕೆ 2.0 ರಲ್ಲಿ ಗುತ್ತಿಗೆ ನಿರ್ವಹಣಾ ಮಾಡ್ಯೂಲ್ ಅನ್ನು (Contract Management Module) ಹಂತ ಹಂತವಾಗಿ ಎಲ್ಲಾ ಇಲಾಖೆಗಳಿಗೆ ವಿಸ್ತರಿಸಲಾಗುವುದು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಮತ್ತು ಉದ್ಯೋಗಾವಕಾಶಗಳನ್ನು ಸಮರ್ಥವಾಗಿ ಒದಗಿಸಿ, ಅವರ ಭವಿಷ್ಯದ ಯಶಸ್ಸನ್ನು ಪ್ರೋತ್ಸಾಹಿಸಲು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾವಾರಿಧಿ ಎಂಬ ಸಮಗ್ರ ದತ್ತ-ಸಂಚಯವನ್ನು ನಿರ್ಮಿಸಲಾಗುವುದು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ / ಮಿಷನ್ ಲರ್ನಿಂಗ್ ಆಧಾರಿತ ತಂತ್ರಾಂಶಗಳನ್ನು ಬಳಸಿಕೊಂಡು ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆರ್ಟಿಫಿಶಿಯಲ್ ಇಂಟಲಿಜೆನ್ಸ್ / ಮಿಷನ್ ಲರ್ನಿಂಗ್ ಆಡಳಿತ ಘಟಕವನ್ನು ಸ್ಥಾಪಿಸಲಾಗುವುದು.

ಐ.ಸಿ.ಟಿ ಮೂಲಸೌಕರ್ಯ ಮತ್ತು ದತ್ತ ಸಂಗ್ರಹಣೆಗೆ ಸಂಬಂಧಿಸಿದ ಸೈಬರ್ ದಾಳಿಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪ್ರಸ್ತುತ ಇರುವ Security Operation Center ಅನ್ನು ಉನ್ನತೀಕರಿಸಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಸರ್ಕಾರಿ ದತ್ತಾಂಶಗಳನ್ನು ಕಡ್ಡಾಯವಾಗಿ Security Operation Center ಸಂಸ್ಥೆಯ ಮೂಲಕ ನಿರ್ವಹಿಸಲು ಕ್ರಮವಹಿಸಲಾಗುವುದು. ಸಕಾಲದಲ್ಲಿ ಪ್ರಸ್ತುತ ಒಟ್ಟು 922 ನಾಗರಿಕರ ಸೇವೆಗಳಿದ್ದು, ಅವುಗಳ ಪೈಕಿ 493 ಸೇವೆಗಳನ್ನು ಸೇವಾ ಸಿಂಧು ಪೋರ್ಟಲ್ಗೆ ಸೇರಿಸಲಾಗಿದೆ. ಉಳಿದ 429 ಸೇವೆಗಳನ್ನು ಸೇವಾ ಸಿಂಧುಗೆ ಹಂತ ಹಂತವಾಗಿ ಸೇರಿಸಲು ಉದ್ದೇಶಿಸಲಾಗಿದೆ.

ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಜವಾಬ್ದಾರಿ ಹೆಚ್ಚಿಸುವ ನಿಟ್ಟಿನಲ್ಲಿ ಇ-ಕಛೇರಿ ತಂತ್ರಾಂಶದ ಅನುಷ್ಠಾನವನ್ನು ಸರ್ಕಾರದ ಗ್ರಾಮ ಪಂಚಾಯತ್ ಮಟ್ಟದವರೆಗಿನ ಎಲ್ಲಾ ಕಛೇರಿಗಳಿಗೆ ವಿಸ್ತರಿಸಲಾಗುವುದು. ಕನ್ನಡ ಭಾಷೆಯ ಭಾಷಾಂತರದಲ್ಲಿ ಉಂಟಾಗುವ ಅಡೆತಡೆಗಳನ್ನು ನಿವಾರಿಸಲು ಮತ್ತು ಎಲ್ಲಾ ಕನ್ನಡಿಗರಿಗೆ ಹಾಗೂ ಕನ್ನಡೇತರರಿಗೆ ಸಹಾಯವಾಗುವಂತೆ ಕನ್ನಡ ಕಸ್ತೂರಿ ಎಂಬ ಯಂತ್ರಾನುವಾದ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+