ಡಿಕೆಶಿ ಸಿ.ಎಂ ಕನಸಿಗೆ ಸಿದ್ದು ಆಪ್ತರದ್ದೇ ತಲೆನೋವು
ಮೈಸೂರು ಅಭಿವೃದ್ಧಿ ಪ್ರಾಧಿಕಾರಿದಿಂದ ಬದಲಿ ನಿವೇಶನ ಪಡೆದು(ಮುಡಾ) ಸಂಕಷ್ಟ ಎದುರಿಸುತ್ತಿರುವ ಸಿ.ಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಸನ್ನಿಹಿತವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ, ಕಾಂಗ್ರೆಸ್‌ನಲ್ಲಿ ಹಲವರು ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿ ಪಟ್ಟಿಯಲ್ಲಿ ಇದ್ದಾರೆ. ಆದರೆ, ಅದರಲ್ಲಿ ಮೊದಲ ಸಾಲಿನಲ್ಲಿ ಇರುವುದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್. ಆದರೆ, ಡಿ.ಕೆ ಶಿವಕುಮಾರ್ ಅವರ ಸಿ.ಎಂ ಕನಸಿಗೆ ಸಿದ್ದು ಆಪ್ತರದ್ದೇ ಮೊದಲ ಸವಾಲು.
ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನಿಲ್ಲದಂತೆ ಸಂಕಷ್ಟ ಎದುರಿಸುತ್ತಿದ್ದಾರೆ. 40 ವರ್ಷಗಳ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಅವರು ಈ ರೀತಿಯ ಸಂಕಷ್ಟವನ್ನು ಎದುರಿಸಿರಲಿಲ್ಲ ಎಂದೇ ಹೇಳಲಾಗುತ್ತಿದೆ. ಒಂದೊಮ್ಮೆ ಈಗ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ, ಡಿ.ಕೆ ಶಿವಕುಮಾರ್ ಅವರಿಗೇ ಸಿ.ಎಂ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಆದರೆ, ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದಕ್ಕೆ ಇರುವ ಮೊದಲ ಸವಾಲು ಎಂದರೆ ಅದು ಸಿ.ಎಂ ಆಪ್ತ ಬಳಗ. ಸಿ.ಎಂ ಆಪ್ತರ ವಲಯದಲ್ಲಿ ಸಚಿವ ಎಂ.ಬಿ ಪಾಟೀಲ ಸೇರಿದಂತೆ ಹಲವರು ಇದ್ದಾರೆ.

ಸಿ.ಎಂ ಬಣದಲ್ಲಿ (ಆಪ್ತ) ಇರುವ ಪ್ರಮುಖರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಇರುವವರ ಸಂಖ್ಯೆ ದೊಡ್ಡದಿದೆ. ಇದೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ಲಸ್ ಪಾಯಿಂಟ್ಸ್ ಆಗಿದ್ದರೆ, ಡಿ.ಕೆ ಶಿವಕುಮಾರ್ ಅವರಿಗೆ ಮೈನಸ್ ಎಂದು ಹೇಳಬಹುದು. ಸಿದ್ದು ಆಪ್ತ ಬಣದಲ್ಲಿ ಇರುವ ಪ್ರಮುಖರ ವಿವರ ಈ ರೀತಿ ಇದೆ. ಜಮೀರ್ ಅಹ್ಮದ್ ಖಾನ್, ಆರ್‌ಬಿ ತಿಮ್ಮಾಪುರ, ಕೆಜೆ ಜಾರ್ಜ್, ಎಂಬಿ ಪಾಟೀಲ್, ದಿನೇಶ್ ಗುಂಡೂರಾವ್,ಕೆ ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ, ಎನ್ ಚಲುವರಾಯಸ್ವಾಮಿ, ಎಚ್‌ಸಿ ಮಹದೇವಪ್ಪ, ಕೆ ವೆಂಕಟೇಶ್ ಹಾಗೂ ಬೈರತಿ ಸುರೇಶ್ ಸೇರಿದಂತೆ ಹಲವರು ಇದ್ದಾರೆ. ಇನ್ನು ಶಾಸಕರಲ್ಲೂ ಹಲವರು ಸಿದ್ದು ಪರವಾಗಿ ಇದ್ದಾರೆ. ಹೀಗಾಗಿಯೇ ಕಳೆದ ಬಾರಿ ಸಿ.ಎಂ ಆಯ್ಕೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮೇಲುಗೈ ಸಾಧಿಸಿದ್ದರು. ಆದರೆ, ಇದರಲ್ಲೇ ಹಲವರು ಇದೀಗ ತಾವೂ ಸಹ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ, ಮುಂದೆ ಡಿ.ಕೆ ಶಿವಕುಮಾರ್ ಅವರಿಗೂ ಇವರೆಲ್ಲ ಬೆಂಬಲ ಸೂಚಿಸುತ್ತಾರೆಯೇ ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ಕೂಲಿ ಕೊಡಿ ಎಂದು ಕೇಳಿದ್ದ ಡಿ.ಕೆಶಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುಖ್ಯವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಅವಿರತ ಶ್ರಮ ಹಾಕಿದ್ದರು. ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದ ಮೇಲೆ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಷಯ ಗಂಭೀರವಾಗಿ ಚರ್ಚೆಯಾಗಿತ್ತು. ಆಗ ಹೈಕಮಾಂಡ್‌ಗೆ ಡಿ.ಕೆ ಶಿವಕುಮಾರ್ ಅವರು ನಾನು ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ ಅಷ್ಟೇ. ಕೂಲಿ ಕೊಡಿ ಎಂದು ಕೇಳಿದ್ದರು. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ಸಿಗುವ ನಿರೀಕ್ಷೆ ಇದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಹೈಕಮಾಂಡ್‌ನ ನಿರ್ದೇಶನ ಪಾಲಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಹೈಕಮಾಂಡ್ ನೀಡಿದ ಜವಾಬ್ದಾರಿಗಳನ್ನು ಡಿ.ಕೆ ಶಿವಕುಮಾರ್ ಅವರು ಪಾಲಿಸಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಒಂದೊಮ್ಮೆ ಮುಖ್ಯಮಂತ್ರಿ ಬದಲಾವಣೆಯಾದರೆ, ಡಿ.ಕೆ ಶಿವಕುಮಾರ್ ಅವರಿ ಸಿ.ಎಂ ಸ್ಥಾನ ಒಲಿದು ಬರುವ ಸಾಧ್ಯತೆ ಹೆಚ್ಚು ಎಂದೇ ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications